ಮಡಿಕೇರಿ, ಜ. 25: ಸರಕಾರಿ ಅಧಿಕಾರಿಗಳೆಂದರೆ ಮೂಗು ಮುರಿಯುವವರೇ ಎಲ್ಲರೂ ಅಂತಹವರ ಮಧ್ಯೆಯೂ ಸೇವಾ ಮನೋಭಾವನೆಯಿಂದ ಸರಕಾರಿ ಕೆಲಸ ದೇವರ ಕೆಲಸ ಎಂಬಂತೆ ಸಾಮಾಜಿಕ ಕಳಕಳಿಯಿಂದ ಕರ್ತವ್ಯ ನಿರ್ವಹಿಸಿ ಜನ ಮೆಚ್ಚುಗೆ ಗಳಿಸಿದ ಶಾರದಾ ರಾಮನ್ ಅವರು ಅಭಿನಂದನಾರ್ಹರು ಎಂದು ಶಾರದಾ ರಾಮನ್ ಅಭಿನಂದನಾ ಕಾರ್ಯಕ್ರಮ ದಲ್ಲಿ ಭಾಗವಹಿಸಿದ ಗಣ್ಯರು ಅಭಿಮತ ವ್ಯಕ್ತಪಡಿಸಿದರು.

ನಗರದ ಶ್ರೀ ಓಂಕಾರೇಶ್ವರ ದೇವಾಲಯ ಆವರಣದಲ್ಲಿರುವ ಓಂಕಾರ ಸದನದಲ್ಲಿ ನಡೆದ ಅಭಿನಂದನಾ ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಹಾಗೂ ಹಿರಿಯ ನಾಗರಿಕರ ವೇದಿಕೆಯ ಜಿ.ಟಿ. ರಾಘವೇಂದ್ರ ಉದ್ಘಾಟನೆ ನೆರವೇರಿಸಿದ ನಗರಸಭಾ ಉಪಾಧ್ಯಕ್ಷ ಟಿ.ಎಸ್. ಪ್ರಕಾಶ್ ಇವರುಗಳು ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆಯಲ್ಲಿ 31 ವರ್ಷಗಳ ಕಾಲ ಕರ್ತವ್ಯ ನಿರ್ವಹಿಸಿದ ನಿವೃತ್ತ ಅಧಿಕಾರಿ ಶಾರದಾ ರಾಮನ್ ಅವರನ್ನು ಅಭಿನಂದಿಸಿ ಮಾತನಾಡಿದರು. ಕಾರ್ಯಕ್ರಮದ ಉದ್ಘಾಟನೆ ನೆರವೇರಿಸಿ ಮಾತನಾಡಿದ ಟಿ.ಎಸ್. ಪ್ರಕಾಶ್ ಅವರು ಸರಕಾರಿ ನೌಕರಿಯಿಂದ ನಿವೃತ್ತರಾದವರನ್ನು ಈ ರೀತಿ ಗೌರವಿಸುತ್ತಿರುವದು ವಿಶೇಷ ಎಂದರಲ್ಲದೆ, ಶಾರದಾ ರಾಮನ್ ಅವರು ಸರಕಾರಿ ನೌಕರಿಯಲ್ಲಿದ್ದೂ, ಬೇರೆ ಬೇರೆ ಕ್ಷೇತ್ರಗಳಲ್ಲಿ ಸೇವೆ ಸಲ್ಲಿಸಿದ್ದಾರೆ ಎಂದು ಶ್ಲಾಘಿಸಿದರು.

ಇಲಾಖೆಯಲ್ಲಿ ಕೌಟುಂಬಿಕ ನೆಲೆಗಟ್ಟಿನೊಂದಿಗೆ ಕರ್ತವ್ಯ ನಿರ್ವಹಿಸಿದ ಶಾರದಾ ರಾಮನ್ ಅವರು ಶಾಸ್ತ್ರೀಯ ಕಲೆಯನ್ನು ಬೆಳೆಸುವದರೊಂದಿಗೆ ಎರಡು ಅಮೂಲ್ಯ ರತ್ನಗಳನ್ನು ಸಮಾಜಕ್ಕೆ ಕೊಡುಗೆಯಾಗಿ ನೀಡಿದ್ದಾರೆ. ಆ ಎರಡು ಅಮೂಲ್ಯ ರತ್ನಗಳು ಸ್ವತಃ ತಾವು ಬೆಳೆದು ದೇಶದಲ್ಲಿ ಮಾತ್ರವಲ್ಲ ವಿದೇಶದಲ್ಲಿಯೂ ಶಾಸ್ತ್ರೀಯ ಕಲೆಯನ್ನು ಬೆಳೆಸಿ ಸಂಸ್ಕøತಿಯನ್ನು ಉಳಿಸುವ ಕೆಲಸದಲ್ಲಿ ತೊಡಗಿದ್ದಾರೆ ಎಂದು ಶಾರದಾ ರಾಮನ್ ಅವರ ಪುತ್ರಿಯರನ್ನು ಉಲ್ಲೇಖಿಸಿ ಜಿ.ಟಿ. ರಾಘವೇಂದ್ರ ಶ್ಲಾಘನೆ ವ್ಯಕ್ತಪಡಿಸಿದರು.

ಸರಕಾರಿ ಅಧಿಕಾರಿಯಾಗಿ ಕಾರ್ಯನಿರ್ವಹಿಸಿ ಜನಮೆಚ್ಚುಗೆ ಯೊಂದಿಗೆ ನಿವೃತ್ತರಾದ ಬಳಿಕ ಎಲ್ಲರ ಬೆಂಬಲದೊಂದಿಗೆ ಅಭಿನಂದನೆ ಮಾಡುತ್ತಿರುವದು ಕೊಡಗು ಜಿಲ್ಲೆಯ ಇತಿಹಾಸದಲ್ಲಿ ಇದೇ ಮೊದಲನೇಯ ದಾಗಿದೆ ಎಂಬ ಅಭಿಪ್ರಾಯವನ್ನು ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ ಅಭಿಪ್ರಾಯಪಟ್ಟರು.

ನಿವೃತ್ತರಾಗಿ ಮನೆಯಲ್ಲಿ ಕುಳಿತುಕೊಳ್ಳದೇ ಈ ಹಿಂದಿನಂತೆ ಸಾಮಾಜಿಕ ಕಾರ್ಯದಲ್ಲಿ ತೊಡಗಿಕೊಳ್ಳುವಂತೆ ಹಲವರು ಶಾರದಾ ರಾಮನ್ ಅವರನ್ನು ಅಭಿನಂದಿಸಿ ಮಾತನಾಡಿದರು.

ಈ ಸಂದರ್ಭ ಜಿಲ್ಲಾ ಮಕ್ಕಳ ಕಲ್ಯಾಣ ಸಮಿತಿಯ ಅಧ್ಯಕ್ಷೆ ಆರತಿ ಸೋಮಯ್ಯ, ಶ್ರೀ ಮುತ್ತಪ್ಪ ದೇವಾಲಯ ಸಮಿತಿ ಅಧ್ಯಕ್ಷ ಟಿ.ಕೆ. ಸುಧೀರ್, ಜಿಲ್ಲಾ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮೇರಿ ಅಂಬುದಾಸ್, ಮಡಿಕೇರಿ ತಾಲೂಕು ಅಧ್ಯಕ್ಷೆ ಕವಿತ, ವೀರಾಜಪೇಟೆ ತಾಲೂಕು ಅಧ್ಯಕ್ಷೆ ರಜನಿ ಕುಂಞ ರಾಮನ್, ಅಭಿನಂದನಾ ಸಮಿತಿ ಅಧ್ಯಕ್ಷೆ ಬಿ.ಪಿ. ಜ್ಯೋತಿ ಸೇರಿದಂತೆ ಸುಮಾರು ಮೂವತ್ತಕ್ಕೂ ಹೆಚ್ಚಿನ ಸಂಘ-ಸಂಸ್ಥೆಗಳ ಪದಾಧಿಕಾರಿಗಳು ಹಾಜರಿದ್ದು, ಅಭಿನಂದನೆ ಸಲ್ಲಿಸಿದರು.

ಜಿಲ್ಲಾ ಮಟ್ಟದ ಸ್ತ್ರೀಶಕ್ತಿ ಒಕ್ಕೂಟದ ಅಧ್ಯಕ್ಷೆ ಮೇರಿ ಅಂಬುದಾಸ್ ಅವರಿಂದ ಕಾರ್ಯಕ್ರಮ ನಿರೂಪಣೆ, ಅಭಿನಂದನಾ ಸಮಿತಿ ಅಧ್ಯಕ್ಷೆ ಬಿ.ಸಿ. ಜ್ಯೋತಿ ಅವರಿಂದ ಸ್ವಾಗತ ಡಾ. ಶ್ರೀವಿದ್ಯಾ ಮುರಳೀಧರ್ ಅವರಿಂದ ವಂದನಾರ್ಪಣೆಯಾಯಿತು.