ಸಿದ್ದಾಪುರ, ಆ. 28: ಗಣೇಶ ಚತುರ್ಥಿ ಹಾಗೂ ಬಕ್ರಿದ್ ಹಬ್ಬದ ಸಂದರ್ಭ ಶಾಂತಿ ಕಾಪಾಡುವಂತೆ ಸಿದ್ದಾಪುರ ಠಾಣಾಧಿಕಾರಿ ಬಿ.ಜಿ. ಕುಮಾರ್ ಮನವಿ ಮಾಡಿದರು.

ಸಿದ್ದಾಪುರ ಗ್ರಾ.ಪಂ. ಸಭಾಂಗಣದಲ್ಲಿ ನಡೆದ ಶಾಂತಿ ಸಭೆಯಲ್ಲಿ ಮಾತನಾಡಿದ ಅವರು, ಗೌರಿ-ಗಣೇಶ ವಿಸರ್ಜನೆಯ ಸಂದರ್ಭ ಡಿ.ಜೆ. ಅಳವಡಿಸಬಾರದು, ವಿಸರ್ಜನೆಗೂ ಮುಂಚಿತವಾಗಿ ಪೊಲೀಸ್ ಠಾಣೆಯಿಂದ ಅನುಮತಿ ಪಡೆಯಬೇಕು. ಗಣೇಶ ಪ್ರತಿಷ್ಠಾಪಿಸುವ ಸ್ಥಳಕ್ಕೆ ಪೊಲೀಸ್ ಠಾಣೆ ಹಾಗೂ ಗ್ರಾ.ಪಂ.ನಿಂದ ಅನುಮತಿ ಪಡೆದು, ರಾತ್ರಿ ವೇಳೆ ಸಂಘಟಕರು ಪ್ರತಿಷ್ಠಾಪನಾ ಸ್ಥಳದಲ್ಲಿ ಇರಬೇಕು. ಎಲ್ಲಾ ಸಮಿತಿಯವರು ಚರ್ಚಿಸಿ ಒಂದೇ ದಿನ ವಿಸರ್ಜನೆ ನಡೆಸಬೇಕೆಂದು ಮನವಿ ಮಾಡಿದರು. ಕಾನೂನು ಉಲ್ಲಂಘಿಸಿದವರ ವಿರುದ್ಧ ಕಟ್ಟುನಿಟ್ಟಿನ ಕ್ರಮ ಕೈಗೊಳ್ಳಲಾಗುವದು ಎಂದು ತಿಳಿಸಿದರು.

ಗಣೇಶ ವಿಸರ್ಜನೆಯ ದಿನದಂದು ವಿದ್ಯುತ್ ಕಡಿತಗೊಳಿಸಬಾರದು ಹಾಗೂ ಕೆಳಮಟ್ಟದಲ್ಲಿ ಹಾದು ಹೋಗಿರುವ ತಂತಿಗಳನ್ನು ಸರಿಪಡಿಸಬೇಕೆಂದು ಸಾರ್ವಜನಿಕರು ವಿದ್ಯುತ್ ಇಲಾಖೆಯ ಇಂಜಿನಿಯರ್ ಬಳಿ ಮನವಿ ಮಾಡಿದರು.

ಈ ಸಂದರ್ಭ ಮಡಿಕೇರಿ ವೃತ್ತ ನಿರೀಕ್ಷಕ ಮೇದಪ್ಪ, ಗ್ರಾ.ಪಂ. ಅಧ್ಯಕ್ಷ ಮಣಿ, ವಿವಿಧ ಗಣೇಶ ಉತ್ಸವ ಸಮಿತಿಗಳ ಪದಾಧಿಕಾರಿಗಳು ಇದ್ದರು.