ಚೆಟ್ಟಳ್ಳಿ, ನ. 9: ಕೊಡವ ಸಾಹಿತ್ಯ ಅಕಾಡೆಮಿ ಮತ್ತು, ಶ್ರೀ ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘ ಮೈಸೂರು ಇವರ ಸಂಯುಕ್ತಆಶ್ರಯದಲ್ಲಿ ಮೈಸೂರು ಕೊಡವ ಸಮಾಜದಲ್ಲಿ ಪುತ್ತರಿ ಸಂತೋಷ ಕೂಟ ನಡೆಯಿತು.
ಸಂತೋಷ ಕೂಟವನ್ನು ಉದ್ಘಾಟಿಸಿ ಮಾತನಾಡಿದ ನಿವೃತ್ತ ಪ್ರಾದೇಶಿಕ ಆಯುಕ್ತ ಅಪ್ಪಚೆಟ್ಟೋಳಂಡ ಕುಂಜಪ್ಪ ತಂದೆ-ತಾಯಿಗಳು ಮಕ್ಕಳನ್ನು ಓದಿಸಿ ಕಾರ್ಪೊರೇಟೀವ್ ಸೆಕ್ಟರ್ಗಳಿಗೆ ತಳ್ಳದೆ, ಪಬ್ಲಿಕ್ ಸರ್ವಿಸ್ ಪರೀಕ್ಷೆಗೆ ತಯಾರು ಮಾಡಬೇಕೆಂದರು. ಕೊಡಗಿನಲ್ಲಿ ಐ.ಎ.ಸ್. ಮತ್ತು ಐ.ಪಿ.ಸ್. ಮಟ್ಟದ ಅಧಿಕಾರಿಗಳು ಕೇವಲ ಬೆರಳೆಣಿಕೆಯಷ್ಟು ಮಾತ್ರ ಕಾಣಸಿಗುತ್ತಾರೆ. ಆದಷ್ಟು ಮಟ್ಟಿಗೆ ಮಕ್ಕಳನ್ನು ಸರಕಾರಿ ಕೆಲಸಕ್ಕೆ ಸೇರಿಸಿ ಎಂದು ಕಿವಿ ಮಾತು ಹೇಳಿದರು.
ಅಧ್ಯಕ್ಷತೆ ವಹಿಸಿ ಮಾತನಾಡಿದ ಅಕಾಡೆಮಿ ಅಧ್ಯಕ್ಷ ಬಿದ್ದಾಟಂಡ ತಮ್ಮಯ್ಯ ಅವರು, ಎರಡೂವರೆ ವರ್ಷದಲ್ಲಿ ಕೊಡವ ಜನಾಂಗಕ್ಕೆ ತೃಪ್ತಿ ಕೊಡುವಂತ ಕೆಲಸವನ್ನು ಮಾಡಿದ್ದೇನೆ. ಬೇಧ ಭಾವ ಮಾಡದೇ ಎಲ್ಲಾ ಕೊಡವ ಭಾಷಿಕರನ್ನು ಗಣನೆಗೆ ತೆಗೆದುಕೊಂಡು ಕೆಲಸ ಮಾಡಿರುವದಾಗಿ ಹೇಳಿದರು.
ಆಟ್-ಪಾಟ್ ಹಾಗೂ ಇನ್ನಿತರ ಕಾರ್ಯಕ್ರಮ ಆಯೋಜಿಸಿರುವ ದಾಗಿ ಹೇಳಿದರು. ಪೋಷಕರು ಮಕ್ಕಳು ಓದುವದರಲ್ಲಿ ಆಸಕ್ತಿ ಕಳೆದುಕೊಳ್ಳುತಾರೋ ಎಂದು ಹೆದರಿ ಅದನ್ನು ಚಿವುಟಿ ಹಾಕುತ್ತಾರೆ. ದಯವಿಟ್ಟು ಹಾಗೆ ಮಾಡಬೇಡಿ, ನಮ್ಮ ಸಂಸ್ಕೃತಿಯನ್ನೂ ಕಲಿಸಿ ಉಳಿಸಿ, ಅವರನ್ನು ಚೆನ್ನಾಗಿ ಓದಿಸಿ ಆದಷ್ಟು ಮಟ್ಟಿಗೆ ಸರಕಾರಿ ನೌಕರಿಗೆ ಬರುವಂತೆ ಮಾಡಿ ಎಂದು ನುಡಿದರು.
ಕಾರ್ಯಕ್ರಮದಲ್ಲಿ ಮೈಸೂರಿನಲ್ಲಿ ವಿವಿಧ ಕ್ಷೇತ್ರದಲ್ಲಿ ಸಾಧನೆ ಮಾಡಿದ ಗಣ್ಯರಾದ ಕಂಬೆಯಂಡ ಅಪ್ಪಚ್ಚು, ಮಚ್ಚುರ ಕಾವೇರಪ್ಪ, ಮಳ್ಳೆಂಗಡ ಅಪ್ಪಯ್ಯ, ಚೀಯಕ್ಪೂವಂಡ ಸೋಮಯ್ಯ, ಚೆಯ್ಯಂಡಾ ತಿಮ್ಮಯ, ಚೇನಂಡ ರಮೇಶ್, ಬಟ್ಟಿಯಂಡ ಪೊನ್ನಪ್ಪ, ಕಾಣತಂಡ ಪಳಂಗಪ್ಪ, ನಾಟೋಳಂಡ ದೇವಯ್ಯ, ಹೊಟ್ಟೆಮಾಡ ಕುಶಾಲಪ್ಪ ಅವರುಗಳಿಗೆ ಸನ್ಮಾನಿಸಲಾಯಿತು. ವಿದ್ಯಾಕ್ಷೇತ್ರದಲ್ಲಿ ಸಾಧನೆಗೈದ ವಿದ್ಯಾರ್ಥಿಗಳಾದ ಚೋಯಮದಂಡ ರಾಧ ಚೆಂಗಪ್ಪ, ಮುಂಡಂಡ ಪುನೀತ್ ದೇವಯ್ಯ, ಮಳ್ಳೆಂಗಡ ಪೆಮ್ಮಯ್ಯ, ಮಲ್ಲಮಡ ಅಂಕಿತ್ ಪೊನ್ನಣ್ಣ, ಮುಳ್ಳೆಂಗಡ ಕುಟ್ಟಪ್ಪ ,ಕೊಟ್ರಂಗಡ ಧೀರಜ್ ಕರಂಬಯ್ಯ, ಸೂರಜ್ ಮಂದಣ್ಣ, ದ್ರಿಶ್ಯ ಮುದ್ದಪ್ಪ, ಅರ್ಜುನ್ ಚೆಂಗಪ್ಪ, ಮಂದೆಯಂಡ ಜೀವನ್ ಅವರನ್ನು ಸನ್ಮಾನಿಸಲಾಯಿತು .
ಈ ಸಂದರ್ಭ ಬೊಳಕಾಟ್, ಕೋಲಾಟವನ್ನು ತಲಕಾವೇರಿ ಕೊಡವ ಸಾಂಸ್ಕೃತಿಕ ಸಂಘದವರು ನಡೆಸಿ ಕೊಟ್ಟರೆ, ಅವರದೇ ಮಹಿಳೆಯರ ತಂಡದಿಂದ ಜೋಡಿ ಉಮ್ಮತ್ತಾಟ್ ಪ್ರದರ್ಶನ ವಿಶೇಷವಾಗಿತ್ತು.
ಅಪ್ಪಟ್ಟಿರ ಬೀನಾ ಸುಂದರ ಕೊಡಗು ಬಗ್ಗೆ ಕವನ ವಾಚಿಸಿದರೆ, ಟಿ.ಎನ್. ಯಶೋಧ ಕೊಡವ ಸಮುದಾಯತ್ತ ಪದ್ಧತಿ-ಪರಂಪರೆ ಅಂದ್ ಇಂದ್ ಎಂಬದರ ಬಗ್ಗೆ ವಿಚಾರ ಮಂಡನೆ ನಡೆಸಿದರು.
ವೇದಿಕೆಯಲ್ಲಿ ಪೆಮ್ಮಂಡ ಸೂರಜ್, ಮುಕ್ಕಾಟಿರ ಸುದ ಪೂಣಚ್ಚ, ಮುಳ್ಳೆಂಗಡ ಬೇಬಿ ಚೋಂದಮ್ಮ ಹಾಗೂ ತಲಕಾವೇರಿ ಸಂಘದ ಸದಸ್ಯರು ಇದ್ದರು. ಪ್ರಾರ್ಥನೆಯನ್ನು ಆಪಟ್ಟಿರ ಬೀನಾ ಮಾಡಿದರೆ, ಮುಕ್ಕಾಟಿರ ಸುದ ಪೂಣಚ್ಚ ಸ್ವಾಗತಿಸಿ, ರಾಣಿ ವಂದಿಸಿದರು.