ಸೋಮವಾರಪೇಟೆ, ಸೆ. 1: ಅಮಾನವೀಯ ಕೃತ್ಯಗಳಲ್ಲಿ ತೊಡಗಿರುವವರು ಯಾವದೇ ಮತ ಧರ್ಮಗಳಿಗೆ ಅಥವಾ ಸಂಘ ಸಂಸ್ಥೆಗಳಿಗೆ ಸೇರಿದ್ದರೂ ಅವರ ವಿರುದ್ಧ ಪೊಲೀಸ್ ಇಲಾಖೆ ನಿರ್ಧಾಕ್ಷಿಣ್ಯ ಕ್ರಮ ಕೈಗೊಳ್ಳಬೇಕೆಂದು ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ಆಗ್ರಹಿಸಿದೆ.

ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ಸುನ್ನಿ ಸ್ಟೂಡೆಂಟ್ಸ್ ಫೆಡರೇಷನ್ ರಾಜ್ಯ ಸದಸ್ಯ ಕೆ.ಎಂ. ಅಬೂಬಕರ್ ಸಿದ್ದೀಖ್ ಮೋಂಟುಗೋಳಿ ಮಾತನಾಡಿ, ಯಾವದೇ ಧರ್ಮವೂ ಹಿಂಸೆಯನ್ನು ಬೋಧಿಸುವದಿಲ್ಲ. ಆದರೂ ಧರ್ಮದ ಆಧಾರದಲ್ಲಿ ವ್ಯಕ್ತಿಗಳನ್ನು ಗುರುತಿಸಿ ಪೀಡಿಸುವ ಪ್ರವೃತ್ತಿ ಧರ್ಮಗಳಿಗೆ ಮಾಡುವ ಅಪಮಾನ. ಸಮಾಜದಲ್ಲಿ ತೀರ ಸಣ್ಣ ಪ್ರಮಾಣದಲ್ಲಿರುವ ಕೋಮುವಾದಿ ಗಳು ಮತ್ತು ಹಿಂಸಾಕೋರರು ಸಮಾಜದ ಶಾಂತಿಯನ್ನು ಕದಡುತ್ತಿದ್ದು ಇಂತಹವರನ್ನು ಸ್ವಧರ್ಮೀಯರೇ ಪ್ರಶ್ನಿಸಿ ಅವರ ವಿರುದ್ಧ ಕ್ರಮಕೈಗೊಳ್ಳಬೇಕು. ಕಾನೂನನ್ನು ಕೈಗೆತ್ತಿಕೊಳ್ಳಲು ಯಾರಿಗೂ ಅವಕಾಶ ನೀಡಬಾರದು. ಇತ್ತೀಚೆಗೆ ಕುಶಾಲನಗರ ಸಮೀಪ ನಡೆದ ಪ್ರವೀಣ್ ಪೂಜಾರಿಯವರ ಹತ್ಯೆ, ಮಸೀದಿಗೆ ಕಲ್ಲೆಸೆತ, ವ್ಯಕ್ತಿಯೊಬ್ಬರಿಗೆ ಚೂರಿ ಇರಿತ ಹಾಗೂ ವಿದ್ಯಾರ್ಥಿಗಳ ಮೇಲೆ ಹಲ್ಲೆ ಇತ್ಯಾದಿ ಘಟನೆಗಳು ಖಂಡನೀಯ. ಪ್ರವೀಣ್ ಪೂಜಾರಿ ಹತ್ಯೆ ಪ್ರಕರಣ ವನ್ನು ಸೂಕ್ತ ತನಿಖೆಗೊಳಪಡಿಸಿ ನ್ಯಾಯ ದೊರಕಿಸಿಕೊಡಬೇಕು. ಮಸೀದಿಗೆ ಕಲ್ಲೆಸೆದವರನ್ನು ಇನ್ನೂ ಬಂಧಿಸದಿರುವದು ಅಭದ್ರತೆಯ ಭಾವನೆಗೆ ಕಾರಣವಾಗಿದೆ.

ಬಕ್ರೀದ್ ಹಾಗೂ ಗೌರಿ ಗಣೇಶ ಹಬ್ಬಗಳು ಸಮೀಪಿಸುತ್ತಿರುವ ಹಿನ್ನೆಲೆ ಯಲ್ಲಿ ಸುಗಮವಾಗಿ ಹಬ್ಬವನ್ನು ಆಚರಿಸಲು ಸಾಧ್ಯವಾಗುವಂತೆ ಜಿಲ್ಲಾಡಳಿತ ಸೂಕ್ತ ಬಂದೋಬಸ್ತ್ ಏರ್ಪಡಿಸಬೇಕು. ಯಾವದೇ ಧರ್ಮೀಯರು ನಡೆಸುವ ಜಾಥಾ ಹಾಗೂ ಸಮಾವೇಶಗಳಲ್ಲಿ ಅನ್ಯಧರ್ಮೀಯರನ್ನು ನಿಂದಿಸಿ ಪ್ರಚೋದನಾಕಾರಿ ಘೋಷಣೆಗಳನ್ನು ಕೂಗದಂತೆ ಪೊಲೀಸ್ ಇಲಾಖೆ ಕಟ್ಟುನಿಟ್ಟಿನ ಆದೇಶ ನೀಡಬೇಕು ಎಂದು ಮನವಿ ಮಾಡಿದರು. ಗೋಷ್ಠಿಯಲ್ಲಿ ಸುನ್ನಿ ಯುವಜನ ಸಂಘದ ಜಿಲ್ಲಾಧ್ಯಕ್ಷ ಎಂ.ವೈ. ಹಫಿಲ್ ಸಅದಿ, ಸುನ್ನಿ ಮ್ಯಾನೇಜ್‍ಮೆಂಟ್ ಅಸೋಸಿಯೇಶನ್ ಜಿಲ್ಲಾಧ್ಯಕ್ಷ ಅಬ್ದುಲ್ ಲತೀಫ್ ಸುಂಟಿಕೊಪ್ಪ, ಎಸ್‍ಎಸ್‍ಎಫ್ ಮುಖಂಡ ಕೊಡ್ಲಿಪೇಟೆಯ ಅಬ್ದುಲ್ ಅಜೀಜ್ ಸಖಾಫಿ, ಸುನ್ನಿ ಜಮಾಯತ್ತ್‍ನ ಮುಅಲ್ಲಿಮೀನ್ ಮುಖಂಡ ಮುನೀರ್ ಸಅದಿ, ಜಮಾಅತ್ತ್ ಸದಸ್ಯ ಮೊಹಿದೀನ್ ಉಪಸ್ಥಿತರಿ ದ್ದರು.