ಮಡಿಕೇರಿ, ಜ. 24: ಜನಪದ ಕಾವ್ಯವನ್ನು ಓದುವದರಿಂದ ಸಮಾಜದ ವಿಸ್ತಾರವನ್ನು ಅರಿತುಕೊಳ್ಳಲು ಸಾಧ್ಯವಾಗುವದರಿಂದ ಪ್ರತಿಯೊಬ್ಬರೂ ಜನಪದ ಕಾವ್ಯದ ಬಗ್ಗೆ ಆಸಕ್ತಿ ಹೊಂದಬೇಕು ಎಂದು ಮೈಸೂರು ವಿಶ್ವ ವಿದ್ಯಾನಿಲಯದ ಕುವೆಂಪು ಕನ್ನಡ ಅಧ್ಯಯನ ಕೇಂದ್ರದ ಉಪನ್ಯಾಸಕ ನಂಜಯ್ಯ ಹೊನ್ನೂರು ಕರೆ ನೀಡಿದ್ದಾರೆ.
ಫೀಲ್ಡ್ ಮಾರ್ಷಲ್ ಕಾರ್ಯಪ್ಪ ಕಾಲೇಜಿನ ಕನ್ನಡ ವಿಭಾಗ, ಕನ್ನಡ ಸಂಘ ಹಾಗೂ ಮಂಗಳಗಂಗೋತ್ರಿಯ ಮಹಾಕವಿ ರತ್ನಾಕರ ವರ್ಣಿ ಅಧ್ಯಯನ ಪೀಠದ ವತಿಯಿಂದ ನಡೆದ ಪ್ರಚಾರೋಪನ್ಯಾಸ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಅವರು ಉಪನ್ಯಾಸ ನೀಡಿದರು. ಜನಪದವೆಂದರೆ ಒಂದು ಗುಂಪಿನ ಜೀವನ ಕ್ರಮವಾಗಿದ್ದು, ಜನಪದ ಹಾಗೂ ಜಾನಪದ ಎಂಬದಕ್ಕೆ ತನ್ನದೇ ಆದ ವೈಶಿಷ್ಟ್ಯಗಳಿವೆ ಎಂದರು. ಜಾನಪದೀಯ ನೆಲೆಯಲ್ಲಿ ಮಹಾಕವಿ ರತ್ನಾಕರ ವರ್ಣಿ ಅವರ ಕೊಡುಗೆ ಅಪಾರವೆಂದು ನಂಜಯ್ಯ ಶ್ಲಾಘಿಸಿದರು.
ಜೈನ ಧರ್ಮ ಹಾಗೂ ತುಳುನಾಡಿನಲ್ಲಿ ಜನಪದೀಯ ಸಂಸ್ಕøತಿ ಹೆಚ್ಚು ಪರಿಣಾಮಕಾರಿಯಾಗಿದೆ ಎಂದು ಅಭಿಪ್ರಾಯಪಟ್ಟ ಅವರು, ಈ ಕಲೆಗಳನ್ನು ಸಂರಕ್ಷಿಸುವ ಅಗತ್ಯವಿದೆ ಎಂದರು. ಯುವ ಸಮೂಹ ಪಾಶ್ಚಿಮಾತ್ಯ ಸಂಸ್ಕøತಿಗೆ ಮಾರುಹೋಗದೆ ದೇಶಿಯ ಸಂಸ್ಕøತಿಯನ್ನು ಉಳಿಸಲು ಪ್ರಯತ್ನಿಸಬೇಕೆಂದು ನಂಜಯ್ಯ ಕರೆ ನೀಡಿದರು.
ಮಂಗಳಗಂಗೋತ್ರಿಯ ಸಂಯೋಜಕ ಪ್ರೊ. ಸೋಮಣ್ಣ ಮಾತನಾಡಿ ಕನ್ನಡ ನಾಡಿನ ಶ್ರೀಮಂತ ಸಂಸ್ಕøತಿಯಾದ ಜನಪದ ಕಲೆಯನ್ನು ವಿದ್ಯಾರ್ಥಿಗಳು ಮೈಗೂಡಿಸಿಕೊಳ್ಳಲು ಪ್ರಯತ್ನಿಸಬೇಕೆಂದರು. ಕನ್ನಡ ಭಾಷೆ ಹಾಗೂ ಬರವಣಿಗೆ ಬಗ್ಗೆ ಆಸಕ್ತಿ ತೋರುವ ಮೂಲಕ ಜನಪದ ಸಾಹಿತ್ಯವನ್ನು ಶ್ರೀಮಂತಗೊಳಿಸಲು ಮುಂದಾಗಬೇಕೆಂದು ಕರೆ ನೀಡಿದರು.
ಕಾಲೇಜಿನ ಕನ್ನಡ ವಿಭಾಗದ ಪ್ರಾಧ್ಯಾಪಕ ಡಾ.ಎನ್. ಜಯಂತಿ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದರು.
ಪ್ರಾಂಶುಪಾಲೆ ಡಾ.ಪಾರ್ವತಿ ಅಪ್ಪಯ್ಯ, ಪ್ರಾಧ್ಯಾಪಕ ಡಾ.ಮಾಧವ ಮತ್ತಿತರ ಪ್ರಮುಖರು ಉಪಸ್ಥಿತರಿದ್ದರು.