ನಾಪೋಕ್ಲು, ಆ. 12: ಕಾಫಿ ಉದ್ಯಮ ಇದೀಗ ಸಂಕಷ್ಟದಲ್ಲಿದೆ. ಹವಾಮಾನ ವೈಪರಿತ್ಯ, ನುರಿತ ಕೂಲಿ ಕಾರ್ಮಿಕರ ಕೊರತೆ, ರಸಗೊಬ್ಬರ ಬೆಲೆ ಏರಿಕೆಯಿಂದ ಉತ್ಪಾದನಾ ವೆಚ್ಚ ಹೆಚ್ಚಾಗುತ್ತಿದ್ದು, ಬೆಲೆ ಕಡಿಮೆ ಯಾಗುತ್ತಿದೆ. ಪರಿಣಾಮ ಬೆಳೆಗಾರರು ಸಂಕಷ್ಟಕ್ಕೆ ಸಿಲುಕಿದ್ದಾರೆ ಎಂದು ಕಾಫಿ ಮಂಡಳಿ ಮಾಜಿ ಉಪಾಧ್ಯಕ್ಷ ಡಾ. ಸಣ್ಣುವಂಡ ಕಾವೇರಪ್ಪ ಹೇಳಿದರು.

ಕಾಫಿ ಮಂಡಳಿಯ ವಿಸ್ತರಣಾ ವಿಭಾಗದ ವತಿಯಿಂದ ಬೇತು ಗ್ರಾಮಮಟ್ಟದ ಕಾಫಿ ಬೆಳೆಗಾರರ ಸಭೆಯಲ್ಲಿ ಅವರು ಮಾತನಾಡಿದರು. ಕಾಫಿ ವಹಿವಾಟು ಶೇ. 70 ರಷ್ಟು ವಿದೇಶವನ್ನು ಅವಲಂಭಿಸಿ ರುವದರಿಂದ ಬೆಳೆಗಾರರ ಕಾಫಿಯ ಗುಣಮಟ್ಟ ಮತ್ತು ಉತ್ಪಾದನಾ ಹೆಚ್ಚೆಳಕ್ಕೆ ಶ್ರಮಿಸಬೇಕಾಗಿದೆ.

ಕಾಫಿ ಮಂಡಳಿ ಕೋಮಾ ಸ್ಥಿತಿಯಲ್ಲಿದ್ದು ಎಂಟು ತಿಂಗಳಿನಿಂದ ಕೇಂದ್ರ ಸರ್ಕಾರ ಬೆಳೆಗಾರರಿಗೆ ಅನುದಾನದ ಹಣ ನೀಡುತ್ತಿಲ್ಲ. ಮಕ್ಕಳ ವಿದ್ಯಾಭ್ಯಾಸಕ್ಕೆ ನೀಡುತ್ತಿರುವ ವಿದ್ಯಾರ್ಥಿ ವೇತನದ ಹಣ ಇಲ್ಲ. ಕಳೆದ ಒಂದು ವರ್ಷ ಎರಡು ತಿಂಗಳಿನಿಂದ ಕಾಫಿ ಮಂಡಳಿಯ ಯಾವದೇ ಸಭೆ ಜರುಗಿಲ್ಲ. ಕಾಫಿ ಮಂಡಳಿಯಿಂದ ಬರುವ ಅನುದಾನ ಶೇ. 30 ಕಡಿತಗೊಂಡಿದೆ. ಜನಪ್ರತಿನಿಧಿಗಳು ಬೆಳೆಗಾರರ ಬೇಡಿಕೆಯನ್ನು ಕೇಂದ್ರ ಸರ್ಕಾರಕ್ಕೆ ತಿಳಿಸಿ ಅನುದಾನ ಬಿಡುಗಡೆ ಗೊಳಿಸುವಲ್ಲಿ ಸಫಲರಾಗಬೇಕಾಗಿದೆ. ಆದ್ದರಿಂದ ಇಂದು ಎಲ್ಲಾ ಬೆಳೆಗಾರರು ಮತ್ತು ಬೆಳೆಗಾರರ ಸಂಘಟನೆಗಳು ರಾಜಕೀಯ ಮುಖಂಡರು ಒಟ್ಟಾಗಿ ಜನಪ್ರತಿ ನಿಧಿಗಳ ಮೂಲಕ ಒತ್ತಡ ಹೇರಿ ಅನುದಾನ ಬಿಡುಗಡೆ ಗೊಳಿಸಲು ಶ್ರಮಿಸಬೇಕಾಗಿದೆ. ಈ ಹಣ ಮಾರ್ಚ್ 2017 ರೊಳಗೆ ಬಿಡುಗಡೆ ಗೊಳ್ಳದಿದ್ದಲ್ಲಿ ಕಾಫಿ ಮಂಡಳಿಗೆ ದೊರೆತ 950 ಕೋಟಿ ಹಣ ವಾಪಾಸು ಹೋಗಲಿದೆ. ಇನ್ನಾದರೂ ಒಂದು ಸದೃಢ ಬೆಳೆಗಾರರ ಸಂಘಟನೆ ರೂಪು ಗೊಂಡಲ್ಲಿ ಮಾತ್ರ ಬೆಳೆಗಾರರಿಗೆ ಉಳಿಗಾಲವಿದೆ ಎಂದರು

ಅಪ್ಪಂಗಳ ಏಲಕ್ಕಿ ಸಂಶೋಧನಾ ಕೇಂದ್ರದ ಮುಖ್ಯಸ್ಥ ಡಾ. ಅಂಕೇಗೌಡ ಕಾಳುಮೆಣಸಿನ ಬಗ್ಗೆ ಸಮಗ್ರ ಮಾಹಿತಿ ನೀಡಿ ಏಪ್ರಿಲ್ ಮತ್ತು ಮೇ ತಿಂಗಳಲ್ಲಿ ಮಳೆ ಸಿಕ್ಕರೆ ಮಾತ್ರ ಉತ್ತಮ ಇಳುವರಿ ಸಾಧ್ಯ. ಬೆಳೆಗಾರರು ತಮ್ಮ ತೋಟದಲ್ಲಿ ನರ್ಸರಿ ಮಾಡುವದ ರಿಂದ ಉತ್ತಮ ಬೆಳೆ ಪಡೆಯಬಹುದು ಎಂದರು. ನಿವೃತ್ತ ಶಿಕ್ಷಕ ಚೋಕಿರ ಪೊನ್ನಪ್ಪ ಅಧ್ಯಕ್ಷತೆ ವಹಿಸಿದ್ದ ಕಾರ್ಯಕ್ರಮದಲ್ಲಿ ಕಾಫಿ ಮಂಡಳಿಯ ನಾಪೋಕ್ಲು ವಿಭಾಗದ ಜೆಎಲ್‍ಓ ಬಿ.ಕೆ. ಪೂಣಚ್ಚ ಉಪಸ್ಥಿತರಿದ್ದರು. ಕಾರ್ಯಕ್ರಮದಲ್ಲಿ ಸಂಘ ಸಂಸ್ಥೆಗಳ ಪ್ರತಿನಿಧಿಗಳು ಹಾಗೂ ಬೆಳೆಗಾರರು ಉಪಸ್ಥಿತರಿದ್ದರು.

- ದುಗ್ಗಳ