ಸೋಮವಾರಪೇಟೆ, ಡಿ. 11: ತಾಲೂಕು ಹಿಂದೂ ಮಲಯಾಳ ಸಮಾಜದ ವತಿಯಿಂದ ಜೆಎಸ್‍ಎಸ್ ಆಸ್ಪತ್ರೆ, ಮಹಾವಿದ್ಯಾಲಯ, ಆಯುರ್ವೇದ ಆಸ್ಪತ್ರೆ, ಹೆಚ್.ಎಸ್. ಚಂದ್ರಮೌಳಿ ಮತ್ತು ಬಿ.ಎಸ್. ಸುಂದರ ಇವರುಗಳ ಆಶ್ರಯದಲ್ಲಿ ತಾ. 17 ರಂದು ಇಲ್ಲಿನ ಜಾನಕಿ ಕನ್ವೆನ್‍ಷನ್ ಹಾಲ್‍ನಲ್ಲಿ ಉಚಿತ ಆರೋಗ್ಯ ತಪಾಸಣಾ ಮತ್ತು ಔಷಧ ವಿತರಣಾ ಶಿಬಿರ ನಡೆಯಲಿದೆ ಎಂದು ಸಮಾಜದ ನಿರ್ದೇಶಕ, ಶಿಬಿರದ ಸಂಯೋಜಕರಾದ ಡಾ. ಸಿ.ಆರ್. ಉದಯ ಕುಮಾರ್ ಹೇಳಿದರು. ನಗರದ ಪತ್ರಿಕಾ ಭವನದಲ್ಲಿ ಆಯೋಜಿಸಲಾಗಿದ್ದ ಪತ್ರಿಕಾ ಗೋಷ್ಠಿಯಲ್ಲಿ ಮಾತನಾಡಿದ ಅವರು, ತಾ. 17 ರಂದು ಬೆಳಿಗ್ಗೆ 9 ಗಂಟೆಯಿಂದ ಸಂಜೆ 4 ಗಂಟೆವರೆಗೆ ಶಿಬಿರ ನಡೆಯಲಿದ್ದು, 30 ತಜ್ಞ ವೈದ್ಯರು ತಪಾಸಣೆ ನಡೆಸಲಿದ್ದಾರೆ. ಹೃದಯ, ಕಿವಿ, ಮೂಗು, ಗಂಟಲು, ಚರ್ಮರೋಗ, ಕೀಲು ಮತ್ತು ಮೂಳೆ, ದಂತ, ಮಕ್ಕಳ ಹಾಗೂ ಸ್ತ್ರೀ ರೋಗ ತಜ್ಞರು ಮತ್ತು ನೇತ್ರ ತಜ್ಞರು ಪಾಲ್ಗೊಳ್ಳಲಿದ್ದಾರೆ ಎಂದರು.
ಇದೇ ಸಂದರ್ಭ ಆರ್ಯುವೇದ ತಜ್ಞ ವೈದ್ಯರುಗಳಿಂದ ತಪಾಸಣೆ ಮತ್ತು ಔಷಧ ವಿತರಣೆ ನಡೆಯಲಿದೆ. ಹೆಚ್ಚಿನ ವಿವರಕ್ಕೆ 9448246061 ಅಥವಾ 9986289460 ಈ ದೂರವಾಣಿ ಸಂಖ್ಯೆಯನ್ನು ಸಂಪರ್ಕಿಸಬಹುದು ಎಂದು ಮನವಿ ಮಾಡಿದ್ದಾರೆ. ಶಿಬಿರದಲ್ಲಿ ಹೃದಯ, ಕಿವಿ, ಮೂಗು, ಗಂಟಲು ತಜ್ಞರು, ಚರ್ಮ ರೋಗ ತಜ್ಞರು, ಮಕ್ಕಳ ತಜ್ಞರು, ನೇತ್ರ ಚಿಕಿತ್ಸಾ ತಜ್ಞರು, ಸ್ತ್ರೀ ರೋಗ ತಜ್ಞರು, ಕೀಲು ಮತ್ತು ಮೂಳೆ, ದಂತ ವೈದ್ಯರು ಭಾಗವಹಿಸಲಿದ್ದಾರೆ. ಇಸಿಜಿ, ಎಕೋ, ರಕ್ತ ಗುಂಪು ಪತ್ತೆ ಸೇರಿದಂತೆ ಇತರ ಸೌಲಭ್ಯಗಳು ದೊರೆಯಲಿವೆ ಎಂದರು.
ಗೋಷ್ಠಿಯಲ್ಲಿ ಹಿಂದೂ ಮಲಯಾಳ ಸಮಾಜದ ಅಧ್ಯಕ್ಷ ಪಿ.ಡಿ. ಪ್ರಕಾಶ್, ಖಜಾಂಚಿ ಪಿ.ಕೆ. ರಾಜನ್, ನಿರ್ದೇಶಕರಾದ ಗಂಗಾಧರ್, ಕಾವೇರಪ್ಪ ಉಪಸ್ಥಿತರಿದ್ದರು.