ಮಡಿಕೇರಿ, ಅ. 31: ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯ ಗೌಡರ ಸ್ಮಾರಕ ಭವನ ನಿರ್ಮಾಣಕ್ಕೆ ಪ್ರಯತ್ನಿಸಲಾಗುವ ದೆಂದು ರಾಜ್ಯ ವಸತಿ ಸಚಿವ ಎಂ. ಕೃಷ್ಣಪ್ಪ ಭರವಸೆ ನೀಡಿದರು.ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ, ಕರ್ನಾಟಕ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ವತಿಯಿಂದ ಕೋಟೆ ಆವರಣದಲ್ಲಿ ಏರ್ಪಡಿಸಲಾಗಿದ್ದ ಸ್ವಾತಂತ್ರ್ಯ ಹೋರಾಟಗಾರ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆಯನ್ನು ಉದ್ಘಾಟಿಸಿ ಅವರು ಮಾತನಾಡಿದರು. 1857ರ ಸಿಪಾಯಿ ದಂಗೆಯನ್ನು ಮೊದಲ ಸ್ವಾತಂತ್ರ್ಯ ಸಂಗ್ರಾಮ ಎಂದು ಹೇಳಲಾಗುತ್ತಿದೆ. ಆದರೆ, ಅದಕ್ಕಿಂತಲೂ ಮೊದಲು ಅಂದರೆ 1837ರಲ್ಲಿಯೇ ಕೊಡಗಿನಲ್ಲಿ ಬ್ರಿಟೀಷರ ವಿರುದ್ಧ ಸಮರ ಸಾರಿರುವದು ಹೆಮ್ಮೆಯ ವಿಷಯ. ಹೋರಾಟದ ಮುಂಚೂಣಿಯಲ್ಲಿದ್ದ ಸುಬೇದಾರ್ ಗುಡ್ಡೆಮನೆ ಅಪ್ಪಯ್ಯಗೌಡರನ್ನು ಎಲ್ಲರೆದುರು ಗಲ್ಲಿಗೇರಿಸಿ ಇನ್ನು ಮುಂದಕ್ಕೆ ಬಂಡಾಯ ತಳಬಾರದೆಂಬು ಎಚ್ಚರಿಕೆಯನ್ನು ಬ್ರಿಟೀಷರು ನೀಡಿದ್ದರು.

ತನ್ನ ಕುಟುಂಬ ಬಿಟ್ಟು ನಾಡಿಗೋಸ್ಕರ ಹೋರಾಡಿದ ಅಪ್ಪಯ್ಯಗೌಡರು ನಮಗೆ ಸ್ಫೂರ್ತಿದಾಯಕರು, ಅವರ ಸ್ವಾಭಿಮಾನ, ಕಿಚ್ಚು ನಮಗೆ ಸ್ಫೂರ್ತಿ ಎಂದು ಹೇಳಿದರು. ಅಪ್ಪಯ್ಯಗೌಡರ ಸ್ಮಾರಕ ನಿರ್ಮಾಣ ಸಂಬಂಧ ಶಾಸಕ ಅಪ್ಪಚ್ಚುರಂಜನ್ ಹಾಗೂ ಬೋಪಯ್ಯ ಅವರುಗಳ ಮುಖೇನ ಸರಕಾರದ ಮಟ್ಟದಲ್ಲಿ ಪ್ರಯತ್ನಿಸುವದಾಗಿ ಭರವಸೆ ನೀಡಿದರು. ಹುತಾತ್ಮರಾಗಿರುವ ಅಪ್ಪಯ್ಯಗೌಡರು ಇಂದಿಗೂ ಎಲ್ಲಾ ವರ್ಗದವರಿಗೂ ಮಾರ್ಗದರ್ಶಕರು. ಅವರನ್ನು ನೆನೆಪಿಸಿಕೊಳ್ಳಬೇಕು. ನಾಡಿಗಾಗಿ ಏನೇ ತೊಂದರೆ ಬಂದರೂ ಎಲ್ಲರೂ ಒಗ್ಗಟ್ಟಾಗಬೇಕೆಂದು ಹೇಳಿದರು.

ಸಂಸದ ಪ್ರತಾಪ್ ಸಿಂಹ ಮಾತನಾಡಿ, ಅಪ್ಪಯ್ಯಗೌಡರು ಸ್ವಾತಂತ್ರ್ಯ ಹೋರಾಟದಲ್ಲಿ ಹುತಾತ್ಮರಾದ ಮೊದಲ ಘೋರ ಏಕ ಮಾತ್ರ ವ್ಯಕ್ತಿಯಾಗಿದ್ದಾರೆ. ಅಂತಹವರ ಆದರ್ಶಗಳನ್ನು ಮೈಗೂಡಿಸಿಕೊಳ್ಳಲು ಇಂತಹ ಕಾರ್ಯಕ್ರಮ ಅವಶ್ಯವಾಗಿದೆ. ಇದನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುತ್ತಿರುವದು ಶ್ಲಾಘನೀಯ ವೆಂದರು.

ಕೊಡಗಿನ ಇತಿಹಾಸ ದೇಶ ರಕ್ಷಣೆಗೆ ಮಾತ್ರ ಸೀಮಿತವಾಗಿಲ್ಲ. ಸ್ವಾತಂತ್ರ್ಯ ತಂದುಕೊಡುವ ಕಾರ್ಯದಲ್ಲಿ ಮಹತ್ವದ ಪಾತ್ರವಿದೆ. ಈ ಬಗ್ಗೆ ಯುವ ಪೀಳಿಗೆಯಲ್ಲಿ ಜಾಗೃತಿ ಮೂಡಿಸುವ ಕೆಲಸವಾಗಬೇಕಿದೆ ಎಂದರು. ಬೆಂಗಳೂರು ಕಟ್ಟುವಲ್ಲಿ ಕೆಂಪೇಗೌಡರ ಪಾತ್ರ ಮಹತ್ತರವಾಗಿದ್ದು, ಇವರ ಜನ್ಮದಿನಾಚರಣೆಯನ್ನು ರಾಜ್ಯಾದ್ಯಂತ ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾಗಬೇಕೆಂದು ಹೇಳಿದರು.

ಶಾಸಕ ಕೆ.ಜಿ. ಬೋಪಯ್ಯ ಮಾತನಾಡಿ, ಇದೊಂದು ಪವಿತ್ರವಾದ, ಎಲ್ಲರಿಗೂ ಸ್ಫೂರ್ತಿ ಕೊಡುವ ದಿನವಾಗಿದೆ. ನಾಡಿಗೆ ಸಂಕಷ್ಟ ಎದುರಾದಾಗ ಎಲ್ಲವನ್ನೂ ತೊರೆದು ನಾಡಿಗಾಗಿ ಪ್ರಾಣ ಕೊಡಲು ತಯಾರಾಗಿ ಹೋರಾಟ ಮಾಡಿದ, ಪ್ರಾಣತ್ಯಾಗ ಮಾಡಿದ ಅಪ್ಪಯ್ಯಗೌಡರ ಆದರ್ಶಗಳನ್ನು ಮೈಗೂಡಿಸಿಕೊಳ್ಳುವ ದಿನವಾಗಿದೆ ಎಂದು ಹೇಳಿದರು. ಇವರೊಂದಿಗೆ ದಿನನಿತ್ಯ ದೇಶ ರಕ್ಷಣೆಗಾಗಿ ಗಡಿಯಲ್ಲಿ ಸೈನಿಕರು ಪ್ರಾಣ ತೆರುತ್ತಿದ್ದಾರೆ. ಇಂತಹ ಕಾರ್ಯಕ್ರಮಗಳ ಮೂಲಕ ಇಡೀ ದೇಶದ ಜನತೆ ನಿಮ್ಮೊಂದಿಗೆ ಇದ್ದೇವೆ ಎಂಬ ಉತ್ತಮ ಸಂದೇಶ ನೀಡಬೇಕಾಗಿದೆ. ಸ್ವಾತಂತ್ರ್ಯ ಹೋರಾಟಗಾರರು ಮಹಾನ್ ವ್ಯಕ್ತಿಗಳ ಆದರ್ಶಗಳನ್ನು ಎಲ್ಲರೂ ಮೈಗೂಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಶಾಸಕ ಅಪ್ಪಚ್ಚುರಂಜನ್ ಮಾತನಾಡಿ, ಶಾಸಕ ಬೋಪಯ್ಯ, ಮುಖ್ಯಮಂತ್ರಿಯಾಗಿದ್ದ ಸದಾನಂದಗೌಡರ ಪ್ರಯತ್ನದಿಂದಾಗಿ ಅರೆಭಾಷೆ ಅಕಾಡೆಮಿ ಸ್ಥಾಪನೆಯಾಗಿದ್ದು, ಇದರಿಂದ ಅರೆಭಾಷೆ ಸಂಸ್ಕøತಿಯನ್ನು ದೇಶಕ್ಕೆ ಪರಿಚಯಿಸುವ ಕೆಲಸವನ್ನು ಅಕಾಡೆಮಿ ಮಾಡುತ್ತಿದೆ. ಇನ್ನೂ ಹೆಚ್ಚು ಹೆಚ್ಚು ಕಾರ್ಯಕ್ರಮ ಹಮ್ಮಿಕೊಳ್ಳು ವಂತಾಗಬೇಕೆಂದು ಹೇಳಿದರು. ಅಪ್ಪಯ್ಯಗೌಡರ ಪ್ರತಿಮೆ ನಿರ್ಮಾಣ ಮಾಡುವ ಸಂದರ್ಭ ತಾನೇ ಸದನದಲ್ಲಿ ಪ್ರಸ್ತಾಪ ಮಾಡಿದ್ದು, ಶಾಸಕ ಬೋಪಯ್ಯ ಹಾಗೂ ತನ್ನ ಪ್ರಯತ್ನದಿಂದ ಸಾಧ್ಯವಾಗಿದೆ. ಅಪ್ಪಯ್ಯಗೌಡರ ಸ್ಮಾರಕ ರಚನೆ ಮಾಡುವ ಸಂಬಂಧ ಎಲ್ಲರ ಸಹಕಾರದೊಂದಿಗೆ ಪ್ರಯತ್ನಿಸಲಾಗು ವದು. ದೇಶಕ್ಕಾಗಿ ಹೋರಾಟ ಮಾಡಿದ ಅಪ್ಪಯ್ಯಗೌಡರ ಹೋರಾಟದ ಕಿಚ್ಚು, ಸ್ಫೂರ್ತಿಯನ್ನು ಮೈಗೂಡಿಸಿಕೊಳ್ಳಬೇಕು. ಸ್ವಾತಂತ್ರ್ಯ ಹೋರಾಟಗಾರರ, ಗಣ್ಯ ವ್ಯಕ್ತಿಗಳ ಸ್ಮಾರಕ ರಚನೆಗೆ ಸರಕಾರ ಮುಂದಾಗಬೇಕೆಂದು ಹೇಳಿದರು.

ಚರಿತ್ರೆಕಾರ, ಸಾಹಿತಿ ತಲಕಾಡು ಚಿಕ್ಕರಂಗೇಗೌಡ ಮಾತನಾಡಿ, ಇಂತಹ ಕಾರ್ಯಕ್ರಮಗಳಿಂದ ಹೋರಾಟಗಾರರ ವಿಚಾರ ವಿನಿಮಯ ಆಗುತ್ತದೆ. ಸ್ವಾತಂತ್ರ್ಯ ಹೋರಾಟಗಾರರಲ್ಲಿ ಅಪ್ಪಯ್ಯಗೌಡ ನಂತರದ ಹೋರಾಟಗಾರರೆಲ್ಲ ಹೀರೋಗಳಾಗಿದ್ದಾರೆ. ಆದರೆ ಗೌಡರು ಬೆಳಕಿಗೆ ಬರಲಿಲ್ಲ. ಇದಕ್ಕೆಲ್ಲ ನಾವುಗಳೇ ಕಾರಣ. ನಾವುಗಳು ಅಂತವರ ಹೋರಾಟವನ್ನು ಪ್ರತಿಬಿಂಬಿಸುವಲ್ಲಿ ವಿಫಲರಾಗಿದ್ದೇವೆ ಎಂದರು. ಅಪ್ಪಯ್ಯಗೌಡರ ಸ್ಮಾರಕ ರಚನೆಯೊಂದಿಗೆ ರಾಜ್ಯಾದ್ಯಂತ ಹುತಾತ್ಮರ ದಿನಾಚರಣೆಯನ್ನು ಸರಕಾರಿ ಕಾರ್ಯಕ್ರಮವನ್ನಾಗಿ ಆಚರಿಸಬೇಕು. ಇದು ನೆರವೇರದಿದ್ದಲ್ಲಿ ಒಕ್ಕಲಿಗರ ಸಂಘದ ಮೂಲಕ ಹೋರಾಟ ರೂಪಿಸಲಾಗುವದು. ಎಲ್ಲ ರೀತಿಯ ಸಹಕಾರ ನೀಡಲಾಗುವದೆಂದು ಹೇಳಿದರು.

ರಾಜ್ಯ ಒಕ್ಕಲಿಗರ ಸಂಘದ ಅಧ್ಯಕ್ಷ ಡಾ. ಅಪ್ಪಾಜಿಗೌಡ ಮಾತನಾಡಿ, ಅಪ್ಪಯ್ಯಗೌಡರ ಸ್ವಾತಂತ್ರ್ಯ ಸಂಗ್ರಾಮದ ಬಗ್ಗೆ ಜನತೆಗೆ ಮಾಹಿತಿ ಇಲ್ಲವೆಂಬದು ಶೋಚನೀಯ, ಈ ವಿಚಾರವನ್ನು ನಾಡಿನಾದ್ಯಂತ ತಿಳಿಯಪಡಿಸಬೇಕು, ಗೌರವ ಸಲ್ಲಿಸುವಂತಾಗಬೇಕೆಂದು ಹೇಳಿದರು. ಅಪ್ಪಯ್ಯಗೌಡರಿಂದ ಹಿಡಿದು ಪ್ರಮುಖರ ತ್ಯಾಗದ ಪರಿಚಯ ಮಾಡಬೇಕು. ಈ ನಿಟ್ಟಿನಲ್ಲಿ ಸಹಕಾರ ನೀಡುವದಾಗಿ ಹೇಳಿದರು. ಸಂಘದ ವತಿಯಿಂದ ಜಿಲ್ಲೆಯಲ್ಲಿ ವಿದ್ಯಾರ್ಥಿನಿಯರಿಗಾಗಿ ವಸತಿ ನಿಲಯ ತೆರೆಯಲು ನಿರ್ಧರಿಸಲಾಗಿದೆ. ಜಾಗದ ಕೊರತೆಯಿದ್ದು, ಸಹಕಾರ ನೀಡಿದರೆ ಮುಂದಾಗುವದಾಗಿ ಹೇಳಿದರು.

ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಹೋರಾಟಗಾರ ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆಯನ್ನು ಜಿಲ್ಲಾಡಳಿತದ ವತಿಯಿಂದ ಆಚರಿಸುತ್ತಿರುವದು ಶ್ಲಾಘನೀಯ ವೆಂದರು. ಸ್ವಾತಂತ್ರ್ಯ ಸಿಕ್ಕಿದರೂ ನಾವು ಸ್ವತಂತ್ರರಾಗಿ ಬಾಳುತ್ತಿಲ್ಲ. ನೆರೆರಾಷ್ಟ್ರಗಳ ಧಾಳಿ ಬೆದರಿಕೆ ಇದ್ದೇ ಇದೆ. ಇದರಿಂದ ಮುಕ್ತರಾಗಬೇಕೆಂದರು.

ಪ್ರಾಸ್ತಾವಿಕವಾಗಿ ಮಾತನಾಡಿದ ಅರೆಭಾಷೆ ಸಂಸ್ಕøತಿ ಮತ್ತು ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮಾತನಾಡಿ, ಭಾಷೆ ಸಂಸ್ಕøತಿಯನ್ನು ಉಳಿಸಿ ಬೆಳೆಸಲು ಅಕಾಡೆಮಿ ಹಲವಾರು ಜನಪರ ಕಾರ್ಯಕ್ರಮಗಳನ್ನು ಹಮ್ಮಿಕೊಂಡು ಬರುತ್ತಿದೆ. ಅಪ್ಪಯ್ಯಗೌಡರ ಹುತಾತ್ಮ ದಿನಾಚರಣೆಯನ್ನು ಕಳೆದೆರಡು ವರ್ಷಗಳಿಂದ ಅಕಾಡೆಮಿ ನಡೆಸಿಕೊಂಡು ಬರುತ್ತಿದೆ. ಮುಂದೆಯೂ ಎಲ್ಲರ ಸಹಕಾರ ಅಗತ್ಯವೆಂದರು. ಅಪ್ಪಯ್ಯಗೌಡರ ಸ್ಮಾರಕ ನಿರ್ಮಾಣದೊಂದಿಗೆ ಅವರ ಕೀರ್ತಿ ರಾಜ್ಯ - ರಾಷ್ಟ್ರಮಟ್ಟದಲ್ಲಿ ಬೆಳಗಬೇಕಿದೆ. ಈ ನಿಟ್ಟಿನಲ್ಲಿ ಸರಕಾರ ಮುಂದಾಗಬೇಕಿದೆ ಎಂದು ಸಚಿವರಲ್ಲಿ ಮನವಿ ಮಾಡಿದರು.

ವೇದಿಕೆಯಲ್ಲಿ ಚಾಮರಾಜನಗರ ಶಾಸಕ ವಾಸು, ವಿಧಾನ ಪರಿಷತ್ ಸದಸ್ಯ ಎಂ.ಪಿ. ಸುನಿಲ್ ಸುಬ್ರಮಣಿ, ಪೊಲೀಸ್ ವರಿಷ್ಠಾಧಿಕಾರಿ ಡಾ. ಪಿ. ರಾಜೇಂದ್ರಪ್ರಸಾದ್, ಅಪರ ಜಿಲ್ಲಾಧಿಕಾರಿ ಸತೀಶ್ ಕುಮಾರ್, ಕೊಡಗು ಗೌಡ ಸಮಾಜಗಳ ಒಕ್ಕೂಟದ ಅಧ್ಯಕ್ಷ ದಂಬೆಕೋಡಿ ಎಸ್. ಆನಂದ, ಇತಿಹಾಸಕಾರ ಡಾ. ಪುಟ್ಟಸ್ವಾಮಿ, ಒಕ್ಕಲಿಗ ಸಂಘದ ಸಂಪಾದಕ ಡಾ. ಪಾಂಡುಕುಮಾರ್, ನಾಡಪ್ರಭು ಕೆಂಪೇಗೌಡ ಸಮಿತಿಯ ನಾಗರಾಜು ಇನ್ನಿತರರಿದ್ದರು.

ಉಪನ್ಯಾಸಕ ಪಟ್ಟಡ ಶಿವಕುಮಾರ್ ವಿಚಾರ ಮಂಡನೆ ಮಾಡಿದರು. ಕವಯತ್ರಿ ಕಡ್ಲೇರ ತುಳಸಿ ಮೋಹನ್ ಕವನ ವಾಚನ ಮಾಡಿದರು. ಅಮ್ಮಾಜಿರ ಪೊನ್ನಪ್ಪ ನೇತೃತ್ವದ ಪೊನಿಧ್ವನಿ ಗ್ರೂಪ್ ವತಿಯಿಂದ ಅಪ್ಪಯ್ಯಗೌಡರ ಕುರಿತಾದ ರೂಪಕ ಪ್ರದರ್ಶನ ನಡೆಯಿತು. ಚೊಕ್ಕಾಡಿ ಪ್ರೇಮ ರಾಘವಯ್ಯ ಹಾಗೂ ಮಡ್ಡೆಂಗಳ ರುಕ್ಮಿಣಿ ದುಗ್ಗಪ್ಪ ಅವರುಗಳು ಅಪ್ಪಯ್ಯಗೌಡರ ಕುರಿತು ಲಾವಣಿ ಪದ ಹಾಡಿದರು. ಸ.ಮಾ.ಪ್ರಾ. ಶಾಲೆ ಸೇವಾದಳ ಶಿಕ್ಷಕಿ ಪುದಿಯನೆರವನ ರೇವತಿ ರಮೇಶ್ ಮತ್ತು ವಿದ್ಯಾರ್ಥಿಗಳು ನಾಡಗೀತೆ, ರೈತಗೀತೆ ಹಾಡಿದರೆ, ಅಕಾಡೆಮಿ ರಿಜಿಸ್ಟ್ರಾರ್ ಉಮರಬ್ಬ ಸ್ವಾಗತಿಸಿದರು. ಅಕಾಡೆಮಿ ಸದಸ್ಯೆ ಕೂಡೆಕಲ್ ಸಂತೋಷ್ ಕಾರ್ಯಕ್ರಮ ನಿರೂಪಿಸಿದರೆ, ಸದಸ್ಯ, ಕಾರ್ಯಕ್ರಮ ಸಂಚಾಲಕ ಮಂದ್ರಿರ ಮೋಹನ್ ದಾಸ್ ವಂದಿಸಿದರು.

ಸಂಸ್ಮರಣೆ

ಜಿಲ್ಲಾಡಳಿತ, ಕನ್ನಡ ಮತ್ತು ಸಂಸ್ಕøತಿ ಇಲಾಖೆ ಮತ್ತು ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಂಸ್ಕøತಿ ಅಕಾಡೆಮಿ ವತಿಯಿಂದ ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರ ಸಂಸ್ಮರಣಾ ದಿನಾಚರಣೆಯನ್ನು ಶ್ರದ್ಧಾಪೂರ್ವಕ ವಾಗಿ ಆಚರಿಸ ಲಾಯಿತು. ನಗರದ ಫೀಲ್ಡ್ ಮಾರ್ಷಲ್ ಕೆ.ಎಂ.ಕಾರ್ಯಪ್ಪ ವೃತ್ತದಲ್ಲಿರುವ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ವಸತಿ ಸಚಿವ ಎಂ.ಕೃಷ್ಣಪ್ಪ, ಶಾಸಕರಾದ ಕೆ.ಜಿ.ಬೋಪಯ್ಯ, ಎಂ.ಪಿ. ಅಪ್ಪಚ್ಚುರಂಜನ್, ಎಂ.ಪಿ. ಸುನಿಲ್ ಸುಬ್ರಮಣಿ, ವೀಣಾ ಅಚ್ಚಯ್ಯ, ಸಂಸದ ಪ್ರತಾಪ್ ಸಿಂಹ, ಮಾಜಿ ಸಂಸದ ಎಚ್.ವಿಶ್ವನಾಥ್, ತಾ.ಪಂ.ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್, ನಗರಸಭಾ ಸದಸ್ಯ ಕೆ.ಜಿ.ಪೀಟರ್, ಹೆಚ್ಚುವರಿ ಜಿಲ್ಲಾಧಿಕಾರಿ ಎಂ.ಸತೀಶ್ ಕುಮಾರ್, ಕರ್ನಾಟಕ ಅರೆಭಾಷೆ ಸಾಹಿತ್ಯ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್, ಆಯುಕ್ತೆ ಪುಷ್ಪಾವತಿ ಸೇರಿದಂತೆ ಎಲ್ಲಾ ಸಮಾಜಗಳ ಸಂಘಟನಗಳ ಪ್ರಮುಖರು ಹುತಾತ್ಮ ಗುಡ್ಡೆಮನೆ ಅಪ್ಪಯ್ಯಗೌಡರ ಪ್ರತಿಮೆಗೆ ಹೂಗುಚ್ಛ ಅರ್ಪಿಸಿ, ಗೌರವ ನಮನ ಸಲ್ಲಿಸಿದರು.

ರೇವತಿ ರಮೇಶ್ ಮತ್ತು ಸರ್ಕಾರಿ ಮಾದರಿ ಪ್ರಾಥಮಿಕ ಶಾಲೆಯ ಭಾರತ ಸೇವಾದಳದ ವಿದ್ಯಾರ್ಥಿಗಳು ನಮನ ಗೀತೆ ಹಾಡಿದರು. ಕುಡೆಕಲ್ ಸಂತೋಷ್ ಕಾರ್ಯಕ್ರಮ ನೆರವೇರಿಸಿದರು.