ಸೋಮವಾರಪೇಟೆ, ಜ. 25: ಸರ್ಕಾರದ ಅನುದಾನದಲ್ಲಿ ಕೈಗೊಳ್ಳಲಾಗುವ ಯಾವದೇ ಕಾಮಗಾರಿಗಳು ಕಳಪೆಯಾಗ ಬಾರದು. ರಸ್ತೆಗಳು ಉತ್ತಮ ಗುಣಮಟ್ಟವನ್ನು ಕಾಯ್ದುಕೊಳ್ಳಬೇಕು. ಕಾಮಗಾರಿ ನಡೆಯುವ ಸಂದರ್ಭ ಸ್ಥಳೀಯರು ಹೆಚ್ಚಿನ ಆಸಕ್ತಿ ವಹಿಸಬೇಕು ಎಂದು ಶಾಸಕ ರಂಜನ್ ಹೇಳಿದರು.

ಸಮೀಪದ ಹಾನಗಲ್ಲು ಗ್ರಾಮದ ಬಸವೇಶ್ವರ ದೇವಾಲಯದಿಂದ ಸಿದ್ಧಾರ್ಥ ಬಡಾವಣೆಗೆ ತೆರಳುವ ರಸ್ತೆ ಡಾಂಬರೀಕರಣ ಕಾಮಗಾರಿಗೆ ಜಿ.ಪಂ.ನಿಂದ 2 ಲಕ್ಷ ಬಿಡುಗಡೆಯಾಗಿದ್ದು, ಈ ಕಾಮಗಾರಿಗೆ ಚಾಲನೆ ನೀಡಿ ರಂಜನ್ ಮಾತನಾಡಿದರು.

ಗ್ರಾಮೀಣ ಭಾಗದಲ್ಲಿ ರಸ್ತೆ ಕಾಮಗಾರಿ ನಡೆಯುವ ಸಂದರ್ಭ ಅಕ್ಕಪಕ್ಕದಲ್ಲಿ ಚರಂಡಿ ನಿರ್ಮಾಣಕ್ಕೆ ಹೆಚ್ಚಿನ ಒತ್ತು ನೀಡಬೇಕು. ಮರಗಿಡಗಳ ರೆಂಬೆಕೊಂಬೆಗಳನ್ನು ಆಗಾಗ್ಗೆ ತೆರವುಗೊಳಿಸಬೇಕು. ಸಾರ್ವಜನಿಕ ರಸ್ತೆ ಹಾಗೂ ಚರಂಡಿಗೆ ಅವಶ್ಯಕವಾಗುವ ಅಲ್ಪಸ್ವಲ್ಪ ಜಾಗವನ್ನು ಸ್ಥಳೀಯರೇ ಸ್ವಯಂಪ್ರೇರಣೆಯಿಂದ ನೀಡಬೇಕು ಎಂದರು.

ಈ ಸಂದರ್ಭ ಜಿ.ಪಂ. ಸದಸ್ಯ ಬಿ.ಜೆ. ದೀಪಕ್, ತಾ.ಪಂ. ಸದಸ್ಯೆ ಹೆಚ್.ಎನ್. ತಂಗಮ್ಮ, ಗ್ರಾ.ಪಂ. ಅಧ್ಯಕ್ಷೆ ರೇಣುಕಾ ವೆಂಕಟೇಶ್, ಪ್ರಮುಖರಾದ ರಮೇಶ್, ಪ್ರಕಾಶ್, ಶಿವಕುಮಾರ್, ಚಂದ್ರ, ವಿಶ್ವನಾಥ್, ಕೃಷ್ಣ, ಪ್ರಸಾದ್ ಸೇರಿದಂತೆ ಇತರರು ಉಪಸ್ಥಿತರಿದ್ದರು.