ಶನಿವಾರಸಂತೆ, ಜ. 28: ಜಾನುವಾರು ಜಾತ್ರೆಗಳು ಹಾಗೂ ಸುಗ್ಗಿಹಬ್ಬಗಳು ಇಂದಿಗೂ ಜಾನಪದ ಸಂಸ್ಕೃತಿ ಮತ್ತು ಸಂಸ್ಕಾರದ ಸಂಕೇತಗಳಾಗಿ ಉಳಿದಿವೆ ಎಂದು ಕಿರಿಕೊಡ್ಲಿ ಮಠದ ಸದಾಶಿವ ಸ್ವಾಮೀಜಿ ಅಭಿಪ್ರಾಯಪಟ್ಟರು.ಸಮೀಪದ ಗುಡುಗಳಲೆ ಜಾತ್ರಾ ಮೈದಾನದಲ್ಲಿ ಹಂಡ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಆರಂಭವಾದ 72ನೇ ವರ್ಷದ ಐತಿಹಾಸಿಕ ಗುಡುಗಳಲೆ ಶ್ರೀಜಯದೇವ ಜಾನುವಾರುಗಳ ಜಾತ್ರಾ ಮಹೋತ್ಸವ ಸಮಾರಂಭವನ್ನು ಉದ್ಘಾಟಿಸಿ ಮಾತನಾಡಿದರು.ಧಾರ್ಮಿಕತೆಯ ಬಗ್ಗೆ ಯುವಜನಾಂಗದಲ್ಲಿ ಆಸಕ್ತಿ ಕಡಿಮೆಯಾಗಿದ್ದರೂ ರೈತರು ಹಾಗೂ ಪಶುಪಾಲನಾ ದೃಷ್ಟಿಯಿಂದ ಜಾತ್ರಾ ಸಂಸ್ಕೃತಿ ಜೀವಂತವಾಗಿದೆ. ರೈತ ಕೃಷಿ ಹಾಗೂ ಪಶುಪಾಲನೆ ಬಿಟ್ಟು ಬದುಕಲಾರನೆಂಬದಕ್ಕೆ ಜಾತ್ರೆಗಳೇ ಸಾಕ್ಷಿ ಎಂದರು.
ಜಾನುವಾರು ಹಾಗೂ ಬಸವೇಶ್ವರ ದೇವರ ಅಡ್ಡಪಲ್ಲಕ್ಕಿ ಮೆರವಣಿಗೆಗೆ ಜಾತ್ರಾ ಮೈದಾನದಲ್ಲಿ ಸ್ವಾಗತ ಕೋರಿದ ಜಿಲ್ಲಾ ಪಂಚಾಯಿತಿ ಸದಸ್ಯೆ ಸರೋಜಮ್ಮ ಮಾತನಾಡಿ, ಜಾನಪದ ಸೊಗಡಿನ ಜಾನುವಾರು ಜಾತ್ರೆಗಳು ಗ್ರಾಮೀಣ ಸಂಸ್ಕೃತಿಯ ಪ್ರತೀಕವಾಗಿವೆ. ಹಳ್ಳಿಗಳಲ್ಲಿ ಒಕ್ಕಲುತನದ ಹಿನ್ನಲೆಯಲ್ಲಿ ಜಾತ್ರೆಗಳು ನಡೆದು ಬರುತ್ತಿವೆ ಎಂದರು.
ಸಮಾರಂಭ ಉದ್ಘಾಟಿಸಿದ ಪಿಎಸ್ಐ ಎಚ್.ಎಂ.ಮರಿಸ್ವಾಮಿ ಹಾಗೂ ಶಿಡಿಗಳಲೆ ಮಠದ ಇಮ್ಮಡಿ ಶಿವಲಿಂಗಸ್ವಾಮಿ ಮಾತನಾಡಿ, ಜನರಿಗೆ ಸಂತೋಷ ಸಿಗುವ ಸ್ಥಳವೇ ಜಾತ್ರೆ. ಮನೋರಂಜನೆಯೊಂದಿಗೆ ದೇಹ-ಆತ್ಮದ ರಂಜನೆಯೂ ಸಿಗುತ್ತದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಬಸವೇಶ್ವರ ದೇವಸ್ಥಾನ ಸಮಿತಿ ಅಧ್ಯಕ್ಷ ಡಿ.ಬಿ.ಧರ್ಮಪ್ಪ ಮಾತನಾಡಿ, ಜಾನುವಾರು ಜಾತ್ರೆ ಗತವೈಭವವನ್ನು ಮರುಕಳಿಸುತ್ತಾ ವ್ಯವಸ್ಥಿತವಾಗಿ ನಡೆದು ಬಂದರೆ ಮಾತ್ರ ಮುಂದಿನ ಪೀಳಿಗೆಗೆ ಜಾತ್ರಾ ಸಂಸ್ಕೃತಿಯ ಪರಿಚಯ ವಾಗುತ್ತದೆ.ಇಲ್ಲವಾದಲ್ಲಿ ನೇಗಿಲು, ನೊಗದೊಂದಿಗೆ ಜಾನುವಾರುಗಳನ್ನೂ ಚಿತ್ರದಲ್ಲಿ ತೋರಿಸಬೇಕಾಗುತ್ತದೆ ಎಂದು ಆತಂಕ ವ್ಯಕ್ತಪಡಿಸಿದರು.
ತಾಲೂಕು ಪಂಚಾಯಿತಿ ಸದಸ್ಯರಾದ ಕುಶಾಲಪ್ಪ, ಲೀಲಾವತಿ, ಜಾತ್ರಾ ಸಮಿತಿ ಅಧ್ಯಕ್ಷ ಎಚ್.ಎಸ್. ಸೋಮಶೇಖರ್, ಕಾರ್ಯದರ್ಶಿ ಎಚ್.ಎನ್.ಸಂದೀಪ್, ಉಪಾಧ್ಯಕ್ಷೆ ರೂಪಾ, ಪ್ರಮುಖರಾದ ಎಸ್.ಎಸ್.ಗಣೇಶ್, ಸಿ.ವಿ.ವಿಶ್ವನಾಥ್, ಕಾಂತರಾಜ್, ಸುಧಾಕರ್, ನಿರ್ಮಲಾ, ಪಿಡಿಒ ವೇಣುಗೋಪಾಲ್ ಮತ್ತಿತರರು ಉಪಸ್ಥಿತರಿದ್ದರು. -ನರೇಶ್ಚಂದ್ರ.