ಮಡಿಕೇರಿ, ಜ. 9: ಕೇಂದ್ರದ ಬಿಜೆಪಿ ಸರ್ಕಾರ ನೋಟುಗಳನ್ನು ಅಮಾನ್ಯೀಕರಣ ಮಾಡಿದ ಹಿನ್ನೆಲೆಯಲ್ಲಿ ಜನಸಾಮಾನ್ಯರು ಸಂಕಷ್ಟವನ್ನೆದುರಿಸುವಂತಾಗಿದೆ ಎಂದು ಆರೋಪಿಸಿ ಜಾಗಟೆ ಬಾರಿಸುತ್ತ ಪ್ರತಿಭಟನಾ ಮೆರವಣಿಗೆ ನಡೆಸಿ ಜಿಲ್ಲಾಡಳಿತದ ಮೂಲಕ ಕೇಂದ್ರ ಸರ್ಕಾರಕ್ಕೆ ಮಹಿಳಾ ಕಾಂಗ್ರೆಸ್ ವತಿಯಿಂದ ಮನವಿ ಸಲ್ಲಿಸಲಾಯಿತು.ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಕೇಂದ್ರ ಸರಕಾರ ರೂ. 500 ಮತ್ತು 1000 ಮುಖಬೆಲೆಯ ನೋಟುಗಳನ್ನು ಅಮಾನ್ಯೀಕರಣ ಗೊಳಿಸಿದ ಪರಿಣಾಮ ಕೂಲಿ ಕಾರ್ಮಿಕರು, ದೀನ - ದಲಿತರು, ಮಹಿಳೆಯರು ಪ್ರತಿನಿತ್ಯ ಶೋಷಣೆಗೆ ಒಳಗಾಗಿದ್ದಾರೆ. ನೋಟುಗಳ ಅಮಾನ್ಯೀಕರಣ ನೀತಿಯಿಂದಾಗಿ ದೇಶದಲ್ಲಿ ಆರ್ಥಿಕ ಸಂಕಷ್ಟ ಉಂಟಾಗಿದೆ. ಹಲವರ ಪ್ರಾಣಹಾನಿ ಯಾಗಿದೆ. ಕೇಂದ್ರದ ಮೋದಿ ಸರಕಾರದ ಈ ನೀತಿ ಜನ ವಿರೋಧಿ ಯಾಗಿದ್ದು, ಅಮಾನ್ಯೀಕರಣದ ಬಗ್ಗೆ ಕಳೆದುಕೊಂಡಿರುವ ಕುಟುಂಬಸ್ಥರಿಗೆ ಇದುವರೆಗೂ ಪರಿಹಾರವನ್ನು ಯಾಕೆ ನೀಡಿಲ್ಲ, ಅಮಾನ್ಯೀಕರಣವನ್ನು ಜಾರಿಗೊಳಿಸುವ ಮುನ್ನ ಯಾವ ರೀತಿಯ ಸಮಾಲೋಚನೆ ಮತ್ತು ಸಿದ್ಧತೆಯನ್ನು ಕೈಗೊಳ್ಳಲಾಗಿತ್ತು, ಜನರ ಮೇಲೆ ಇಂತಹ ಕಠಿಣ ನೀತಿಯನ್ನು ಅನುಸರಿಸುವ ಮುನ್ನ ತಜ್ಞರು, ಅರ್ಥಶಾಸ್ತ್ರಜ್ಞರು ಅಥವಾ ಆರ್‍ಬಿಐ ಅನ್ನು ಯಾಕೆ ಸಮಾಲೋಚಿಸಿಲ್ಲ, ಕೇಂದ್ರ ಸರಕಾರವು ನವೆಂಬರ್ 8 ಕ್ಕಿಂತ ಹಿಂದಿನ ಆರು ತಿಂಗಳಲ್ಲಿ ಪ್ರತಿಯೊಬ್ಬ ವ್ಯಕ್ತಿ, ಸಂಸ್ಥೆಗಳು ಅಥವಾ ಘಟಕಗಳು ರೂ. 25 ಲಕ್ಷ ಅಥವಾ ಅದಕ್ಕಿಂತ ಹೆಚ್ಚು ಹಣವನ್ನು ಬ್ಯಾಂಕುಗಳಲ್ಲಿ ಠೇವಣಿ ಇಟ್ಟಿದ್ದಲ್ಲಿ ಅಂತಹವರ (ಮೊದಲ ಪುಟದಿಂದ) ಹೆಸರನ್ನು ಬಹಿರಂಗಗೊಳಿಸುವಂತೆ ಮನವಿಯಲ್ಲಿ ಆಗ್ರಹಿಸಲಾಗಿದೆ.
ಬೇಡಿಕೆಗಳು
ಹಣವನ್ನು ಹಿಂಪಡೆಯಲು ವಿಧಿಸಲಾಗಿರುವ ಎಲ್ಲಾ ನಿರ್ಬಂಧ ಗಳನ್ನು ಈಗಾಗಲೇ ತೆಗೆದುಹಾಕಬೇಕು, ಬ್ಯಾಂಕಿನಲ್ಲಿ ಠೇವಣಿ ಇಟ್ಟಿರುವ ಎಲ್ಲಾ ಠೇವಣಿದಾರರುಗಳಿಗೆ ಈ ನಿರ್ಬಂಧಗಳನ್ನು ಹೇರಿದ ದಿನದಿಂದ ಶೇ. 18ರಷ್ಟು ವಿಶೇಷ ಬಡ್ಡಿಯನ್ನು ನೀಡಬೇಕು, ಡಿಜಿಟಲ್ ವ್ಯವಹಾರಗಳ ಮೇಲೆ ವಿಧಿಸಲಾಗಿರುವ ಎಲ್ಲಾ ರೀತಿಯ ಶುಲ್ಕಗಳನ್ನು ಕೂಡಲೇ ರದ್ದುಪಡಿಸಬೇಕು. ಆಹಾರ ಭದ್ರತಾ ಕಾಯಿದೆಯ ನಿಬಂಧನೆಗಳ ಅಡಿಯಲ್ಲಿ ಪಿಡಿಎಸ್ ವ್ಯವಸ್ಥೆಯ ಪ್ರಕಾರ ವಿತರಿಸಲಾದ ಪಡಿತರ ದರವನ್ನು ಒಂದು ವರ್ಷದ ಅವಧಿಗೆ ಅರ್ಧ ದರದಷ್ಟು ಕಡಿತಗೊಳಿಸಬೇಕು, ಜೊತೆಗೆ ವಿಶೇಷ ಏಕಕಾಲಿಕ ಶೇ. 20ರಷ್ಟು ಬೋನಸನ್ನು ಹೆಚ್ಚುವರಿಯಾಗಿ ಎಲ್ಲಾ ಎಂಎಸ್‍ಪಿ ಹಿಂಗಾರು ಬೆಳೆಗಳ ಮೇಲೆ ನೀಡಬೇಕು, ಅಮಾನ್ಯೀಕರಣದಿಂದ ಅಪಾರ ವೇದನೆ ಅನುಭವಿಸಿದ ಪ್ರತಿಯೊಬ್ಬ ಬಿಪಿಎಲ್ ಕುಟುಂಬದ ಕನಿಷ್ಟ ಒಬ್ಬ ಮಹಿಳೆಯ ಖಾತೆಗೆ ರೂ. 20 ಸಾವಿರ ಪರಿಹಾರ ರೂಪದಲ್ಲಿ ಠೇವಣಿ ಮಾಡಬೇಕು.
ನರೇಗಾ ಅಡಿಯಲ್ಲಿ ಕನಿಷ್ಟ ಮುಂದಿನ ಒಂದು ವರ್ಷಕ್ಕೆ ಭರವಸೆ ನೀಡಲಾದ ಕೆಲಸದ ದಿನಗಳು ಮತ್ತು ವೇತನ ದರವನ್ನು ದುಪ್ಪಟ್ಟುಗೊಳಿಸ ಬೇಕು, ನವೆಂಬರ್ 8ರಿಂದ ಯಾರ್ಯಾರು ಕೆಲಸಗಳನ್ನು ಕಳೆದು ಕೊಂಡಿರುತ್ತಾರೋ ಅಂತಹವರನ್ನು ಗುರುತಿಸಲು ಮತ್ತು ನೋಂದಾಯಿ ಸಲು ಕೇಂದ್ರ ಸರ್ಕಾರವು ಒಂದು ವಿಶೇಷ ಆಂದೋಲನವನ್ನು ಆಯೋಜಿಸಬೇಕು ಮತ್ತು ಅಂತಹವರಿಗೆ ಮುಂದಿನ ಮಾರ್ಚ್ 31ರವರೆಗೆ ಅನ್ವಯವಾಗುವ ಕನಿಷ್ಟ ವೇತನ ದರದಲ್ಲಿ ಪರಿಹಾರವನ್ನು ನೀಡಬೇಕು.
ಸಣ್ಣ ಅಂಗಡಿದಾರರು ಮತ್ತು ವ್ಯಾಪಾರಿಗಳಿಗೆ ಶೇ. 50 ರಷ್ಟು ಆದಾಯ ತೆರಿಗೆ ಮತ್ತು ಮಾರಾಟ ತೆರಿಗೆ ವಿನಾಯಿತಿಯನ್ನು ನೀಡಬೇಕು, ಕೇಂದ್ರ ಸರ್ಕಾರವು ರಾಜ್ಯ ಸರ್ಕಾರಗಳಿಗೆ ಈ ರೀತಿಯ ವಿನಾಯಿತಿಯಿಂದ ಉಂಟಾದ ಆದಾಯದ ನಷ್ಟವನ್ನು ಭರಿಸಿ ಕೊಡಬೇಕು ಎಂದು ಆಗ್ರಹಿಸಿದ ಬೇಡಿಕೆಯನ್ನು ಕೇಂದ್ರ ಸರ್ಕಾರದ ಮುಂದಿಡಲಾಗಿದೆ. ಬೇಡಿಕೆಗಳ ಮನವಿಯನ್ನು ಜಿಲ್ಲಾಧಿಕಾರಿಗಳ ಮೂಲಕ ಸಲ್ಲಿಸಲಾಯಿತು.
ಈ ಸಂದರ್ಭ ಎಐಸಿಸಿ ಸಂಯೋಜಕಿ ಉಷಾನಾಯ್ಡು, ಮಹಿಳಾ ಕಾಂಗ್ರೆಸ್ ಜಿಲ್ಲಾಧ್ಯಕ್ಷೆ ಕುಮುದಾ ಧರ್ಮಪ್ಪ, ಮಾಜಿ ಸಚಿವೆ ಸುಮಾವಸಂತ್, ವಿಧಾನ ಪರಿಷತ್ ಸದಸ್ಯೆ ಶಾಂತೆಯಂಡ ವೀಣಾ ಅಚ್ಚಯ್ಯ, ಅರಣ್ಯ ಅಭಿವೃದ್ಧಿ ನಿಗಮದ ಉಪಾಧ್ಯಕ್ಷೆ ಪದ್ಮಿನಿ ಪೊನ್ನಪ್ಪ, ಜಿ.ಪಂ. ಸದಸ್ಯರಾದ ಕೆ.ಪಿ. ಚಂದ್ರಕಲಾ, ಸರಿತಾಪೂಣಚ್ಚ, ಮೂಡಾ ಮಾಜಿ ಅಧ್ಯಕ್ಷೆ ಸುರಯ್ಯಾ ಅಬ್ರಾರ್, ನಗರಸಭಾ ಅಧ್ಯಕ್ಷೆ ಕಾವೇರಮ್ಮ ಸೋಮಣ್ಣ, ಜಯಂತಿ ಶೆಟ್ಟಿ, ಕಾಂಗ್ರೆಸ್ ಪ್ರಬಾರ ಜಿಲ್ಲಾಧ್ಯಕ್ಷ ಟಿ.ಪಿ. ರಮೇಶ್, ಮಾಜಿ ಅಧ್ಯಕ್ಷ ಬಿ.ಟಿ. ಪ್ರದೀಪ್, ಜಿಲ್ಲಾ ಪ್ರಧಾನ ಕಾರ್ಯದರ್ಶಿ ವಿ.ಪಿ. ಸುರೇಶ್, ಸೋಮವಾರಪೇಟೆ ಬ್ಲಾಕ್ ಅಧ್ಯಕ್ಷ ಕೆ.ಎಂ. ಲೋಕೇಶ್, ನಗರಸಭಾ ಸದಸ್ಯರಾದ ಕೆ.ಎಂ. ಗಣೇಶ್, ಪ್ರಕಾಶ್ ಆಚಾರ್ಯ, ಜುಲೇಕಾಬಿ, ಲೀಲಾ ಶೇಷಮ್ಮ, ಪ್ರಮುಖರಾದ ನಾಪಂಡ ಮುತ್ತಪ್ಪ, ಅಬ್ದುಲ್ ರಜಾಕ್, ಟಿ.ಹೆಚ್. ಉದಯಕುಮಾರ್, ಬಿ.ಎನ್. ಪ್ರಕಾಶ್, ಹಿರಿಯ ಮುಖಂಡ ಮಿಟ್ಟು ಚಂಗಪ್ಪ ಹಾಗೂ ಇನ್ನಿತರರು ಇದ್ದರು.