ಸಿದ್ದಾಪುರ, ಜ. 23: ದಿಡ್ಡಳ್ಳಿ ಆದಿವಾಸಿ ನಿರಾಶ್ರಿತರಿಗೆ ತಿಂಗಳುಗಳೇ ಕಳೆದರೂ ಶಾಶ್ವತ ನಿವೇಶನ ದೊರೆಯಲಿಲ್ಲ. ಗುಡಿಸಲು ತೆರವುಗೊಳಿಸಿದ ಸ್ಥಳದಲ್ಲೇ ನಿವೇಶನ ನೀಡಬೇಕೆಂದು ಹಿರಿಯ ಹೋರಾಟಗಾರ ಎ.ಕೆ ಸುಬ್ಬಯ್ಯ ಸರಕಾರವನ್ನು ಒತ್ತಾಯಿಸಿದ್ದಾರೆ.ದಿಡ್ಡಳ್ಳಿ ನಿರಾಶ್ರಿತರ ಸ್ಥಳಕ್ಕೆ ಇಂದು ಭೇಟಿ ನೀಡಿದ ನಂತರ ಮಾತನಾಡಿ, ಈ ಭಾಗದ ಸುತ್ತಮುತ್ತಲಿನಲ್ಲಿ ಸಾಕಷ್ಟು ಕಾಫಿ ತೋಟಗಳು, ಮನೆ, ಆಶ್ರಮ ಶಾಲೆ, ವಿದ್ಯುತ್, ಕುಡಿಯುವ ನೀರು, ರಸ್ತೆ ಸೇರಿದಂತೆ ಎಲ್ಲಾ ಮೂಲ ಸೌಕರ್ಯಗಳು ಇಲ್ಲಿರುವಾಗ ಆದಿವಾಸಿಗಳಿಗೆ ಮಕ್ಕಳ ಮುಂದಿನ ಭವಿಷ್ಯ ಹಾಗೂ ಅವರ ಅಭಿವೃದ್ಧಿಗೆ ದಿಡ್ಡಳ್ಳಿಯೇ ಸೂಕ್ತವಾಗಿದೆ. ಎಲ್ಲಾ ವ್ಯವಸ್ಥೆಗಳು ಇಲ್ಲಿ ಇರುವಾಗ ಅರಣ್ಯ ಪ್ರದೇಶವಾಗಲು ಹೇಗೆ ಸಾಧ್ಯ ಎಂದು ಪ್ರಶ್ನಿಸಿದ ಅವರು, ನಿರಾಶ್ರಿತರಿಗೆ ಇಲ್ಲಿಯೇ ನಿವೇಶನ ಒದಗಿಸಲಿ ಹಾಗೂ ಜಿಲ್ಲೆಯಲ್ಲಿರುವ ಇತರ ನಿವೇಶನ ರಹಿತ ಆದಿವಾಸಿಗಳಿಗೆ ಜಿಲ್ಲೆಯ ವಿವಿಧ ಭಾಗಗಳಲ್ಲಿ ಗುರುತಿಸಿರುವ ಸ್ಥಳಗಳನ್ನು ಅಲ್ಲಿಯ ಸ್ಥಳೀಯ ಆದಿವಾಸಿಗಳಿಗೆ ನೀಡಬೇಕೆಂದರು.

ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಎಲ್ಲಾ ನಿವೇಶನ ರಹಿತರಿಗೂ ಜಾಗ ಸಿಗಬೇಕೆಂದು ಹೋರಾಟ ಮಾಡುತ್ತಿದ್ದು, ಇದನ್ನು ಸಹಿಸದ ಕೆಲವರು ಇಲ್ಲ ಸಲ್ಲದ ಅಪಪ್ರಚಾರ ನಡೆಸಿ ಆದಿವಾಸಿಗಳಿಗೆ ಸಿಗಬೇಕಾದ ಸೌಲಭ್ಯವನ್ನು ಸಿಗದಂತೆ ಮಾಡುತ್ತಿದ್ದಾರೆ ಎಂದು ಹೇಳಿದರು.

ಸರಕಾರ ಆದಿವಾಸಿಗಳಿಗೆ ಸೌಲಭ್ಯ ನೀಡಲು ಮುಂದಾಗಿದ್ದು, ಜಿಲ್ಲೆಯ ಅಧಿಕಾರಿಗಳು ಕೆಲ ಜನಪ್ರತಿನಿಧಿಗಳ ಒತ್ತಡಕ್ಕೆ ಮಣಿದು ತಪ್ಪು ಮಾಹಿತಿ ನೀಡುವ ಮೂಲಕ ಸರಕಾರವನ್ನು ದಿಕ್ಕು ತಪ್ಪಿಸುತ್ತಿದ್ದಾರೆ. ಕೆಲವು ಹೊಟ್ಟೆಪಾಡಿನ ಸಂಘಟನೆಗಳು ದಿಡ್ಡಳ್ಳಿಯಲ್ಲಿ ನಕ್ಸಲರಿದ್ದಾರೆ ಹಾಗೂ ನಿರಾಶ್ರಿತರು ಹೊರ ಜಿಲ್ಲೆಯವರು ಮತ್ತು ಅಸ್ಸಾಂ ರಾಜ್ಯದಿಂದ ಬಂದವರು ಎಂಬ ಸುಳ್ಳುಗಳನ್ನು ಹೇಳಿ ಆದಿವಾಸಿಗಳ ಹೋರಾಟವನ್ನು ಹತ್ತಿಕ್ಕಲು ಪ್ರಯತ್ನಿಸುತ್ತಿದ್ದಾರೆ. ಸುಳ್ಳಿಗೆ ಎಂದೂ ಜಯ ಸಿಗಲ್ಲ. ಆದಿವಾಸಿಗಳ ನ್ಯಾಯಯುತ ಹೋರಾಟಕ್ಕೆ ಜಯ ಸಿಗಲಿದೆ ಎಂದು ಹೇಳಿದರು.

ಆದಿವಾಸಿ ಮುಖಂಡ ಅಪ್ಪಾಜಿ ಮಾತನಾಡಿ, ಕಳೆದ ಒಂದು ತಿಂಗಳಿನಿಂದ ನಿರಾಶ್ರಿತರಾಗಿರುವ ಆದಿವಾಸಿಗಳಿಗೆ ಶಾಶ್ವತ ನಿವೇಶನ ನೀಡಲು ಸರಕಾರ ವಿಫಲವಾಗಿದೆ. ಗುಡಿಸಲು ತೆರವುಗೊಳಿಸಿದ ಸ್ಥಳ ಪೈಸಾರಿ ಜಾಗವಾಗಿರುವದರಿಂದ ತಕ್ಷಣ ಇಲ್ಲಿಯೇ ನಿವೇಶನ, ಹಕ್ಕು ಪತ್ರ ನೀಡಬೇಕು. ಜಿಲ್ಲೆಯ ವಿವಿಧೆಡೆ ಗುರುತಿಸಿರುವ ಸ್ಥಳಗಳಿಗೆ ನಿರಾಶ್ರಿತರು ತೆರಳುವದಿಲ್ಲ. ಆಯಾ ತಾಲೂಕು ಗಳಲ್ಲಿರುವ ಇತರ ಆದಿವಾಸಿಗಳಿಗೆ ಜಿಲ್ಲಾಡಳಿತ ಗುರುತಿಸಿರುವ ಜಾಗ ನೀಡಲಿ. ನಾವು ಇಲ್ಲಿಂದ ತೆರಳುವದಿಲ್ಲ. ದಿಡ್ಡಳ್ಳಿಯಲ್ಲಿ ಎಲ್ಲಾ ಮೂಲ ಸೌಲಭ್ಯಗಳು ಇರುವದರಿಂದ ಶಾಶ್ವತ ಸೂರು ಒದಗಿಸಲಿ ಎಂದು ಒತ್ತಾಯಿಸಿದರು. ಈ ಸಂದರ್ಭ ವೀರಾಜಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಆರ್‍ಕೆ ಅಬ್ದುಲ್ ಸಲಾಂ, ಕಾಂಗ್ರೆಸ್ ಮುಖಂಡ ಸಂದೀಪ್ ಗಿರಿಜನ ಮುಖಂಡರಾದ ಮುತ್ತಮ್ಮ, ಸ್ವಾಮಿ, ಅನಿತಾ ಸೇರಿದಂತೆ ಮತ್ತಿತರರು ಇದ್ದರು.