ಸೋಮವಾರಪೇಟೆ, ಜು. 14: ತಾಲೂಕಿನ ನೇರುಗಳಲೆ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಅಬ್ಬೂರುಕಟ್ಟೆ ಗ್ರಾಮದಿಂದ ಹೊಸಳ್ಳಿ ಸಂಪರ್ಕಿಸುವ ರಸ್ತೆಯನ್ನು ನಮ್ಮ ಗ್ರಾಮ-ನಮ್ಮ ರಸ್ತೆ ಯೋಜನೆಯಡಿ ಡಾಂಬರೀಕರಣ/ಕೆಲವೆಡೆ ಕಾಂಕ್ರಿಟೀಕರಣಗೊಳಿಸಲು ರಾಜ್ಯ ಸರ್ಕಾರದ ಗ್ರಾಮೀಣ ಅಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆ, ಕರ್ನಾಟಕ ಗ್ರಾಮೀಣ ರಸ್ತೆ ಅಭಿವೃದ್ಧಿ ಸಂಸ್ಥೆಯ ವತಿಯಿಂದ ಅನುದಾನ ಬಿಡುಗಡೆಯಾಗಿದ್ದು, ಮಳೆಗಾಲ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭಿಸಲಾಗುವದು ಎಂದು ಗುತ್ತಿಗೆದಾರರು ಪ್ರತಿಕ್ರಿಯಿಸಿದ್ದಾರೆ.

ಹೊಂಡಾ ಗುಂಡಿಗಳ ರಸ್ತೆಯ ಬಗ್ಗೆ ‘ಶಕ್ತಿ’ಯಲ್ಲಿ ಪ್ರಕಟವಾದ ವರದಿಗೆ ಪ್ರತಿಕ್ರಿಯೆ ನೀಡಿರುವ ಗುತ್ತಿಗೆದಾರ ದಿನೇಶ್‍ಕುಮಾರ್ ಅವರು, ಉದ್ದೇಶಿತ ಸಮಯದಲ್ಲೇ ಕಾಮಗಾರಿ ಪೂರ್ಣಗೊಳಿಸಲು ಯೋಜಿಸಲಾಗಿತ್ತು. ಆದರೆ ರಸ್ತೆ ನಿರ್ಮಾಣಕ್ಕಾಗಿ ಕೆಲವೆಡೆ ಮರಗಳನ್ನು ತೆರವುಗೊಳಿಸಲು ಅರಣ್ಯ ಇಲಾಖೆಗೆ ಮನವಿ ಮಾಡಲಾಗಿತ್ತು. ಮರ ತೆರವು ಕಾರ್ಯ ವಿಳಂಬವಾದ್ದರಿಂದ ಕಾಮಗಾರಿ ಪ್ರಾರಂಭಿಸಲು ಸಾಧ್ಯವಾಗಿಲ್ಲ ಎಂದು ಸ್ಪಷ್ಟನೆ ನೀಡಿದ್ದಾರೆ.

ರಸ್ತೆ ಕಾಮಗಾರಿ ವಿಳಂಬವಾದ ಬಗ್ಗೆ ಯಾರೊಂದಿಗೂ ತಾನು ಉಡಾಫೆಯಿಂದ ವರ್ತಿಸಿಲ್ಲ. ಮರ ತೆರವುಗೊಳಿಸಲು ವಿಳಂಬವಾದ್ದರಿಂದಲೇ ಕಾಮಗಾರಿಯೂ ವಿಳಂಬವಾಗಿದೆಯೇ ಹೊರತು ಬೇರಿನ್ಯಾವದೇ ಕಾರಣಗಳಿಂದ ಅಲ್ಲ. ಮಳೆ ಮುಗಿದ ತಕ್ಷಣ ಕಾಮಗಾರಿ ಪ್ರಾರಂಭವಾಗಲಿದೆ ಎಂದು ತಿಳಿಸಿದ್ದಾರೆ.

ನೇರುಗಳಲೆ ಗ್ರಾಮ ಪಂಚಾಯಿತಿ ಕಚೇರಿ ಇರುವ ಅಬ್ಬೂರುಕಟ್ಟೆ ಗ್ರಾಮದಿಂದ ಹೊಸಳ್ಳಿ ಗ್ರಾಮ ಸಂಪರ್ಕಿಸುವ 6.29 ಕಿ.ಮೀ. ಅಂತರದ ಮುಖ್ಯ ರಸ್ತೆಯ ದುರಸ್ತಿ, ಇದರಲ್ಲಿ 5.89 ಕಿ.ಮೀ. ಡಾಮರೀಕರಣ, 400 ಮೀಟರ್ ಕಾಂಕ್ರಿಟೀಕರಣ, 18 ಸಣ್ಣ ಸೇತುವೆಗಳ ನಿರ್ಮಾಣಕ್ಕಾಗಿ ರಾಜ್ಯ ಸರ್ಕಾರದ ಪ್ಯಾಕೇಜ್ ಸಂಖ್ಯೆ ಕೆಎಸ್18-06 ಅಡಿಯಲ್ಲಿ ರೂ. 5.23 ಕೋಟಿ ಅನುದಾನ ಬಿಡುಗಡೆಯಾಗಿದ್ದು, ಜೂನ್ 2015ರಲ್ಲಿ ಕಾಮಗಾರಿಗೆ ಭೂಮಿಪೂಜೆ ನೆರವೇರಿಸಲಾಗಿದೆ.