ಮಡಿಕೇರಿ, ನ.2 :ಎಲ್ಲರ ವಿರೋಧದ ನಡುವೆಯೂ ಟಿಪ್ಪು ಜಯಂತಿ ಆಚರಣೆಗೆ ಸರಕಾರ ಮುಂದಾದಲ್ಲಿ ಸ್ವಾಭಿಮಾನಿ ಪ್ರಜ್ಞಾವಂತ ಮಹಿಳಾ ಬಣದ ಮೂಲಕ ಮಹಿಳೆಯರು ರಸ್ತೆಗಿಳಿದು ಹೋರಾಟ ನಡೆಸಬೇಕಾಗುತ್ತದೆ ಎಂದು ಮಾಜಿ ಸಂಸದೆ ಹಾಗೂ ಬಿಜೆಪಿ ನಾಯಕಿ ತೇಜಸ್ವಿನಿ ರಮೇಶ್ ಎಚ್ಚರಿಕೆ ನೀಡಿದ್ದಾರೆ.
ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಈಗಾಗಲೇ 107 ಸೆಕ್ಷನ್‍ನಡಿ ಕೇಸ್ ದಾಖಲಿಸಿಕೊಳ್ಳುವ ಮೂಲಕ ಅಧಿಕಾರವನ್ನು ದುರುಪಯೋಗಪಡಿಸಿ ಕೊಳ್ಳಲಾಗುತ್ತಿದೆ ಎಂದು ಆರೋಪಿಸಿದರು. ಶಸ್ತ್ರಾಸ್ತ್ರಗಳನ್ನು ಹಿಡಿದು ಸಮಾಜಘಾತುಕ ಚಟುವಟಿಕೆ ಗಳಲ್ಲಿ ತೊಡಗಿರುವವರನ್ನು ಮೊದಲು ರಾಜ್ಯ ಸರಕಾರ ಹತ್ತಿಕ್ಕಲಿ ಎಂದು ಒತ್ತಾಯಿಸಿದರು. ಲಾಠಿ, ಬಂದೂಕು ಗಳಿಂದ ಕೊಡಗಿನ ಜನರ ಹೋರಾಟ ವನ್ನು ಹತ್ತಿಕ್ಕಲು ಸಾಧ್ಯವಿಲ್ಲವೆಂದ ಅವರು ಗಡಿಯಲ್ಲಿ ಶತ್ರು ರಾಷ್ಟ್ರದ ವಿರುದ್ಧ ಕೋವಿ ಹಿಡಿದು ಹೋರಾಡುವ ವೀರಪರಂಪರೆಯ ಕೊಡಗಿನ ಜನ ಸ್ವಾಭಿಮಾನಕ್ಕೆ ದಕ್ಕೆ ಬಂದರೆ ಸುಮ್ಮನೆ ಕೂರುವವರಲ್ಲವೆಂದು ಅಭಿಪ್ರಾಯ ಪಟ್ಟರು.
ಅನಗತ್ಯವಾಗಿ ಟಿಪ್ಪು ಜಯಂತಿ ಆಚರಣೆಯನ್ನು ಘೋಷಿಸುವ ಮೂಲಕ ಸರಕಾರ ಪ್ರಚೋದನೆಯನ್ನು ನೀಡುತ್ತಿದೆ ಎಂದು ಆರೋಪಿಸಿದ ಅವರು ಸರಕಾರ ತನ್ನ ನಿರ್ಧಾರದಿಂದ ಹಿಂದಕ್ಕೆ ಸರಿಯದಿದ್ದರೆ ಮಹಿಳೆಯರು ಬೀದಿಗಿಳಿದು ಹೋರಾಟ ನಡೆಸಲಿದ್ದಾರೆ ಎಂದರು. ಜಿಲ್ಲೆಯಲ್ಲಿ ಅನೇಕ ಮೂಲಭೂತ ಸಮಸ್ಯೆಗಳಿದ್ದು, ಯುವ ಸಮೂಹ ಉದ್ಯೋಗವಿಲ್ಲದೆ ಪರಿತಪಿಸುತ್ತಿದೆ. ಕಾವೇರಿ ಹುಟ್ಟುವ ಜಿಲ್ಲೆಯಲ್ಲೇ ಕುಡಿಯುವ ನೀರಿಗೆ ಸಮಸ್ಯೆ ಇದೆ. ವೀರರನಾಡಿನಲ್ಲಿ ಸ್ಮಾರಕ ಮತ್ತು ಮ್ಯೂಸಿಯಂಗಳಿಲ್ಲ, ಪ್ರವಾಸೋದ್ಯಮ ಅಭಿವೃದ್ಧಿಯಾಗಿಲ್ಲ, ಪರಿಸರ ನಾಶದಿಂದ ಮಳೆಯ ಕೊರತೆ ಎದುರಾಗಿದೆ, ಗ್ರಾಮೀಣ ಪ್ರದೇಶದ ಜನರು ಅನೇಕ ಸೌಲಭ್ಯಗಳಿಂದ ವಂಚಿತರಾಗಿ ಕೊರಗುತ್ತಿದ್ದಾರೆ. ಇವುಗಳ ಬಗ್ಗೆ ಕಾಳಜಿ ತೋರದ ಸರಕಾರ ಯಾರೋ ಒಬ್ಬ ಮೂರ್ಖ ಹೇಳಿದ ಕಾರಣಕ್ಕಾಗಿ ಟಿಪ್ಪು ಜಯಂತಿಯನ್ನು ಆಚರಿಸುತ್ತಿದೆ ಎಂದು ಆರೋಪಿಸಿದರು. ಜಿಲ್ಲೆಯಲ್ಲಿ ಟಿಪ್ಪುವಿನಿಂದ ದೇವಾಲಯಗಳು ಭಗ್ನವಾಗಿವೆ, ಮತಾಂತರಗೊಂಡ ಕೊಡವ ಮಾಪಿಳ್ಳೆ ಗಳಿದ್ದಾರೆ. ಕಳೆದ ವರ್ಷ ಜಯಂತಿ ಆಚರಣೆ ಸಂದರ್ಭ ಅಹಿತಕರ ಘಟನೆ ನಡೆದು ಕುಟ್ಟಪ್ಪ ಅವರ ಬಲಿದಾನ ವಾಗಿದೆ. ಆದರೆ ಸರಕಾರ ಕುಟ್ಟಪ್ಪ ಅವರು ಕಾಲು ಜಾರಿ ಬಿದ್ದು ಮೃತಪಟ್ಟರು ಎಂದು ಹೇಳಿಕೆ ನೀಡಿತು. ಇತ್ತೀಚೆಗೆ ಆರ್‍ಎಸ್‍ಎಸ್ ಕಾರ್ಯಕರ್ತ ರುದ್ರೇಶ್ ಹತ್ಯೆ ನಡೆದಾಗ ವ್ಯವಹಾರಿಕ ವಿಚಾರವಾಗಿ ನಡೆದಿದೆ ಎನ್ನುವ ಹಾರಿಕೆಯ ಉತ್ತರವನ್ನು ಸರಕಾರ ನೀಡಿತ್ತು. ಆದರೆ ಈ ಎರಡೂ ಸಾವಿನ ಹಿಂದೆ ಕುಕೃತ್ಯ ನಡೆಸುವ ತರಬೇತಿ ಹೊಂದಿರುವ ಸಮಾಜ ಘಾತುಕ ಸಂಘಟನೆಗಳ ಪಾತ್ರವಿದೆ ಎಂದು ತೇಜಸ್ವಿನಿ ಆರೋಪಿಸಿದರು.
ಟಿಪ್ಪು ಜಯಂತಿ ಆಚರಣೆಯಿಂದ ನಡೆಯುವ ಘಟನಾವಳಿಗಳು ಬೇರೆಯದೇ ತಿರುವು ಪಡೆಯುವ ಸಾಧ್ಯತೆಗಳಿರುವದರಿಂದ ಮುಖ್ಯಮಂತ್ರಿ ಗಳು ತಮ್ಮ ಮೊಂಡುತನವನ್ನು ಮತ್ತು ಓಟ್ ಬ್ಯಾಂಕ್ ರಾಜಕಾರಣವನ್ನು ಬಿಡಲಿ ಎಂದು ಒತ್ತಾಯಿಸಿದರು. ರಾಜ್ಯ ಸರಕಾರದ ನಿರ್ಧಾರ ಸಮಾಜ ಘಾತುಕ ಶಕ್ತಿಗಳಿಗೆ ಪ್ರಚೋದನೆ ನೀಡುತ್ತಿದೆ ಎಂದು ಟೀಕಿಸಿದ ಅವರು ಟಿಪ್ಪು ಜಯಂತಿ ಆಚರಣೆಯನ್ನು ಕೈಬಿಡದಿದ್ದಲ್ಲಿ ಸ್ವಾಭಿಮಾನಿ ಪ್ರಜ್ಞಾವಂತ ಮಹಿಳಾ ಬಣದಿಂದ ರಸ್ತೆಗಿಳಿದು ಹೋರಾಟ ನಡೆಸಲು ನಿರ್ಧಾರ ಕೈಗೊಳ್ಳಲಾಗಿದೆ ಎಂದರು.
ಸುದ್ದಿಗೋಷ್ಠಿಯಲ್ಲಿ ಜಿಲ್ಲಾ ಬಿಜೆಪಿ ಪ್ರಧಾನ ಕಾರ್ಯದರ್ಶಿ ಕಾಂತಿ ಸತೀಶ್, ಪ್ರಮುಖರಾದ ಗೀತಾಪವಿತ್ರ, ಸುಮಿ ಸುಬ್ಬಯ್ಯ ಹಾಗೂ ಶಶಿಕಲಾ ಭಾಸ್ಕರ್ ಉಪಸ್ಥಿತರಿದ್ದರು.