ಮಡಿಕೇರಿ, ಜು. 14: ಎಂ.ಬಿ. ಬೋಪಣ್ಣ ಎಂಬವರ ಕೊಲೆ ಪ್ರಕರಣದಲ್ಲಿ ಸಾಕ್ಷಿಯಾಗಿದ್ದ ಎಸ್. ಆನಂದ ಎಂಬವರನ್ನು ಕೊಲೆ ಮಾಡಲು ಯತ್ನಿಸಿದ ಆರೋಪಿಗಳಿಗೆ ಸಜೆ ಹಾಗೂ ದಂಡ ವಿಧಿಸಿ ಜಿಲ್ಲಾ ಮತ್ತು ಸೆಷನ್ಸ್ ಶೀಘ್ರ ವಿಲೇವಾರಿ ನ್ಯಾಯಾಲಯ ತೀರ್ಪು ನೀಡಿದೆ.
ಒಂದನೇ ಆರೋಪಿ ತುಳುನಾಡಂಡ ಎ. ಮಹೇಶ್, ಎರಡನೇ ಆರೋಪಿ ಬೊಟ್ಟಳಂಡ ಪಿ. ಮುತ್ತಣ್ಣ, ಮೂರನೇ ಆರೋಪಿ ಕಾರೇರ ಯು. ದಿನೇಶ್, ನಾಲ್ಕನೇ ಆರೋಪಿ ತಂಬುಕುತ್ತಿರ ಎಂ. ಅಣ್ಣಿ ಯಾನೆ ತಮ್ಮಯ್ಯ, ಐದನೇ ಆರೋಪಿ ಅಮ್ಮಚಿಮಣಿಯಂಡ ಜಿ. ದಿನೇಶ್, ಆರನೇ ಆರೋಪಿ ಕೋಚೇರ ಎನ್. ಸನ್ನು, ಏಳನೇ ಆರೋಪಿ ತುಳುನಾಡಂಡ ಎ. ಅರುಣ ಹಾಗೂ ಎಂಟನೇ ಆರೋಪಿ ಬೊಟ್ಟಳಂಡ ಪಿ. ಜಗನ್ ಇವರುಗಳ ವಿರುದ್ಧ ಪ್ರಕರಣ ದಾಖಲಾಗಿತ್ತು.
ತಾ. 19.10.2010 ರಂದು 16.15 ಗಂಟೆಗೆ ಮಡಿಕೇರಿ ನಗರದ ಕಾಲೇಜು ರಸ್ತೆಯಲ್ಲಿರುವ ಕಾರ್ಪೋರೇಷನ್ ಬ್ಯಾಂಕ್‍ನ ಹತ್ತಿರ ಸಾಕ್ಷಿ ಹೆಚ್.ಎಸ್. ಆನಂದ ಅವರು ಮೋಟಾರ್ ಸೈಕಲ್‍ನಲ್ಲಿ ಹೋಗುತ್ತಿರುವಾಗ ಆರೋಪಿಗಳು ಜೀಪನ್ನು ರಸ್ತೆಯ ಮಧ್ಯದಲ್ಲಿ ನಿಲ್ಲಿಸಿ ಆನಂದ ಅವರನ್ನು ಅಡ್ಡಗಟ್ಟಿ ಕತ್ತಿಯಿಂದ ತಲೆಯ ಮುಂಭಾಗಕ್ಕೆ ಕಡಿದು ಗಾಯಪಡಿಸಿದ್ದಲ್ಲದೇ ರೀಪರ್‍ನಿಂದ ಬೆನ್ನಿನ ಎಡಭಾಗಕ್ಕೆ ಹೊಡೆದು ಗಾಯಪಡಿಸಿದ್ದರು. ಮಡಿಕೇರಿ ನಗರ ಠಾಣೆಯಲ್ಲಿ ದೋಷಾರೋಪಣಾ ಪತ್ರ ಸಲ್ಲಿಸಲಾಗಿತ್ತು.
ಈ ಪ್ರಕರಣದ ವಿಚಾರಣೆಯನ್ನು ಪ್ರಧಾನ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದಲ್ಲಿ ನಡೆಸಲಾಗಿದ್ದು, ಆರೋಪಿ ಸಂಖ್ಯೆ ಒಂದು ಮತ್ತು ಎರಡು ಈ ಮೇಲಿನ ಕೃತ್ಯವನ್ನು ಎಸಗಿರುವದು ಸಾಬೀತಾಗಿದೆ ಎಂದು ನ್ಯಾಯಾಧೀಶ ಆರ್.ಕೆ.ಜಿ. ಎಂ.ಎಂ. ಮಹಾಸ್ವಾಮೀಜಿ ಶಿಕ್ಷೆ ವಿಧಿಸಿ ತೀರ್ಪು ನೀಡಿರುತ್ತಾರೆ.
ಸದರಿ ತೀರ್ಪಿನಂತೆ ಆರೋಪಿ ಸಂಖ್ಯೆ ಒಂದು ಮತ್ತು ಎರಡು ಇವರಿಗೆ ಅಕ್ರಮ ಕೂಟ ಕಟ್ಟಿಕೊಂಡು ಅಪರಾಧ ಎಸಗಿದ ಆರೋಪಕ್ಕಾಗಿ ತಲಾ 6 ತಿಂಗಳ ಸಜೆ ಮತ್ತು ರೂ. 1 ಸಾವಿರ ದಂಡ, ಮಾರಕಾಯುಧಗಳನ್ನು ಹಿಡಿದುಕೊಂಡು ಅಕ್ರಮ ಕೂಟ ಕಟ್ಟಿದ ಅಪರಾಧಕ್ಕಾಗಿ ತಲಾ 1 ವರ್ಷ ಸಜೆ ಹಾಗೂ ರೂ. 2 ಸಾವಿರ ದಂಡ, ಮಾರಕಾಯುಧಗಳಿಂದ ದಾಂಧಲೆ ನಡೆಸಿದ ಅಪರಾಧಕ್ಕಾಗಿ ತಲಾ 3 ವರ್ಷ ಸಜೆ ಹಾಗೂ ರೂ. 3 ಸಾವಿರ ದಂಡ, ಫಿರ್ಯಾದುದಾರರನ್ನು ರಸ್ತೆಯಲ್ಲಿ ಕಾನೂನು ಬಾಹಿರವಾಗಿ ಅಡ್ಡಗಟ್ಟಿದ ಅಪರಾಧಕ್ಕಾಗಿ ತಲಾ 3 ವರ್ಷ ಸಜೆ ಹಾಗೂ ರೂ. 3 ಸಾವಿರ ದಂಡ ಹಾಗೂ ಫಿರ್ಯಾದುದಾರರಿಗೆ ಮಾರಕಾಯುಧಗಳಿಂದ ಹಲ್ಲೆ ನಡೆಸಿ ಗಾಯಗೊಳಿಸಿದ ಅಪರಾಧಕ್ಕಾಗಿ ತಲಾ 3 ವರ್ಷ ಸಜೆ ಹಾಗೂ ರೂ. 3 ಸಾವಿರ ದಂಡ ಹಾಗೂ ಫಿರ್ಯಾದುದಾರರನ್ನು ಕೊಲೆ ಮಾಡಲು ಪ್ರಯತ್ನಿಸಿದ ಅಪರಾಧಕ್ಕಾಗಿ ತಲಾ 4 ವರ್ಷ ಸಜೆ ಹಾಗೂ ರೂ. 5 ಸಾವಿರ ದಂಡ ವಿಧಿಸಲಾಗಿದೆ. ವಸೂಲಾಗುವ ಒಟ್ಟು ದಂಡದ ಹಣ ರೂ. 34 ಸಾವಿರದಲ್ಲಿ ರೂ. 30 ಸಾವಿರವನ್ನು ಪಿರ್ಯಾದು ದಾರರಾದ ಹೆಚ್.ಎಸ್. ಆನಂದ ಅವರಿಗೆ ಪಾವತಿಸಲು ಆದೇಶದಲ್ಲಿ ತಿಳಿಸಲಾಗಿದೆ. ಆರೋಪಿ ಸಂಖ್ಯೆ ಮೂರರಿಂದ ಎಂಟರವರೆಗಿನ ಆರೋಪಿಗಳನ್ನು ಆರೋಪ ಮುಕ್ತ ಗೊಳಿಸಿ ಬಿಡುಗಡೆ ಮಾಡಲಾಗಿದೆ.
ಈ ಪ್ರಕರಣದಲ್ಲಿ ಮಡಿಕೇರಿಯ ಜಿಲ್ಲಾ ಮತ್ತು ಸೆಷನ್ಸ್ ನ್ಯಾಯಾಲಯದ ಸರಕಾರಿ ಅಭಿಯೋಜಕ ಎ.ಪಿ. ಫಿರೋಜ್ ಖಾನ್ ಅಂತಿಮ ವಾದ ಮಂಡಿಸಿದ್ದರು.