ಮಡಿಕೇರಿ, ನ.28 : ಕರ್ನಾಟಕ ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಹಾಗೂ ಜಿಲ್ಲಾ ಸಾರ್ವಜನಿಕ ಶಿಕ್ಷಣ ಇಲಾಖೆ ಆಶ್ರಯದಲ್ಲಿ ತಾ. 29 ರಂದು (ಇಂದು) ಬೆಳಿಗ್ಗೆ 10 ಕ್ಕೆ ಮಡಿಕೇರಿ ನಗರದ ಎ.ಎಲ್.ಜಿ.ಕ್ರೆಸೆಂಟ್ ಶಾಲೆಯಲ್ಲಿ ಕೊಡಗು ಜಿಲ್ಲಾಮಟ್ಟದ 24 ನೇ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶ-2016 ವನ್ನು ಏರ್ಪಡಿಸಲಾಗಿದೆ. ಬೆಳಿಗ್ಗೆ 10 ಕ್ಕೆ ಜಿ.ಪಂ.ಅಧ್ಯಕ್ಷ ಬಿ.ಎ.ಹರೀಶ್ ಸಮಾವೇಶವನ್ನು ಉದ್ಘಾಟಿಸಲಿದ್ದು, ರಾಜ್ಯ ವಿಜ್ಞಾನ ಪರಿಷತ್ತಿನ ಕೊಡಗು ಜಿಲ್ಲಾ ಸಮಿತಿ ಅಧ್ಯಕ್ಷ ಡಾ. ಜೆ.ಸೋಮಣ್ಣ ಅಧ್ಯಕ್ಷತೆ ವಹಿಸಲಿದ್ದಾರೆ ಎಂದು ಸಮಾವೇಶದ ಜಿಲ್ಲಾ ಸಂಯೋಜಕ ಸಿ.ಎಸ್.ಸುರೇಶ್ ತಿಳಿಸಿದ್ದಾರೆ.

ರಾಜ್ಯ ವಿಜ್ಞಾನ ಪರಿಷತ್ತಿನ ಕೇಂದ್ರ ಸಮಿತಿಯ ಜಂಟಿ ಕಾರ್ಯದರ್ಶಿ ಪ್ರಾಸ್ತಾವಿಕವಾಗಿ ಮಾತನಾಡಲಿದ್ದಾರೆ. ಮುಖ್ಯ ಅತಿಥಿಗಳಾಗಿ ಮಡಿಕೇರಿ ನಗರಸಭೆ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಡಿಡಿಪಿಐ ಜಿ.ಆರ್.ಬಸವರಾಜ್, ರೋಟರಿ ಮಿಸ್ಟಿ ಹಿಲ್ಸ್‍ನ ಅಧ್ಯಕ್ಷ ಮುಳಿಯ ಕೇಶವ ಪ್ರಸಾದ್, ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಕೊಡಗು ಪ್ರಾದೇಶಿಕ ಕಚೇರಿಯ ಪರಿಸರ ಅಧಿಕಾರಿ ಜಿ.ಆರ್.ಗಣೇಶನ್, ವಿಜ್ಞಾನ ಪರಿಷತ್ತಿನ ಜಿಲ್ಲಾ ಸಮಿತಿ ಉಪಾಧ್ಯಕ್ಷ ಎಂ.ಇ.ಮೊಹಿದ್ದೀನ್, ಕ್ರೆಸೆಂಟ್ ಶಾಲೆಯ ಗೌರವ ಕಾರ್ಯದರ್ಶಿ ಜಿ.ಎಚ್.ಮಹಮ್ಮದ್ ಹನೀಫ್, ಜಿಲ್ಲಾ ಪ್ರೌಢಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಸಿ.ಟಿ.ಸೋಮಶೇಖರ್ ಭಾಗವಹಿಸಲಿದ್ದಾರೆ.

ಅಪರಾಹ್ನ 2.45 ಕ್ಕೆ ರಾಜ್ಯ ರೇಷ್ಮೆ ಮಾರಾಟ ಮಂಡಳಿ ಅಧ್ಯಕ್ಷ ಟಿ.ಪಿ.ರಮೇಶ್ ಅಧ್ಯಕ್ಷತೆಯಲ್ಲಿ ನಡೆಯಲಿರುವ ಸಮಾರೋಪ ಸಮಾರಂಭದಲ್ಲಿ ಜಿಲ್ಲಾ ರೋಟರಿ ಕ್ಲಬ್‍ನ ಸಹಾಯಕ ಗವರ್ನರ್ ಡಾ.ಸಿ.ಆರ್.ಪ್ರಶಾಂತ್ ಬಹುಮಾನ ವಿತರಿಸಲಿದ್ದು, ಮಡಿಕೇರಿ ಕ್ಷೇತ್ರ ಶಿಕ್ಷಣಾಧಿಕಾರಿ ಬೊಮ್ಮೇಗೌಡ ಪ್ರಶಸ್ತಿ ಪತ್ರ ವಿತರಿಸಲಿದ್ದಾರೆ ಎಂದು ತಿಳಿಸಲಾಗಿದೆ.

ಮಡಿಕೇರಿ ವಿಭಾಗದ ಅರಣ್ಯ ಸಂರಕ್ಷಣಾಧಿಕಾರಿ ಏಡುಕೊಂಡಲು, ಕೊಡಗು ಜಿಲ್ಲಾ ವಿದ್ಯಾ ಇಲಾಖಾ ನೌಕರರ ಪತ್ತಿನ ಸಹಕಾರ ಸಂಘದ ಅಧ್ಯಕ್ಷ ಕೆ.ಕೆ.ಮಂಜುನಾಥ್‍ಕುಮಾರ್, ಜಿಲ್ಲಾ ಸ್ಕೌಟ್ಸ್ ಮತ್ತು ಗೈಡ್ಸ್ ಸಂಸ್ಥೆಯ ಪ್ರಧಾನ ಆಯುಕ್ತ ಜಿಮ್ಮಿ ಸಿಕ್ವೇರಾ, ಕ.ರಾ.ವಿ.ಪ.ಜಿಲ್ಲಾ ಸಮಿತಿ ಉಪಾಧ್ಯಕ್ಷರಾದ ಡಿ.ಕೃಷ್ಣಚೈತನ್ಯ, ಡಿ.ಎಂ.ರೇವತಿ, ಕ್ರೆಸೆಂಟ್ ಶಾಲೆಯ ಕರೆಸ್ಪಾಂಡೆಂಟ್ ಎಸ್.ಐ.ಮುನೀರ್ ಅಹ್ಮದ್, ಡಿಡಿಪಿಐ ಕಚೇರಿಯ ವಿಜ್ಞಾನ ವಿಷಯ ಪರಿವೀಕ್ಷಕ ದೇವನಾಯಕ್, ಶಾಲೆಯ ಪ್ರಾಂಶುಪಾಲ ತಲತ್ ಅಂಜುಮ್ ಪಾಲ್ಗೊಳ್ಳಲಿದ್ದಾರೆ ಎಂದು ಪ್ರಕಟನೆಯಲ್ಲಿ ತಿಳಿಸಲಾಗಿದೆ.

ಮಕ್ಕಳ ವಿಜ್ಞಾನ ಸಮಾವೇಶದಲ್ಲಿ “ ಸುಸ್ಥಿರ ಅಭಿವೃದ್ಧಿಗೆ ವಿಜ್ಞಾನ, ತಂತ್ರಜ್ಞಾನ ಮತ್ತು ನವೀನ ಅನ್ವಯಗಳ ಬಳಕೆ ” ಎಂಬ ಕೇಂದ್ರ ಶೀರ್ಷಿಕೆಯಡಿ ವಿವಿಧ ಉಪ-ವಿಷಯಗಳ ಅಭ್ಯಾಸಾತ್ಮಕ ಚಟುವಟಿಕೆ ಕುರಿತು ಐದು ಮಂದಿ ವಿದ್ಯಾರ್ಥಿಗಳ ತಂಡವು ತಮ್ಮ ಶಿಕ್ಷಕರ ಮಾರ್ಗದರ್ಶನದೊಂದಿಗೆ ವಿಜ್ಞಾನಿಗಳ ಮಾದರಿಯಲ್ಲಿ ವೈಜ್ಞಾನಿಕ ಯೋಜನಾ ವರದಿಯನ್ನು ತಯಾರಿಸಿ ವೈಜ್ಞಾನಿಕ ಯೋಜನಾ ಪ್ರಬಂಧವನ್ನು ಮಂಡಿಸಲಿದ್ದಾರೆ. ಜಿಲ್ಲಾಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಆಯ್ಕೆಗೊಳ್ಳುವ ಮೊದಲ 10 ತಂಡಗಳು ಡಿಸೆಂಬರ್ 3 ರಿಂದ ದಕ್ಷಿಣ ಕನ್ನಡ ಜಿಲ್ಲೆಯ ಪುತ್ತೂರಿನ ಸುದಾನ ವಸತಿ ಶಾಲೆಯಲ್ಲಿ ನಡೆಯಲಿರುವ ರಾಜ್ಯಮಟ್ಟದ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ. ರಾಜ್ಯಮಟ್ಟದಲ್ಲಿ ಆಯ್ಕೆಗೊಳ್ಳುವ ಮೊದಲ 30 ತಂಡಗಳು ಡಿ.27 -31 ರ ವರೆಗೆ ಮಹಾರಾಷ್ಟ್ರದ ಬಾರಾಮತಿ ನಗರದಲ್ಲಿ ನಡೆಯಲಿರುವ ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶದಲ್ಲಿ ಪಾಲ್ಗೊಳ್ಳಲಿವೆ ಎಂದು ತಿಳಿಸಲಾಗಿದೆ.

ರಾಷ್ಟ್ರೀಯ ಮಕ್ಕಳ ವಿಜ್ಞಾನ ಸಮಾವೇಶವು 10 ರಿಂದ 17 ವರ್ಷ ವಯೋಮಾನದ ಮಕ್ಕಳಿಗೆ ಕೇಂದ್ರ ವಿಷಯದಡಿ ತಮ್ಮ ಸುತ್ತಮುತ್ತಲಿನ ಪರಿಸರದಲ್ಲಿ ಮಾಹಿತಿ ಸಂಗ್ರಹಿಸಿ, ವಿಶ್ಲೇಷಿಸಿ ವೈಜ್ಞಾನಿಕ ಯೋಜನೆ ತಯಾರಿಸುವ ಮೂಲಕ ವಿದ್ಯಾರ್ಥಿಗಳಲ್ಲಿ ಅನ್ವೇಷಣೆಯ ಸ್ವಭಾವ ಕಂಡುಕೊಳ್ಳುವದರೊಂದಿಗೆ ಸಂಶೋಧನಾ ಪ್ರವೃತ್ತಿ ಬೆಳೆಸುವ ಮೂಲಕ ಅವರನ್ನು ಭವಿಷ್ಯದ ವಿಜ್ಞಾನಿಗಳನ್ನಾಗಿ ರೂಪಿಸಲು ಈ ಸಮಾವೇಶ ಸೂಕ್ತ ವೇದಿಕೆ ಒದಗಿಸಲು ನೆರವಾಗಿದೆ ಎಂದು ಸಮಾವೇಶದ ಜಿಲ್ಲಾ ಶೈಕ್ಷಣಿಕ ಸಂಯೋಜಕ ಜಿ.ಶ್ರೀಹರ್ಷ ತಿಳಿಸಿದ್ದಾರೆ.