ಮಡಿಕೇರಿ, ನ. 2: ಸರ್ಕಾರ ಆಚರಿಸಲು ಉದ್ದೇಶಿಸಿರುವ ಟಿಪ್ಪು ಜಯಂತಿಗೆ ವಿರೋಧ ವ್ಯಕ್ತಪಡಿಸಿ ಇಂದು ಕೊಡಗಿನ ಪ್ರಜ್ಞಾವಂತ ಸ್ವಾಭಿಮಾನಿ ಮಹಿಳೆಯರ ಗುಂಪು ಜಿಲ್ಲಾಧಿಕಾರಿ ಕಚೇರಿ ಎದುರು ಪ್ರತಿಭಟನೆ ನಡೆಸಿತು.

ಕೊಡಗಿನ ಶಾಂತಿಪ್ರಿಯ ಜನತೆ ಟಿಪ್ಪುವಿನ ಇತಿಹಾಸವನ್ನು ಕೆಣಕದೆ ಪರಸ್ಪರ ಎಲ್ಲಾ ಜಾತಿ, ಧರ್ಮದ ಜನಾಂಗದವರು ಶಾಂತಿ ಸೌಹಾರ್ದತೆ ಯಿಂದ ಜೀವಿಸುತ್ತಿರಬೇಕಾದರೆ, ರಾಜ್ಯ ಸರ್ಕಾರ ಅನಿರೀಕ್ಷಿತವಾಗಿ ಕಳೆದ ವರ್ಷ ಟಿಪ್ಪು ಜಯಂತಿಯನ್ನು ಆಚರಿಸುವ ಮೂಲಕ ಕೊಡಗಿನಲ್ಲಿ ಅಶಾಂತಿಯ ವಾತಾವರಣ ನಿರ್ಮಾಣ ಮಾಡಿತು ಎಂದು ಪ್ರತಿಭಟನಾಕಾರರು ಆರೋಪಿಸಿದರು. ಪರಸ್ಪರ ಧರ್ಮಿಯರು ಸಂಶಯದಿಂದ ನೋಡುವಂತಹ ಪರಿಸ್ಥಿತಿ ಕೊಡಗಿನಲ್ಲಿ ನಿರ್ಮಾಣವಾಗಿದ್ದು, ಕಳೆದ ಬಾರಿ ಜೀವಗಳು ಕೂಡ ಬಲಿಯಾಗಿವೆ. ಹೀಗಿದ್ದರೂ ಕೂಡಾ ಈ ಬಾರಿ ಟಿಪ್ಪು ಜಯಂತಿ ಆಚರಣೆ ಮಾಡುತ್ತೇವೆಂಬ ದಾಗಿ ಸರ್ಕಾರ ನಿರ್ಧಾರ ಪ್ರಕಟಿಸಿರುವದು ಖಂಡನೀಯ.

ಟಿಪ್ಪು ಜಯಂತಿ ಆಚರಿಸ ಬೇಕೆಂದು ಯಾವದೇ ಪ್ರಜ್ಞಾವಂತ ಮುಸಲ್ಮಾನರು ಕೇಳಲಿಲ್ಲ. ಕಾಂಗ್ರೆಸ್ ಸರ್ಕಾರಕ್ಕೆ ಅಲ್ಪಸಂಖ್ಯಾತರನ್ನು ಓಲೈಸಿಕೊಳ್ಳಬೇಕಾದರೆ, ಅವರಿಗೆ ಸಿಗಬೇಕಾದಂತಹ ಹತ್ತು ಹಲವು ಜನಪರ ಯೋಜನೆಗಳನ್ನು ಕಟ್ಟಕಡೆಯ ವ್ಯಕ್ತಿಯ ತನಕ ತಲಪಿಸಿ ಅವರು ಬದುಕನ್ನು ಹಸನಾಗಿಸಲಿ ಹಾಗೂ ಜಯಂತಿ ಆಚರಿಸಬೇಕಾದರೆ ರಾಷ್ಟ್ರಕಂಡ ಅತ್ಯಂತ ಶ್ರೇಷ್ಠ ವ್ಯಕ್ತಿ ದಿ. ಡಾ. ಅಬ್ದುಲ್ ಕಲಾಂ, ಸಂತ ಶಿಶುನಾಳ ಷರೀಫ್‍ರಂತಹ ಮಹಾನ್ ವ್ಯಕ್ತಿಗಳ ಜಯಂತಿ ಆಚರಿಸಲಿ. ಅದು ಬಿಟ್ಟು ವಿವಾದಿತ ವ್ಯಕ್ತಿ ಟಿಪ್ಪು ಆಚರಣೆ ಬೇಡ ಎಂದು ಪ್ರತಿಭಟನಾಕಾರರು ಆಗ್ರಹಿಸಿದರು. ಪ್ರತಿಭಟನೆಯಲ್ಲಿ ಕಾಂತಿ ಸತೀಶ್, ಗೀತಾ ಪವಿತ್ರ, ಅನಿತಾ ಪೂವಯ್ಯ, ಯಾಲದಾಳು ಪದ್ಮಾವತಿ, ಕವಿತಾ ಪ್ರಭಾಕರ್, ಶಿವಕುಮಾರಿ, ಮೋಂತಿ ಗಣೇಶ್ ಮತ್ತಿತರರು ಪಾಲ್ಗೊಂಡಿದ್ದರು.