ಶ್ರೀಮಂಗಲ, ನ. 2: ತಾ.10 ರಂದು ಟಿಪ್ಪು ಜಯಂತಿ ಆಚರಣೆ ದಿನ ಪೊನ್ನಂಪೇಟೆÀಯಿಂದ ತಾಲೂಕು ಕೇಂದ್ರ ವೀರಾಜಪೇಟೆವರೆಗೆ ಟಿಪ್ಪು ಜಯಂತಿಯನ್ನು ವಿರೋಧಿಸಿ, ಮಹಿಳೆಯರು ಸೇರಿದಂತೆ ಹೆಚ್ಚಿನ ಸಂಖ್ಯೆಯಲ್ಲಿ ಪಾದಯಾತ್ರೆ ಕೈಗೊಳ್ಳಲು ವಿವಿಧ ಸಂಘಟನೆಗಳು ನಿರ್ಧರಿಸಿವೆ ಎಂದು ವಿಶ್ವಾಸನೀಯ ಮೂಲಗಳು ತಿಳಿಸಿವೆ.
ಈ ಬಗ್ಗೆ ಪೊನ್ನಂಪೇಟೆ ಕೊಡವ ಸಮಾಜದಲ್ಲಿ ಮಂಗಳವಾರ ರಾತ್ರಿ ಗೌಪ್ಯ ಸಭೆ ನಡೆದಿದೆ. ಈ ಸಭೆಯಲ್ಲಿ ಪೊನ್ನಂಪೇಟೆ ಕೊಡವ ಸಮಾಜ, ಪೊನ್ನಂಪೇಟೆ ಕೊಡವ ಹಿತರಕ್ಷಣಾ ಬಳಗ, ಪೊನ್ನಂಪೇಟೆ ಕರ್ನಾಟಕ ರಕ್ಷಣಾ ವೇದಿಕೆ, ಪೊನ್ನಂಪೇಟೆಯ ಎಸ್.ಎನ್.ಡಿ.ಪಿ ಶಾಖೆ, ವಿವಿಧ ಮಹಿಳಾ ಸಂಘಟನೆಗಳು, ಬೆಸಗೂರಿನ ಮಹಾದೇವ ಯುವಕ ಸಂಘ, ಕಿರುಗೂರು ಗ್ರಾಮದ ಮಹಾದೇವ ಯುವಕ ಸಂಘ, ಹುದಿಕೇರಿಯ ಯುವಕ ಸಂಘ, ಬಲ್ಯಮಂಡೂರು ಗ್ರಾಮದ ಮಹಾದೇವ ಯುವಕ ಸಂಘ, ಬಾಡಗರಕೇರಿಯ ಮರೆನಾಡ್ ಸ್ಪೋಟ್ರ್ಸ್ ಕ್ಲಬ್, ಬೆಕ್ಕೆಸೊಡ್ಲೂರುವಿನ ಸ್ಪೋಟ್ರ್ಸ್ ಕ್ಲಬ್ ಹಾಗೂ ಇತರ ಸಂಘಟನೆಗಳು ಪಾಲ್ಗೊಂಡು ಪಾದಯಾತ್ರೆಗೆ ಬೆಂಬಲ ವ್ಯಕ್ತಪಡಿಸಿದವು.
ಕಳೆದ ವರ್ಷ ಟಿಪ್ಪು ಜಯಂತಿ ಸಂದರ್ಭ ದುಷ್ಕರ್ಮಿಗಳಿಂದ ಕೊಲೆಯಾಗಿದ್ದ ಆರ್.ಎಸ್.ಎಸ್. ಮುಖಂಡ ಕುಟ್ಟಪ್ಪ ಅವರ ಸಾವು ಕೊಲೆಯಲ್ಲ ಅವರು ಓಡುವಾಗ ಬಿದ್ದು ಸತ್ತರು ಎಂದು ರಾಜ್ಯ ಸರಕಾರ ಸಮರ್ಥಿಸುತ್ತಾ ಬಂದಿತ್ತು. ಆದರೆ ಇದು ಪೂರ್ವಯೋಜಿತ ಕೊಲೆ ಎಂದು ಸೂಕ್ತ ತನಿಖೆಗೆ ಆಗ್ರಹಿಸಿದರೂ ಸರಕಾರ ಇದನ್ನು ಸರಿಯಾಗಿ ತನಿಖೆ ಮಾಡದೆ ಕೊಲೆ ಮಾಡಿದ ದುಷ್ಕರ್ಮಿಗಳನ್ನು ಬಂಧಿಸುವಲ್ಲಿ ವಿಫಲವಾಯಿತು. ಆದರೆ ಕೇಂದ್ರದ ಎನ್.ಐ.ಎ. ತನಿಖಾ ತಂಡ ಕುಟ್ಟಪ್ಪ ಅವರನ್ನು ಪೂರ್ವಯೋಜಿತವಾಗಿ ಕೊಲೆ ಮಾಡಿರುವ ಬಗ್ಗೆ ಬಹಿರಂಗ ಪಡಿಸಿರುವ ವಿಚಾರ ಸಭೆಯಲ್ಲಿ ಚರ್ಚೆಯಾಯಿತು. ಈ ಹಿನ್ನೆಲೆಯಲ್ಲಿ ಕುಟ್ಟಪ್ಪ ಅವರ ಹುತಾತ್ಮ ದಿನವನ್ನು ತಾ. 10 ರಂದು ಆಚರಿಸಲು ಹಾಗೂ ಟಿಪ್ಪು ಜಯಂತಿ ಆಚರಣೆಗೆ ತಡೆ ಮಾಡಲು ಆಗ್ರಹಿಸಿ ಶಾಂತಿಯುತವಾಗಿ ಪಾದಯಾತ್ರೆ ಕೈಗೊಳ್ಳಲು ನಿರ್ಣಯ ಕೈಗೊಳ್ಳಲಾಗಿದೆ ಎಂದು ತಿಳಿದು ಬಂದಿದೆ. ಅಂದು ಪೊನ್ನಂಪೇಟೆ ಕೊಡವ ಸಮಾಜದಿಂದ ಪೂರ್ವಾಹ್ನ 10 ಗಂಟೆಗೆ ಪಾದಯಾತ್ರೆ ಆರಂಭಿಸಲು ನಿರ್ಧರಿಸಲಾಗಿದೆ.
ಇನ್ನೊಂದು ಕಡೆ ಕಾನೂನು ಸುವ್ಯವಸ್ಥೆ ಕಾಪಾಡಲು ಜಿಲ್ಲೆಯಾದ್ಯಂತ ಟಿಪ್ಪು ಜಯಂತಿ ಆಚರಣೆಗೆ ಒಂದು ದಿನ ಮೊದಲು ಅಂದರೆ ತಾ.9 ರಿಂದಲೆ 144 ಸೆಕ್ಷನ್ ಅಡಿ ನಿಷೇಧಾಜ್ಞೆ ಹಾಕಲು ಪೊಲೀಸ್ ಇಲಾಖೆಗೆ ರಾಜ್ಯ ಸರಕಾರ ಸೂಚಿಸಿರುವ ಬಗ್ಗೆ ವಿಶ್ವಾಸನೀಯ ಪೊಲೀಸ್ ಮೂಲಗಳು ತಿಳಿಸಿವೆ.