ಮಡಿಕೇರಿ, ಅ. 31: ದಿ. ಇಂದಿರಾಗಾಂಧಿ ನಾಲ್ಕು ಬಾರಿ ದೇಶದ ಪ್ರಧಾನಿಯಾಗಿದ್ದು, ದೇಶದಲ್ಲಿ ಬಡತನ ನಿರ್ಮೂಲನೆ ಮಾಡಲು ಶ್ರಮಿಸಿದ್ದರು. ಅಂತಹ ದಿಟ್ಟ, ಧೀಮಂತ ನಾಯಕಿಯನ್ನು ಹೊಂದಿದ್ದ ಪಕ್ಷ ಕಾಂಗ್ರೆಸ್ ಎಲ್ಲಾ ವರ್ಗದ ಜನರ ಪಕ್ಷವಾಗಿದೆ ಎಂದು ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ಅಭಿಪ್ರಾಯಪಟ್ಟಿದ್ದಾರೆ.
ನಗರದ ಕೊಡವ ಸಮಾಜದ ಸಭಾಂಗಣದಲ್ಲಿ ಜಿಲ್ಲಾ ಕಾಂಗ್ರೆಸ್ ವತಿಯಿಂದ ಆಯೋಜಿಸಲಾಗಿದ್ದ ಮಾಜಿ ಪ್ರಧಾನಿ ದಿ. ಇಂದಿರಾಗಾಂಧಿ ಅವರ 32ನೇ ಪುಣ್ಯತಿಥಿ ಪ್ರಯುಕ್ತ ನಡೆದ ಸಂಸ್ಮರಣಾ ದಿನ ಹಾಗೂ ರಾಷ್ಟ್ರೀಯ ಭಾವೈಕ್ಯತಾ ದಿನಾಚರಣೆಯನ್ನು ಉದ್ಘಾಟಿಸಿ ದಿ. ಇಂದಿರಾಗಾಂಧಿ ಅವರ ಭಾವಚಿತ್ರಕ್ಕೆ ಪುಷ್ಪಾರ್ಚನೆ ಮಾಡಿ ಮಾತನಾಡಿದರು.
ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಪೂರ್ವ ಪಾಕಿಸ್ತಾನ ಹಾಗೂ ಪಶ್ಚಿಮ ಪಾಕಿಸ್ತಾನಗಳ ಉಪಟಳ ಹೆಚ್ಚಾಗಿತ್ತು. ಆ ರಾಷ್ಟ್ರಗಳ ವಿರುದ್ಧ ದಿಟ್ಟ ನಿರ್ಧಾರ ಕೈಗೊಂಡ ಇಂದಿರಾಗಾಂಧಿಯವರು ಪಾಕಿಸ್ತಾನದ ಹುಟ್ಟಡಗಿಸುವಲ್ಲಿ ಸಫಲರಾಗಿದ್ದರು. ಅಂದು ವಿರೋಧ ಪಕ್ಷದ ನಾಯಕರಾಗಿದ್ದ ಅಟಲ್ ಬಿಹಾರಿ ವಾಜಪೇಯಿ ಅವರು ಇಂದಿರಾಗಾಂಧಿಯನ್ನು
(ಮೊದಲ ಪುಟದಿಂದ) ದುರ್ಗೆಗೆ ಹೋಲಿಸಿದ್ದರು ಎಂದು ನೆನಪಿಸಿದರು. ದೇಶದಲ್ಲಿ ಹಿಂದೂ, ಮುಸ್ಲಿಂ ಹಾಗೂ ಕ್ರೈಸ್ತ ಎಂಬ ಮತಬೇಧ ಸಲ್ಲದು. ಎಲ್ಲರೂ ಮನುಷ್ಯರಾಗಿದ್ದು, ಭಾವೈಕ್ಯತೆಯಿಂದ ಒಂದುಗೂಡಿ ಸಾಗಬೇಕು. ಅಖಂಡ ಭಾರತದ ಏಕತೆಗೆ ಯಾವದೇ ಧಕ್ಕೆಯಾಗದ ರೀತಿ ಬೇರೆಯವರ ಕುತಂತ್ರಕ್ಕೆ ಮಣಿಯದೇ ಒಗ್ಗಟ್ಟಾಗಿರೋಣ ಎಂದು ಹೇಳಿದರು.
ಮಾಜಿ ಸಂಸದ ಅಡಗೂರು ವಿಶ್ವನಾಥ್ ಮಾತನಾಡಿ, ದೇಶದ ಸಣ್ಣ ರಾಜರುಗಳು ಹಾಗೂ ಪಾಳೇಗಾರರನ್ನು ದೇಶದ ಅಖಂಡತೆಗೆ ಸೇರಿಸುವಲ್ಲಿ ಇಂದಿರಾಗಾಂಧಿ ಬಹಳಷ್ಟು ಶ್ರಮಿಸಿದ್ದಾರೆ. ಅಖಂಡ ಭಾರತದ ನಿರ್ಮಾಣಕ್ಕೆ ಬುನಾದಿಯಾಗಿದ್ದರು. ಮಾದರಿ ಆಡಳಿತ ನೀಡುವ ಮೂಲಕ ಬ್ಯಾಂಕು, ಉಕ್ಕು, ಬಟ್ಟೆ, ಕೈಗಾರಿಕೆಗಳನ್ನು ರಾಷ್ಟ್ರೀಕರಣಗೊಳಿಸಿ ಭಾರತದ ಬೆಳವಣಿಗೆಗೆ ಕಾರಣರಾಗಿದ್ದರು. ರಾಜಕೀಯ ಅಸ್ಥಿರತೆ, ಭ್ರಷ್ಟಾಚಾರ ಹಾಗೂ ಭಯೋತ್ಪಾದನೆ ಹೆಚ್ಚಾಗಿದ್ದವು. ಅಂತಹ ಸಂದರ್ಭಗಳಲ್ಲಿ ಸಂವಿಧಾನದ ಅಸ್ತ್ರ ಪ್ರಯೋಗ ಮಾಡಿ ಸ್ವಾಭಿಮಾನದ ಬುನಾದಿ ಹಾಕಿದರು. 1974ರಲ್ಲಿ ಭೂಸುಧಾರಣಾ ಕಾಯಿದೆ ಜಾರಿಗೆ ತಂದು ಬಡವರಿಗೂ ಭೂಮಿ ಸಿಗುವಂತಾಯಿತು ಎಂದರು.
ನೆಹರೂ ಕುಟುಂಬಕ್ಕೆ ಜಾತಿ, ಮತ ಬೇಧವಿರಲಿಲ್ಲ. ಭಾರತ ಭಾರತೀಯರು ಮತ್ತು ಕಾಂಗ್ರೆಸ್ ಮಾತ್ರವಾಗಿತ್ತು. ದೇಶವನ್ನು ಮುನ್ನಡೆಸುವ ಶಕ್ತಿ ಕಾಂಗ್ರೆಸ್‍ಗೆ ಮಾತ್ರವಿದೆ. ಪಕ್ಷದ ಕಾರ್ಯಕರ್ತರು ಸಣ್ಣಪುಟ್ಟ ವಿಚಾರಗಳನ್ನು ಮರೆತು ಒಂದಾಗಿ ಸಾಗೋಣವೆಂದರು.
ಚಾಮರಾಜನಗರ ಶಾಸಕ ವಾಸು ಮಾತನಾಡಿ ಪಾಕ್, ಚೀನಾ ಯುದ್ಧಗಳಿಗೆ ಬಗ್ಗದ ಶಕ್ತಿ ಇಂದಿರಾಗಾಂಧಿಯಾಗಿದ್ದರು. ಯುವ ಪೀಳಿಗೆಗೆ ಇಂದಿರಾಗಾಂಧಿಯವರ ಶಕ್ತಿಯ ಬಗ್ಗೆ ಅರಿವು ಮೂಡಿಸಬೇಕಾಗಿದೆ. ಇಂದಿರಾಗಾಂಧಿ ತಮ್ಮ ರಕ್ತ ಸುರಿಸಿ ಬಲಿಷ್ಠ ಕಾಂಗ್ರೆಸ್ ಕಟ್ಟಿದ್ದಾರೆ. ಅಂತಹ ಧೀಮಂತ ಮಹಿಳೆಯನ್ನು ದೇಶಕ್ಕೆ ಕೊಡುಗೆಯಾಗಿ ನೀಡಿದ ನೆಹರೂ ಅವರನ್ನು ಸ್ಮರಿಸುವ ಅವಶ್ಯಕತೆಯಿದೆ. ಇಂದು ಕಾಂಗ್ರೆಸ್ ಜಗತ್ತಿನ ಏಕೈಕ ದೊಡ್ಡ ಪಕ್ಷವಾಗಿದೆ. ಹಿರಿಯರ ಕೊಡುಗೆಯನ್ನು ಸ್ಮರಿಸುವ ಅಗತ್ಯವಿದೆ ಎಂದು ಹೇಳಿದರು.
ಮಾಜಿ ಸಚಿವೆ ಸುಮಾವಸಂತ್ ಮಾತನಾಡಿ, ದೇಶಕ್ಕೆ ಇಂದಿರಾಗಾಂಧಿ ಅವರ ಕೊಡುಗೆ ಅಪಾರ. ಯುವ ಪೀಳಿಗೆಗೆ ಇಂದಿರಾಜೀ ಅವರ ಕೊಡುಗೆಯ ಅರಿವಿಲ್ಲ. ಶಾಂತಿ, ಸೌಹಾರ್ದತೆಯಿಂದ ಬದುಕಿ ಒಗ್ಗಟ್ಟಾಗಿ ಪಕ್ಷವನ್ನು ಮುನ್ನಡೆಸೋಣವೆಂದರು.
ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ ಮಾತನಾಡಿ, ಅರ್ಥಪೂರ್ಣವಾದ ಕಾರ್ಯಕ್ರಮವಾಗಿದ್ದು, ಇಂದಿರಾಗಾಂಧಿ ಅವರ ಸ್ಮರಣೆಯೊಂದಿಗೆ ಪಕ್ಷವನ್ನು ಬಲಿಷ್ಠವಾಗಿ ಕಟ್ಟಿ ಬೆಳೆಸೋಣ ಎಂದು ಹೇಳಿದರು.
ಕೆಪಿಸಿಸಿ ಕಾರ್ಯದರ್ಶಿ ಹುಸೇನ್ ಮಾತನಾಡಿ, ಪಕ್ಷದ ಕಾರ್ಯಕರ್ತರು ಇಂದು ಮೌಲ್ಯಮಾಪನ ಮಾಡಿಕೊಳ್ಳಬೇಕಾದ ಅವಶ್ಯಕತೆಯಿದೆ. ಕಾಂಗ್ರೆಸ್ ಮತ್ತು ಇಂದಿರಾಗಾಂಧಿ ಅವರ ಆಡಳಿತಕ್ಕೆ ಯಾವದೇ ಆಡಳಿತ ಸರಿಸಾಟಿಯಿಲ್ಲ. ನರೇಂದ್ರ ಮೋದಿ ಆಡಳಿತವೂ ಸರಿಸಾಟಿಯಲ್ಲ. ಇಂದಿರಾಗಾಂಧಿ ಪ್ರಧಾನಿಯಾಗಿದ್ದ ಸಂದರ್ಭ ಚೀನಾ ಮತ್ತು ಪಾಕ್ ವಿರುದ್ಧ ಅಂದೇ ಸರ್ಜಿಕಲ್ ಸೆಟ್ರೈಕ್ ಮಾಡಿ ಅದರಲ್ಲಿಯೇ ದೊಡ್ಡ ಪ್ರಚಾರ ಗಿಟ್ಟಿಸಿಕೊಳ್ಳುತ್ತಿದ್ದಾರೆ. ಕಾರ್ಯಕರ್ತರು ಕಾಂಗ್ರೆಸ್‍ನ ಕೊಡುಗೆಯನ್ನು ಜನಸಾಮಾನ್ಯರಿಗೆ ಮನವರಿಕೆ ಮಾಡಿಕೊಡಬೇಕು. ಜಿಲ್ಲೆಯಲ್ಲಿ ಕಾಂಗ್ರೆಸ್‍ನ್ನು ಮತ್ತೆ ಭದ್ರಕೋಟೆ ಮಾಡುವಲ್ಲಿ ಮುಂದಿನ ಚುನಾವಣೆಯಲ್ಲಿ ಎರಡೂ ಕ್ಷೇತ್ರದಲ್ಲಿಯೂ ಗೆಲುವು ಸಾಧಿಸಬಹುದು ಎಂದರು.
ಜಿಲ್ಲಾ ಕಾಂಗ್ರೆಸ್ ಅಧ್ಯಕ್ಷ ಟಿ.ಪಿ. ರಮೇಶ್ ಅಧ್ಯಕ್ಷತೆ ವಹಿಸಿ ಪ್ರಾಸ್ತಾವಿಕವಾಗಿ ಮಾತನಾಡಿದರು. ಈ ಸಂದರ್ಭ ಮಾಜಿ ವಿಧಾನ ಪರಿಷತ್ ಸದಸ್ಯ ಸಿ.ಎಸ್. ಅರುಣ್ ಮಾಚಯ್ಯ, ಮಾಜಿ ಶಾಸಕ ಕೆ.ಎಂ. ಇಬ್ರಾಹಿಂ, ಮಾಜಿ ಜಿಲ್ಲಾಧ್ಯಕ್ಷ ಬಿ.ಟಿ. ಪ್ರದೀಪ್, ಸೋಮವಾರಪೇಟೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಕೆ.ಎಂ. ಲೋಕೇಶ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಹಿರಿಯ ಮುಖಂಡರಾದ ಮಿಟ್ಟು ಚಂಗಪ್ಪ, ಜೆ.ಎ. ಕರುಂಬಯ್ಯ, ಚಂದ್ರಮೌಳಿ, ಪದ್ಮಿನಿ ಪೊನ್ನಪ್ಪ ಹಾಗೂ ಇನ್ನಿತರರು ಇದ್ದರು. ಜಿಲ್ಲಾ ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್ ಸ್ವಾಗತಿಸಿದರು.