ಕುಶಾಲನಗರ, ಜ. 17: ನದಿ ತಟಗಳಲ್ಲಿ ಗ್ರಾಮ ಪಂಚಾಯಿತಿ ಮಾಂಸ ಮಾರಾಟ ಮಳಿಗೆಗಳಿಗೆ ಅನುಮತಿ ಕಲ್ಪಿಸದಂತೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿ ಕಾವೇರಿ ನದಿ ತಟದ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಮನವಿ ಸಲ್ಲಿಸಿದೆ. ಕಾವೇರಿ ಮತ್ತು ಹಾರಂಗಿ ನದಿ ತಟಗಳಲ್ಲಿ ಪಂಚಾಯಿತಿಯ ಮಾಂಸ ಮಾರಾಟ ಮಳಿಗೆಗಳಿಗೆ ಅನುಮತಿ ನೀಡುವ ಮೂಲಕ ನದಿಗೆ ಕಲುಷಿತ ತ್ಯಾಜ್ಯಗಳನ್ನು ಹರಿಸುವ ಮೂಲಕ ಮಾಲಿನ್ಯಗೊಳಿಸುತ್ತಿರುವ ದೃಶ್ಯಗಳು ಕಂಡುಬರುತ್ತಿದ್ದು, ತಕ್ಷಣ ಅಂತಹ ಮಳಿಗೆಗಳನ್ನು ತೆರವುಗೊಳಿಸಲು ಕ್ರಮ ಕೈಗೊಳ್ಳಬೇಕೆಂದು ಸಮಿತಿ ಆಗ್ರಹಿಸಿದೆ.
ಸೋಮವಾರಪೇಟೆ ತಾಲೂಕು ಕೂಡಿಗೆ, ಕೂಡುಮಂಗಳೂರು ವ್ಯಾಪ್ತಿಯಲ್ಲಿ ಹಾರಂಗಿ ನದಿ ತಟದಲ್ಲಿ ಹಂದಿ, ಕೋಳಿ, ಕುರಿ ಮಾಂಸಗಳ ಮಾರಾಟ ಮಳಿಗೆಗಳಿಗೆ ಅನುಮತಿ ಕಲ್ಪಿಸಿದ್ದು, ಮಳಿಗೆಗಳಲ್ಲಿ ಉತ್ಪಾದನೆಯಾಗುತ್ತಿರುವ ತ್ಯಾಜ್ಯಗಳು ಮತ್ತು ರಕ್ತ ಇತ್ಯಾದಿ ನದಿಗೆ ಹರಿದು ನದಿ ನೀರು ಸಂಪೂರ್ಣ ಮಾಲಿನ್ಯಗೊಂಡು ರೋಗ ರುಜಿನಗಳು ಸೃಷ್ಟಿಯಾಗುತ್ತಿವೆ. ಇದೇ ರೀತಿ ಗುಡ್ಡೆಹೊಸೂರು ಗ್ರಾಮ ಪಂಚಾಯಿತಿ ವ್ಯಾಪ್ತಿಯ ಗಂಧದಕೋಟೆ ಬಳಿ ಮತ್ತು ನೆಲ್ಲಿಹುದಿಕೇರಿ ಹೆದ್ದಾರಿ ಒತ್ತಿನಲ್ಲಿ ಕೋಳಿ ಮಾಂಸ ಮಾರುಕಟ್ಟೆ, ಮೀನು ಮಾರುಕಟ್ಟೆಯಿಂದ ತ್ಯಾಜ್ಯಗಳು ನೇರವಾಗಿ ನದಿಗೆ ಹರಿಯುತ್ತಿದೆ.
ಈ ಮೂಲಕ ಜೀವನದಿ ಸಂಪೂರ್ಣ ಕಲುಷಿತ ಗೊಳ್ಳುತ್ತಿರುವ ದಾಗಿ ಮನವಿ ಪತ್ರದಲ್ಲಿ ತಿಳಿಸಿದ್ದು, ಕಳೆದ 2 ವರ್ಷಗಳಿಂದ ಜಿಲ್ಲಾಡಳಿತ, ಕರ್ನಾಟಕ ರಾಜ್ಯ ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಹಲವು ಆದೇಶಗಳು ಬಂದಿದ್ದರೂ ಅಭಿವೃದ್ಧಿ ಅಧಿಕಾರಿಗಳ ನಿರ್ಲಕ್ಷ್ಯದಿಂದ ನಿಯಮ ಮತ್ತು ಕಾನೂನು ಉಲ್ಲಂಘಿಸಿ ಮಾರುಕಟ್ಟೆಗೆ ಅನುಮತಿ ನೀಡುತ್ತಿರುವದು ಕಂಡುಬಂದಿದ್ದು ತಕ್ಷಣ ಇಂತಹ ಮಳಿಗೆಗಳನ್ನು ತೆರವುಗೊಳಿಸುವದು ತಪ್ಪಿದಲ್ಲಿ ರಾಜ್ಯ ಉಚ್ಚ ನ್ಯಾಯಾಲಯದ ಮೂಲಕ ಕಾನೂನು ಮೊರೆ ಹೋಗಲಾಗುವದು ಎಂದು ಪತ್ರದಲ್ಲಿ ಎಚ್ಚರಿಸಲಾಗಿದೆ.
ಈ ಸಂಬಂಧ ನದಿ ತಟಗಳಾದ ಕೂಡಿಗೆ, ಕೂಡುಮಂಗಳೂರು, ಗುಡ್ಡೆಹೊಸೂರು, ಕುಶಾಲನಗರ, ನಂಜರಾಯಪಟ್ಟಣ ಮತ್ತು ನೆಲ್ಲಿಹುದಿಕೇರಿ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿಗಳಿಗೆ ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯಿಂದ ಪತ್ರ ನೀಡಲಾಗಿದೆ ಎಂದು ಸಮಿತಿಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ತಿಳಿಸಿದರು.