ಗೋಣಿಕೊಪ್ಪಲು, ಜ. 28 : ಅಲಂತೋಡು ಗ್ರಾಮಕ್ಕೆ ಕುಡಿಯುವ ನೀರು ಯೋಜನೆಯಡಿ ನಿರ್ಮಿಸಿರುವ ನೀರಿನ ಟ್ಯಾಂಕ್ ಉದ್ಘಾಟನೆಯಾಗಿ ಹಲವಾರು ದಿನಗಳು ಕಳೆದರೂ ನೀರು ಸರಬರಾಜು ಮಾಡುತ್ತಿಲ್ಲ ಎಂದು ಆರೋಪಿಸಿ ಅಲ್ಲಿನ ಗ್ರಾಮಸ್ಥರು ಪ್ರತಿಭಟನೆ ಮಾಡುವ ಮೂಲಕ ನೀರು ಬಿಡುವಂತೆ ಒತ್ತಾಯಿಸಿದರು.ಗ್ರಾಮದ ಮುನ್ನೂರಕ್ಕೂ ಹೆಚ್ಚು ಜನರು ಪಂಚಾಯಿತಿ ಎದುರಿನ ರಸ್ತೆಯಲ್ಲಿ ಖಾಲಿಕೊಡ ಪ್ರದರ್ಶಿಸಿ ನೀರು ಬಿಡುವಂತೆ ಒತ್ತಾಯಿಸಿದರು. ಕೆ. ಬಾಡಗ ಗ್ರಾಮ ಪಂಚಾಯಿತಿ ಅಧ್ಯಕ್ಷೆ ಹಾಗೂ ಉಪಾಧ್ಯಕ್ಷರ ನಿರ್ಲಕ್ಷ್ಯದಿಂದ ಕುಡಿಯುವ ನೀರು ಪಡೆಯಲಾಗದೆ ತೊಂದರೆ ಅನುಭವಿಸುತ್ತಿದ್ದೇವೆ ಎಂದು ಆರೋಪಿಸಿದರು.
ಅಲಂತೋಡು ಗ್ರಾಮಕ್ಕೆ ಜಿಲ್ಲಾ ಪಂಚಾಯಿತಿ ಅನುದಾನದಡಿ ರೂ. 6.50 ಲಕ್ಷದಲ್ಲಿ ನಿರ್ಮಾಣವಾಗಿರುವ ಕುಡಿಯುವ ನೀರಿನ ಘಟಕವನ್ನು ಇತ್ತೀಚೆಗೆ ಶಾಸಕ ಕೆ.ಜಿ. ಬೋಪಯ್ಯ ಉದ್ಘಾಟಿಸಿದ್ದಾರೆ, ಆದರೂ ನೀರು ಪೊರೈಕೆ ಮಾಡುತ್ತಿಲ್ಲ ಎಂದು ಪಂಚಾಯಿತಿ ಕಾರ್ಯವೈಖರಿಯ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಜನರ ಸಮಸ್ಯೆಗಳಿಗೆ ಸ್ಪಂದಿಸದ ಪಂಚಾಯಿತಿಗೆ ಬೀಗ ಹಾಕುವಂತೆ ಒತ್ತಾಯಿಸಿದರು. “ಬೇಕೆ ಬೇಕು ನೀರು ಬೇಕು” ಘೋಷಣೆಯೊಂದಿಗೆ ಪ್ರತಿಭಟನಾನಿರತ ಮಹಿಳೆಯರು ಖಾಲಿ ಕೊಡ ಪ್ರದರ್ಶಿಸಿದರು. ಅಧ್ಯಕ್ಷೆ ಉಷಾ ಯಾವದೇ ಕರೆಗಳನ್ನು ಸ್ವೀಕರಿಸದೇ ಇದ್ದ ಕಾರಣ ಪ್ರತಿಭಟನಾಕಾರರು ಮತ್ತಷ್ಟು ಸಿಟ್ಟಿಗೆದ್ದರು. ಅಧ್ಯಕ್ಷರ ವಿರುದ್ಧ ಘೋಷಣೆಗಳನ್ನು ಕೂಗಿದ ಪ್ರತಿಭಟನಾಕಾರರು ಅಧ್ಯಕ್ಷರ ರಾಜೀನಾಮೆಗೆ ಒತ್ತಾಯಿಸಿದರು.
ಪ್ರತಿಭಟನಾ ಸ್ಥಳಕ್ಕೆ ಆಗಮಿಸಿದ ಪಿಡಿಓ ಸೆಲ್ವಜಯಕುಮಾರ್ ಅವರನ್ನು ಪ್ರತಿಭಟನಾಕಾರರು ತೀವ್ರವಾಗಿ ತರಾಟೆಗೆ ತೆಗೆದುಕೊಂಡರು. ಪ್ರತಿಭಟನಾಕಾರರ ಚಿತ್ರಗಳನ್ನು ಮೊಬೈಲ್ನಲ್ಲಿ ಸೆರೆಹಿಡಿಯಲು ಪ್ರಯತ್ನಿಸಿದ ಪಿಡಿಓ ಅವರ ವಿರುದ್ಧ ಘೋಷಣೆ ಕೂಗಿದರು.
ಪಿಡಿಓ ಸೆಲ್ವ ಜಯಕುಮಾರ್ ಮಾತನಾಡಿ, ಸಂಜೆ 5 ಗಂಟೆಯೊಳಗೆ ನೀರು ಪೂರೈಕೆ ವ್ವವಸ್ಥೆ ಮಾಡುವದಾಗಿ ಭರವಸೆ ನೀಡಿದರು. ಪಟ್ಟು ಬಿಡದ ಪ್ರತಿಭಟನಾಕಾರರು ಅಧ್ಯಕ್ಷೆ ಉಷಾ ಸ್ಥಳಕ್ಕೆ ಆಗಮಿಸಿ ನೀರು ಬಿಡುವ ಭರವಸೆ ನೀಡಬೇಕು ಎಂದು ಒತ್ತಾಯಿಸಿದರು. ನೀರು ಸರಬರಾಜು ಮಾಡದೆ ಇರುವದನ್ನು ಪ್ರಶ್ನಿಸಿದ ಗ್ರಾ ಪಂ ಸದಸ್ಯ ಪೆಮ್ಮಣಮಾಡ ನವೀನ್ ಅವರ ವಿರುದ್ದ ಅಧ್ಯಕ್ಷೆ ಉಷಾ ಹೂಡಿರುವ ಕೊಲೆ ಬೆದರಿಕೆ ಪ್ರಕರಣ ಹಿಂಪಡೆಯುವಂತೆ ಒತ್ತಾಯಿಸಿದರು.
ಬೆಳಗ್ಗೆ 10 ಗಂಟೆಗೆ ಆರಂಭವಾದ ಪ್ರತಿಭಟನೆ ಅಧ್ಯಕ್ಷೆ ಸ್ಥಳಕ್ಕೆ ಆಗಮಿಸದೇ ಇದ್ದ ಕಾರಣ 12 ಗಂಟೆಯವರೆಗೂ ನಡೆದು ಕೊನೆಗೊಂಡಿತು. ಪ್ರತಿಭಟನೆ ಮುಂದುವರಿದರೂ ಅಧ್ಯಕ್ಷೆ ಸ್ಥಳಕ್ಕೆ ಆಗಮಿಸಲಿಲ್ಲ. ಪ್ರತಿಭಟನಾಕಾರರು ಪಿಡಿಓ ಸೆಲ್ವ ಜಯಕುಮಾರ್ ಅವರಿಗೆ ಮನವಿ ಸಲ್ಲಿಸಿದರು. ಈ ಸಂದರ್ಭ ಸದಸ್ಯರಾದ ದೀನಾ, ರಾಜು, ಅಶೋಕ್, ಸುನಿಲ್, ಆಲೆಮಾಡ ಮೋಟಯ್ಯ ಇದ್ದರು.