*ಗೋಣಿಕೊಪ್ಪಲು, ಆ. 27: ಬಸ್ ನಿಲ್ದಾಣದ ಶೌಚಾಲಯದ ಪಕ್ಕದಲ್ಲೆ ಕಳಪೆ ಗುಣಮಟ್ಟದ ನೆಲಗಡಲೆ ಮಾರುತ್ತಿದ್ದು, ನೆಲಗಡಲೆ ಖರೀದಿಸಿ ತಿನ್ನುವವರಿಗೆ ರೋಗ ಹರಡುವ ಭೀತಿ ಎದುರಾಗಿದೆ.

ಕೊಳಚೆ ಪ್ರದೇಶದಲ್ಲಿ ಗಬ್ಬು ನಾರುವ ಶೌಚಾಲಯದ ಪಕ್ಕದಲ್ಲೆ ಭಾಷಾ ಎಂಬಾತ ಕೊಳೆತ ಹುಳು ಹಿಡಿದ ನೆಲಗಡಲೆಯನ್ನು ಮಾರುತ್ತಿದ್ದು, ಈತ ಪಂಚಾಯಿತಿಯಿಂದ ಯಾವದೇ ಅನುಮತಿ ಪಡೆಯದೆ ಅನಧಿಕೃತವಾಗಿ ಕಡಲೆ ಮಾರಾಟ ಮಾಡುತ್ತಿದ್ದಾನೆ.ಪಂಚಾಯಿತಿಗೆ ಸುಂಕ ಕಟ್ಟದೆ ವ್ಯಾಪಾರದಲ್ಲಿ ತೊಡಗಿದರೂ ಪಂಚಾಯಿತಿ ಈ ಬಗ್ಗೆ ಗಮನ ಹರಿಸುತ್ತಿಲ್ಲ ಎಂದು ಸಾರ್ವಜನಿಕರು ಆರೋಪಿಸುತ್ತಿದ್ದಾರೆ.

ಕಳಪೆ ಕಡಲೆ ಮಾರುತ್ತಿದ್ದ ಬಗ್ಗೆ ಪ್ರಶ್ನಿಸಿದ ಪತ್ರಕರ್ತರ ಮೇಲೆ ಹರಿಹಾಯ್ದ ಈತ ಪಂಚಾಯಿತಿ ಯಿಂದ ಯಾವದೇ ಅನುಮತಿ ಪಡೆದುಕೊಳ್ಳುವದು ಬೇಡ. ನನ್ನ ಇಚ್ಚೆಯಂತೆ ಮಾರಾಟ ಮಾಡುತ್ತಿದ್ದೇನೆ ಎಂದು ಸಿಟ್ಟಿನಿಂದ ನುಡಿದಿದ್ದು, ಕೆಲ ಸಮಯಗಳವರೆಗೆ ವ್ಯಾಪಾರಿ ಹಾಗೂ ಪತ್ರಕರ್ತರ ನಡುವೆ ಮಾತಿನ ಚಕಮಕಿ ನಡೆಯಿತು.

ಈ ಸಂದರ್ಭ ಸ್ಥಳಕ್ಕೆ ಆಗಮಿಸಿದ ಪಂಚಾಯಿತಿ ಸದಸ್ಯ ಕುಲ್ಲಚಂಡ ಬೋಪಣ್ಣ ಕಳಪೆ ಗುಣಮಟ್ಟದ ಕಡಲೆ ಮಾರಾಟ ಮಾಡುತ್ತಿರುವದು ಅಲ್ಲದೆ ಅನಧಿಕೃತವಾಗಿ ವ್ಯಾಪಾರ ನಡೆಸುತ್ತಿರುವದನ್ನು ಖಂಡಿಸಿ ವ್ಯಾಪಾರವನ್ನು ಸ್ಥಗಿತಗೊಳಿಸಿ ಪಂಚಾಯಿತಿಯಿಂದ ಅನುಮತಿ ಪಡೆದು ವ್ಯಾಪಾರ ನಡೆಸುವಂತೆ ಸೂಚಿಸಿದರು.

ಪಂಚಾಯಿತಿಯಿಂದ ಅನುಮತಿ ಪಡೆಯದೆ, ಸುಂಕ ಕಟ್ಟದೆ ವ್ಯಾಪಾರ ನಡೆಸುತ್ತಿದ್ದರೂ ಸ್ನೇಹಿತ ಎಂಬ ಕಾರಣಕ್ಕೆ ಗ್ರಾ.ಪಂ. ಸದಸ್ಯ ಮುರುಗ ಬಾಷಾ ಅವರ ಕಳಪೆ ಗುಣಮಟ್ಟದ ಕಡಲೆ ವ್ಯಾಪಾರವನ್ನು ಸಮರ್ಥಿಸಿ ಕೊಳ್ಳಲು ಪ್ರಯತ್ನಿಸಿದ್ದು, ಇದಕ್ಕೆ ಸಾರ್ವಜನಿಕರು ತೀವ್ರ ಆಕ್ಷೇಪ ವ್ಯಕ್ತಪಡಿಸಿದರು.