ದಿನಾಂಕ 10 ರ ಪತ್ರಿಕೆಯಲ್ಲಿ ಕೆ. ಜಯಲಕ್ಷ್ಮಿ ಮಡಿಕೇರಿ ಇವರು ಬರೆದ ಲೇಖನ ‘ಶಿಕ್ಷಣ ವ್ಯವಸ್ಥೆಯಲ್ಲಿ ಶಿಕ್ಷಕರಿಗೆ ಶಿಕ್ಷೆ’ ಎಂಬ ವಿಷಯಕ್ಕೆ ನನ್ನ ಅನಿಸಿಕೆ. ಕಳೆದ 4 ವರ್ಷಗಳಿಂದ ನಾನು ನಾಡಗೀತೆಯನ್ನು ಪ್ರತಿದಿನ ನನ್ನ ಶಾಲೆಯ ಮಕ್ಕಳಿಗೆ ಪ್ರಾರ್ಥನಾ ಸಮಯದಲ್ಲಿ ಶನಿವಾರದ ಸಾಮೂಹಿಕ ಕವಾಯತ್ತು ವೇಳೆ, ಸಮಾರಂಭಗಳಲ್ಲಿ ರಾಗಬದ್ಧವಾಗಿ, ತಪ್ಪಿಲ್ಲದೇ ಹಾಡಲು ಕಲಿಸಲು ಪ್ರಯತ್ನಿಸುತ್ತಿದ್ದೇನೆ. ಮಕ್ಕಳ ಜೊತೆಯಲ್ಲಿ ಪ್ರತಿದಿನ ನಾವು ಶಿಕ್ಷಕರು ಹಾಡುತ್ತೇವೆ. ಎಲ್ಲಾ ತರಗತಿಗಳ ಪಠ್ಯ ಪುಸ್ತಕದ ಮೊದಲನೇ ಪುಟದಲ್ಲಿ ನಾಡಗೀತೆ ರಾಷ್ಟ್ರಗೀತೆ ಇದೆ.

ಆದರೂ ಅದೆಷ್ಟು ತಿದ್ದುಪಡಿಯಾದರೂ ನಾಡಗೀತೆಯ ಸಾಲುಗಳು ಇಂತಿದೆ, ‘ಮೂದೇವಿಯ ಮಕುಟದ’, ‘ನದಿ ಹೊಲಗಳ ನಾಡೆ’, ‘ಹಸುರಿನ ಗಿರಿಗಳ ಶಾಲೆ’, ‘ಜನಗಣ ಹೋಳುವ ದೊರೆಗಳ’, ‘ಜನನಿಯ ಜೋಗುಳ ವೇಷದ ಘೋಷ’ ಇತ್ಯಾದಿ. ಇದು ನಾಡಗೀತೆಗಷ್ಟೇ ಸೀಮಿತವಲ್ಲ.

ಇದಕ್ಕೆ ಕಾರಣ ಬಲವಂತವಾಗಿ ಕಲಿಸಲು ಪ್ರಯತ್ನಿಸಿದರೆ ಮಾರನೇ ದಿನ ಆ ಮಗು ಶಾಲೆಗೆ ಗೈರು. ಹೊಡೆಯುವ... ಬೈಯುವ... ಬುದ್ಧಿ ಹೇಳುವ ಅಧಿಕಾರ ಶಿಕ್ಷಕರಿಗೆಲ್ಲಿದೆ?’ ಮಗು ಗೈರು ಹಾಜರಾದರೆ ಮನೆಗಳಿಗೆ ಹುಡುಕಿಕೊಂಡು ಹೋಗುವ ಹಣೆಬರಹ ಬೇರೆ. ಹೀಗಾಗಿ ನೀನು ಹೇಗಾದರೂ ಹಾಡು, ಹಾಡದೇ ಬೇಕಾದರೆ ಇರು ಶಾಲೆಗೆ ಮಾತ್ರ ಮುಖ ತೋರಿಸಿ ಹೋಗು ಎಂಬ ಪರಿಸ್ಥಿತಿ ಶಿಕ್ಷಕರದ್ದು.

ಮಾನ್ಯ ಶಿಕ್ಷಣ ಮಂತ್ರಿಗಳೇ, ಮಕ್ಕಳು ತಪ್ಪು ಉತ್ತರ ನೀಡಿದಾಗ ಶಿಕ್ಷಕರನ್ನು ಅಮಾನತುಗೊಳಿಸುವ ಬದಲು ಆರ್.ಟಿ.ಇ. ಕಾಯ್ದೆಯಲ್ಲಿ ಮಕ್ಕಳಿಗಿರುವ ಹಕ್ಕುಗಳನ್ನು ಸೀಮಿತಗೊಳಿಸಿ. ಮಕ್ಕಳು ಸರ್ವಾಧಿಕಾರಿಗಳಾಗುವದನ್ನು ತಪ್ಪಿಸಿ. ಹಾಗೆಯೇ ಶಾಲೆಗೆ ಗೈರು ಹಾಜರಾಗುವ, ಶಾಲೆಯಿಂದ ಹೊರಗುಳಿಯುವ ಮಕ್ಕಳ ಪೋಷಕರಿಗೆ ಸರಕಾರದಿಂದ ನೀಡುತ್ತಿರುವ ಪಡಿತರ ಇತ್ಯಾದಿ ಸೌಲಭ್ಯಗಳನ್ನು ತಡೆಹಿಡಿಯಿರಿ. ಶಿಕ್ಷಕರಿಗೆ ಶಿಕ್ಷೆ ಸಹಿತ ಶಿಕ್ಷಣಕ್ಕೆ ಅಧಿಕಾರ ಕೊಡಿ. ಆಗ ನೋಡಿ ಶಿಕ್ಷಣ ಕ್ಷೇತ್ರದ ಬದಲಾವಣೆಗಳನ್ನು.

- ಅಲಿಮ ಅನಿಲ್, ಶಿಕ್ಷಕಿ, ಗೋಣಿಕೊಪ್ಪಲು.