ಸೋಮವಾರಪೇಟೆ,ಜ.23: ತಾಲೂಕು ಪಂಚಾಯಿತಿಯ ಸಾಮಾನ್ಯ ಸಭೆಯಲ್ಲಿ ಅಸಭ್ಯ ಪದಗಳನ್ನು ಬಳಸಿದ್ದೂ ಅಲ್ಲದೇ, ಹೊರಗೆ ಬಾ ನೋಡಿಕೊಳ್ಳುತ್ತೇನೆ ಎಂದು ಧಮಕಿ ಹಾಕುವ ಮೂಲಕ ಗೂಂಡಾ ಪ್ರವೃತ್ತಿ ಪ್ರದರ್ಶಿಸಿದ ಕಾಂಗ್ರೆಸ್ ಸದಸ್ಯನ ಪರವಾಗಿ ಪಕ್ಷದ ಮುಖಂಡರು ಪ್ರತಿಭಟನೆ ನಡೆಸಿರುವದು ನಾಚಿಕೆಗೇಡಿನ ಸಂಗತಿಯಾಗಿದೆ ಎಂದು ಬಿಜೆಪಿ ಪ್ರಮುಖರು ಟೀಕಿಸಿದ್ದಾರೆ.
ನಗರದ ಪತ್ರಿಕಾಭವನದಲ್ಲಿ ಕರೆಯಲಾಗಿದ್ದ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಜಿಲ್ಲಾ ಬಿಜೆಪಿ ವಕ್ತಾರ ಅಭಿಮನ್ಯುಕುಮಾರ್, ಕಪ್ಪು ಹಣ ಬದಲಾವಣೆ ಪ್ರಕರಣದಲ್ಲಿ ಕಾಂಗ್ರೆಸ್ನ ತಾ.ಪಂ. ಸದಸ್ಯ ಅನಂತ್ಕುಮಾರ್ ಪೊಲೀಸರಿಗೆ ಸಿಕ್ಕಿಬಿದ್ದಿದ್ದು ಇಡೀ ಸಮಾಜಕ್ಕೆ ಗೊತ್ತಿದೆ. ಈ ಬಗ್ಗೆ ಸಭೆಯಲ್ಲಿ ಚರ್ಚೆಯಾಗುತ್ತಿದ್ದ ಸಂದರ್ಭ ಅಪ್ಪ, ಅಮ್ಮ, ಹೆಂಡತಿ ಇತ್ಯಾದಿ ಪದಗಳನ್ನು ಆಕ್ಷೇಪಾರ್ಹ ವಾಗಿ ಬಳಸಿದ್ದೂ ಅಲ್ಲದೇ, ಹೊರಗೆ ಬಾ ನೋಡಿಕೊಳ್ಳುತ್ತೇನೆ ಎಂದು ಬಿಜೆಪಿ ಸದಸ್ಯನಿಗೆ ಧಮಕಿ ಹಾಕಿದ್ದಾರೆ. ಇದಕ್ಕೆ ಸಭೆಯಲ್ಲಿದ್ದವರು ತಕ್ಕ ಉತ್ತರವನ್ನಷ್ಟೇ ನೀಡಿದ್ದಾರೆ ಎಂದರು.
ಸದಸ್ಯ ಅನಂತ್ಕುಮಾರ್ ಅವರನ್ನು ಅಮಾನತು ಮಾಡುವ ದಾಗಲಿ, ಸಭೆಯಿಂದ ಹೊರ ಹಾಕುವದಾಗಲಿ, ಅವರ ಮೇಲೆ ದೌರ್ಜನ್ಯ ಎಸಗುವದಾಗಲಿ ಇಂತಹ ಯಾವದೇ ಕಾರ್ಯಕ್ಕೆ ಬಿಜೆಪಿಯವರು ಮುಂದಾಗಿಲ್ಲ. ಆದರೂ ಸಭೆಯೊಳಗೆ ಗೂಂಡಾ ಪ್ರವೃತ್ತಿ ಪ್ರದರ್ಶನ ಮಾಡಿದ ಅನಂತ್ಕುಮಾರ್ ಪರ ಕಾಂಗ್ರೆಸ್ಸಿಗರು ಪ್ರತಿಭಟನೆ ನಡೆಸಿರುವದು ಹಾಸ್ಯಾಸ್ಪದವಾಗಿದೆ ಎಂದರು.
ಅಂದಿನ ಸಭೆ ಗೊಂದಲದ ಗೂಡಾದ ಸಂದರ್ಭ ಅರ್ಧ ಗಂಟೆಗಳ ಕಾಲ ಸಭೆಯನ್ನು ಮುಂದೂq Àಲಾಗಿತ್ತು. ಈ ಸಂದರ್ಭ ಅನಂತ್ ಅವರು ಬಳಸಿದ ಅವಾಚ್ಯ ಪದಗಳಿಂದ ಗೊಂದಲ ಮತ್ತಷ್ಟು ಹೆಚ್ಚಾಯಿತು. ನಂತರ ಸಭೆ ಪ್ರಾರಂಭವಾದಾಗ ಪಂಚಾಯತ್ ರಾಜ್ ಕಾಯ್ದೆ ಪ್ರಕಾರ ಯಾವದೇ ಒಬ್ಬ ಸದಸ್ಯನ ಬಗ್ಗೆ ಚರ್ಚೆಯಾಗು ವಾಗ ಆ ಸದಸ್ಯ ಸಭೆಯಲ್ಲಿ ಇರಬಾರದು ಎಂಬ ನಿಯಮವಿದೆ. ಇದನ್ನೇ ಅನಂತ್ಕುಮಾರ್ಗೆ ಮನವರಿಕೆ ಮಾಡಿದ ಮೇಲೆ ಅವರೇ ಸಭೆಯಿಂದ ಎದ್ದು ಹೊರ ಹೋಗಿದ್ದಾರೆ. ಯಾರೂ ಸಹ ಅವರನ್ನು ಬಲವಂತವಾಗಿ ತಳ್ಳಿಲ್ಲ ಎಂದು ಸ್ಪಷ್ಟಪಡಿಸಿದರು.
ಕಳೆದ ಅಕ್ಟೋಬರ್ ತಿಂಗಳಲ್ಲಿ ಅನಂತ್ ಕುಮಾರ್ ಅವರು ಚುನಾವಣಾ ಆಯೋಗಕ್ಕೆ ಸಲ್ಲಿಸಿದ ವರದಿಯಲ್ಲಿ ತಮ್ಮ ವಾರ್ಷಿಕ ಆದಾಯ 3.50 ಲಕ್ಷ ಎಂದು ತೋರಿಸಿದ್ದಾರೆ. 12 ಎಕರೆ ಕಾಫಿ ಮತ್ತು ಮೆಣಸಿನ ತೋಟ, 1.50 ಎಕರೆ ಗದ್ದೆ ಇರುವದಾಗಿ ಮಾಹಿತಿ ನೀಡಿದ್ದಾರೆ. ಅದೇ 35 ಲಕ್ಷ ಹಣದೊಂದಿಗೆ ಸಿಕ್ಕಿಬಿದ್ದಾಗ ತಾನು ಕೋಟ್ಯಾಧೀಶ್ವರ ಎಂದು ತಿಳಿಸಿದ್ದಾರೆ. ವಾರ್ಷಿಕ 3.50 ಲಕ್ಷ ಆದಾಯ ಹೊಂದಿರುವವರು ಕೋಟ್ಯಾಧೀಶ್ವರ ಹೇಗೆ ಆಗುತ್ತಾರೆ? ಅಷ್ಟಕ್ಕೂ ನೋಟ್ ಬ್ಯಾನ್ ಆದ ಎರಡು ದಿನಗಳಲ್ಲಿ ದಿನವೊಂದಕ್ಕೆ ಕೇವಲ 4 ಸಾವಿರ ಡ್ರಾ ಮಿತಿಯಿದ್ದರೂ 35ಲಕ್ಷ ಹೊಸ ನೋಟುಗಳು ಹೇಗೆ ಸಿಕ್ಕಿದವು? ತನ್ನ ಮೇಲೆ ಎಫ್ಐಆರ್ ದಾಖಲಾಗಿಲ್ಲ ಎನ್ನುವ ಅನಂತ್ ಕುಮಾರ್ ಅವರನ್ನು ಕಾಂಗ್ರೆಸ್ ಪಕ್ಷವೇ ರಕ್ಷಿಸಿರುವದು ಸ್ಪಷ್ಟವಾಗಿದೆ ಎಂದರು.
ಬಿಜೆಪಿ ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಕೆ. ಲೋಕೇಶ್ ಮಾತನಾಡಿ, ಸುಂಟಿಕೊಪ್ಪ ಸಮೀಪ 35 ಲಕ್ಷ ಹಣದೊಂದಿಗೆ ಪೊಲೀಸರಿಗೆ ಸಿಕ್ಕಿಬಿದ್ದ ವ್ಯಕ್ತಿಯ ಪರ ಹೋರಾಟ ನಡೆಸುವದೇ ಅನರ್ಥಕಾರಿ. ದೇಶದಲ್ಲಿ ಭಯೋತ್ಪಾದನೆ ಹಾಗೂ ಭ್ರಷ್ಟಾಚಾರವನ್ನು ಕಿತ್ತೊಗೆಯಲು ಮೋದಿ ಕಾರ್ಯತಂತ್ರ ರೂಪಿಸು ತ್ತಿದ್ದರೆ, ಈ ದೇಶವನ್ನು ಕಳೆದ ಹಲವು ದಶಕಗಳ ಕಾಲ ಆಳಿದ ಪಕ್ಷದವರು ಕಪ್ಪುಹಣವನ್ನು ಬಿಳಿಮಾಡುವ ದಂಧೆಯಲ್ಲಿ ತೊಡಗಿರುವದು ವಿಪರ್ಯಾಸ ದೇಶದ ಖಜಾನೆಗೆ ಮೋಸ ಮಾಡುವ ಇಂತಹ ದಂಧೆಗಳ ವಿರುದ್ಧ ಹೋರಾಟ ನಡೆಸಲು ಬಿಜೆಪಿಯ ಸದಸ್ಯ ಮಣಿ ಉತ್ತಪ್ಪ ಸೇರಿದಂತೆ ತಾ.ಪಂ.ನ 14 ಮಂದಿ ಸದಸ್ಯರೂ ಕಟಿಬದ್ಧರಾಗಿ ದ್ದಾರೆ. ಮಣಿ ಉತ್ತಪ್ಪ ಅವರ ಬಗ್ಗೆ ಮಾತನಾಡಲು ಕಾಂಗ್ರೆಸ್ನ ಚಂದ್ರಕಲಾ ಅವರಿಗೆ ಯಾವದೇ ನೈತಿಕತೆ ಇಲ್ಲ. ಇಂತಹ ಹೋರಾಟ ಮಾಡುವ ಮೂಲಕ ಕಾಂಗ್ರೆಸ್ ಸಂಸ್ಕøತಿ ಇಡೀ ಸಮಾಜಕ್ಕೆ ಗೊತ್ತು ಮಾಡಿದೆ ಎಂದು ಟೀಕಿಸಿದರು.
ಗೋಷ್ಠಿಯಲ್ಲಿ ಪಕ್ಷದ ತಾಲೂಕು ಅಧ್ಯಕ್ಷ ಕೊಮಾರಪ್ಪ, ಪ್ರಧಾನ ಕಾರ್ಯದರ್ಶಿ ಬಾಬು ರಾಜೇಂದ್ರ ಪ್ರಸಾದ್, ಜಿಲ್ಲಾ ಕಾರ್ಯದರ್ಶಿ ಮನುಕುಮಾರ್ ರೈ, ತಾ.ಪಂ. ಸದಸ್ಯೆ ಪುಷ್ಪಾ ಜನಾರ್ಧನ್, ಯುವ ಮೋರ್ಚಾ ಪ್ರಧಾನ ಕಾರ್ಯದರ್ಶಿ ಕಿಬ್ಬೆಟ್ಟ ಮಧು ಅವರುಗಳು ಉಪಸ್ಥಿತರಿದ್ದರು.