ಪೊನ್ನಂಪೇಟೆ, ನ. 28: ಸೋಮವಾರಪೇಟೆ ತಾಲೂಕಿನ ಐಗೂರು ಮಸೀದಿಯ ಹೆಂಚು ತೆಗೆದು ಅಕ್ರಮವಾಗಿ ಒಳಪ್ರವೇಶಿಸಿ ಪವಿತ್ರ ಧರ್ಮ ಗ್ರಂಥ ಕುರಾನಿಗೆ ಬೆಂಕಿ ಹಚ್ಚಿ ನಾಶಪಡಿಸಿದ ಪ್ರಕರಣ ಖಂಡನೀಯವಾಗಿದ್ದು, ಈ ಕುರಿತು ಕೊಡಗಿನಲ್ಲಿ ಸದಾ ಶಾಂತಿ ಬಯಸುವ ಜಿಲ್ಲೆಯ ಪ್ರಜ್ಞಾವಂತರು ಪ್ರತಿಕ್ರಿಯೆ ನೀಡಿ ಮತೀಯ ಕಿಡಿಗೇಡಿಗಳ ಹೀನ ಕೃತ್ಯವನ್ನು ಕಟುಶಬ್ಧಗಳಿಂದ ಖಂಡಿಸಬೇಕು ಎಂದು ಕೊಡಗು ಜಿಲ್ಲಾ ಕಾಂಗ್ರೆಸ್ ಹಿರಿಯ ಉಪಾಧ್ಯಕ್ಷ ವಿ.ಕೆ. ಪೋಕುಟ್ಟಿ ಮನವಿ ಮಾಡಿದ್ದಾರೆ.
ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ಐಗೂರು ಘಟನೆಯಿಂದ ಎಲ್ಲಾ ಜನಾಂಗದವರ ಸಾಮರಸ್ಯ ಬದುಕಿಗೆ ಹೆಸರಾಗಿದ್ದ ಕೊಡಗು ಜಿಲ್ಲೆಗೆ ಕಳಂಕ ತಟ್ಟಿದಂತಾಗಿದೆ. ಕೊಡಗಿನಲ್ಲಿ ಸದಾ ಶಾಂತಿ ನೆಲೆಸಬೇಕು ಎಂದು ಬಯಸುವ ಬಹುಪಾಲು ಶಾಂತಿ ಪ್ರಿಯರ ತಾಳ್ಮೆ ಮತ್ತು ಸಹನೆಯಿಂದಾಗಿ ಕಿಡಿಗೇಡಿಗಳ ಕೋಮು ಗಲಭೆಯ ಉದ್ದೇಶ ಪೂರ್ಣವಾಗಿ ಈಡೇರದಿರುವದು ಕೊಡಗಿನ ಪ್ರಜ್ಞಾವಂತರ ಸಾಮಾಜಿಕ ಕಾಳಜಿಯನ್ನು ಎತ್ತಿ ತೋರಿಸಿದಂತಾಗಿದೆ.
ಪ್ರಜಾತಂತ್ರ ವ್ಯವಸ್ಥೆಯಲ್ಲಿ ನಂಬಿಕೆ ಹೊಂದಿರುವ ಜಿಲ್ಲೆಯ ಎಲ್ಲಾ ವರ್ಗದ ಪ್ರಜ್ಞಾವಂತರು ಈ ಹೇಡಿ ಕೃತ್ಯವನ್ನು ಖಂಡಿಸುವಂತಾಗಬೇಕು. ಮತೀಯ ದುಷ್ಕøತ್ಯ ಯಾವ ಕೋಮಿನವರು ನಡೆಸಿದರೂ ಅದು ಅಕ್ಷಮ್ಯ ಅಪರಾಧವಾಗುತ್ತದೆ. ಇದಕ್ಕೆ ನಾಗರಿಕ ಸಮಾಜ ಯಾವದೇ ಕಾರಣಕ್ಕೂ ಬೆಂಬಲ ನೀಡಬಾರದು. ಪ್ರಕರಣವನ್ನು ಪೊಲೀಸ್ ಇಲಾಖೆ ಗಂಭೀರವಾಗಿ ಪರಿಗಣಿಸಬೇಕು. ಈ ಕುರಿತು ಪೊಲೀಸರು ಯಾವದೇ ಒತ್ತಡಕ್ಕೆ ಮಣಿಯದೆ ನಿಷ್ಪಕ್ಷಪಾತ ತನಿಖೆ ನಡೆಸಬೇಕು. ತಪ್ಪಿತಸ್ಥರು ಯಾರೇ ಇದ್ದರೂ ಅವರಿಗೆ ತಕ್ಕ ಶಿಕ್ಷೆಯಾಗಬೇಕು. ಇಂತಹ ದುಷ್ಕøತ್ಯ ಜಿಲ್ಲೆಯ ಯಾವದೇ ಭಾಗದಲ್ಲಿ ಮರುಕಳಿಸದಂತೆ ಎಚ್ಚರ ತೆಗೆದುಕೊಳ್ಳಬೇಕು. ಜಿಲ್ಲೆಯಲ್ಲಿ ಕೋಮು ಪ್ರಚೋದಿತ ಕೃತ್ಯಗಳಿಗೆ ಅವಕಾಶ ನೀಡದಂತೆ ಪೊಲೀಸ್ ಇಲಾಖೆ ಅಗತ್ಯ ಮುಂಜಾಗ್ರತಾ ಕ್ರಮಗಳನ್ನು ಕೈಗೊಳ್ಳಬೇಕು ಎಂದು ಪೋಕುಟ್ಟಿ ಆಗ್ರಹಿಸಿದ್ದಾರೆ.