ಚೆಟ್ಟಳ್ಳಿ, ಜ. 17: ಕೊಡಗಿನಲ್ಲೀಗ ಕಾಫಿ ಫಸಲಿನ ಸಮಯ. ತೋಟಗಳಲ್ಲೆಲ್ಲ ಬೀಡುಬಿಟ್ಟ ಕಾಡಾನೆಗಳ ಲದ್ದಿಯ ತುಂಬೆಲ್ಲ ಕಾಫಿ ಬೀಜಗಳೇ ಕಾಣಬರುತ್ತಿದೆ.
ಒಂದೆಡೆ ಪ್ರಾಣಿ-ಪಕ್ಷಿಗಳು ಕಾಫಿ ಹಣ್ಣು ತಿಂದು ಫಸಲನ್ನು ನಾಶಪಡಿಸುತ್ತಿದ್ದರೆ, ಮತ್ತೊಂದೆಡೆ ಕಾಡಾನೆಗಳು ಸೊಂಡಿಲಿನಿಂದ ಕಾಫಿಯನ್ನು ಹೀರಿ ಬಾಯಿಗಿಟ್ಟು ಚಪ್ಪರಿಸಿ ನುಂಗುತ್ತಿವೆ. ಇಂತಹ ಆನೆಯ ದಂಡು ಫಸಲನ್ನು ತಿಂದು ನಷ್ಟಪಡಿಸಿ ಬಿಟ್ಟರೆ ವರ್ಷದಲ್ಲಿ ಒಂದು ಬಾರಿ ಬರುವ ಫಸಲಿಗೆ ಕಾದು ಕೂರುವ ಬೆಳೆಗಾರನಿಗೆ ನಷ್ಟವೋ ನಷ್ಟ. ಕೊಡಗಿನ ವಿವಿಧ ಕಡೆಗಳಲ್ಲಿ ಫಸಲು ನಷ್ಟಪಡಿಸುವ ಕಾಡಾನೆಗಳಿಂದ ಬೇಸತ್ತು ಕಾಡಾನೆಯ ಲದ್ದಿಯೊಳಗಿಂದ ಬೀಜಗಳನ್ನು ಬೇರ್ಪಡಿಸುವಲ್ಲಿ ಬೆಳೆಗಾರ ತೊಡಗಿದರೆ, ಕಂಪೆನಿ ತೋಟಗಳಲ್ಲಿ ಕಾಫಿ ಫಸಲಿನ ಸಮಯದಲ್ಲಿ ಕೆಲ ಕಾರ್ಮಿಕರನ್ನು ಲದ್ದಿಯಿಂದ ಬೀಜಗಳನ್ನು ಹೆಕ್ಕಲು ಬಿಡಲಾಗುತ್ತಿದೆ.
ಕೊಡಗಿನ ಕೆಲವು ಕಾಫಿ ತೋಟಗಳ ಬುಡದಲ್ಲಿ ಅಲ್ಲೋ ಇಲ್ಲೋ ಕಾಣಬರುವ ಕಾಡು ಬೆಕ್ಕು (ಕಬ್ಬೆಕ್ಕು) ಕಾಫಿ ತಿಂದು ಹಾಕುತ್ತಿದೆ.
ಇದಕ್ಕೆ ಕೊಡಗಿನಲ್ಲಿ ಬೆಲೆ ಇಲ್ಲದಿದ್ದರೂ ಸಿವೆಟ್ ಕಾಫಿ ಎಂದೇ ವಿದೇಶದಲ್ಲಿ ಬಾರಿ ಬೇಡಿಕೆ ಇದೆ. ಕಾಡು ಬೆಕ್ಕು ಆಯ್ದ ಕಾಫಿಯನ್ನು ತಿಂದಾಗ ಅದರ ಹೊಟ್ಟೆಯಲ್ಲಿ ಆಗುವ ಪಚನ ಕ್ರಿಯೆಯಲ್ಲಿ ಆಗುವ ಕಾಫಿ ಬೀಜದ ಗುಣಮಟ್ಟದ ಬದಲಾವಣೆಗೆ ಸಿವೆಟ್ ಕಾಫಿಗೆ ಎಂದೇ ಹೆಚ್ಚಿನ ಬೆಲೆಗೆ ಮಾರಾಟವಾಗುತ್ತಿದೆ.
ಆನೆಗಳು ತಿಂದು ಹಾಕುವ ಕಾಫಿ ಬೀಜಕ್ಕೂ ವಿದೇಶಗಳಲ್ಲಿ ಬಾರಿ ಬೇಡಿಕೆ ಇದ್ದು, ಸಾಕಾನೆಗಳಿಗೆ ಕಾಫಿ ಬೀಜವನ್ನು ತಿನ್ನಿಸಿ ಅದರ ಲದ್ದಿಯಲ್ಲಿರುವ ಬೀಜಗಳನ್ನೆಲ್ಲ ಹೆಕ್ಕಿ ಶುದ್ಧೀಕರಿಸಿ ಪ್ರತ್ಯೇಕವಾಗಿ ಹೆಚ್ಚಿನ ಬೆಲೆಗೆ ಮಾರಾಟ ಮಾಡಲಾಗುತ್ತಿದೆ.
- ಕರುಣ್ ಕಾಳಯ್ಯ