ಸುಂಟಿಕೊಪ್ಪ, ಸೆ. 1: ಕ್ರೀಡೆಯಿಂದ ದೈಹಿಕವಾಗಿ ಮತ್ತು ಮಾನಸಿಕವಾಗಿ ಮನಸ್ಸನ್ನು ನಿಯಂತ್ರಣದಲ್ಲಿಡಲು ಸಾಧ್ಯ ಎಂದು ವಿಧಾನ ಪರಿಷತ್ ಸದಸ್ಯ ಸುನಿಲ್ ಸುಬ್ರಮಣಿ ಹೇಳಿದರು.

ಇಲ್ಲಿಗೆ ಸಮೀಪದ ಕುಂಬೂರು ಸರಕಾರಿ ಹಿರಿಯ ಪ್ರಾಥಮಿಕ ಶಾಲಾ ಮೈದಾನದಲ್ಲಿ ನಡೆದ ಮಾದಾಪುರ ವಲಯ ಮಟ್ಟದ ಕ್ರೀಡಾಕೂಟದಲ್ಲಿ ವಿಶೇಷ ಅತಿಥಿಯಾಗಿ ಆಗಮಿಸಿ ಕಬಡ್ಡಿ ಪಂದ್ಯಾಟಕ್ಕೆ ಚಾಲನೆ ನೀಡಿ ಮಾತನಾಡಿದರು.

ಶಾಲಾ ದಿನಗಳಲ್ಲಿ ಪಾಠದ ಜೊತೆಯಲ್ಲಿ ಕ್ರೀಡೆಗೂ ಹೆಚ್ಚಿನ ಒತ್ತನ್ನು ನೀಡಬೇಕು. ಅದಕ್ಕೆ ಶಿಕ್ಷಕರು ಪ್ರೋತ್ಸಾಹವನ್ನು ನೀಡುವದರೊಂದಿಗೆ ಮಕ್ಕಳಲ್ಲಿ ಅಡಗಿರುವ ಕಲೆಯನ್ನು ಹೊರಹೊಮ್ಮಿಸಬೇಕು. ಅವರಿಗೆ ಬೇಕಾದ ಅಗತ್ಯ ಮಾಹಿತಿಗಳನ್ನು ನೀಡಬೇಕು ಎಂದರಲ್ಲದೇ ಎಂಎಲ್‍ಸಿ ಅನುದಾನದಿಂದ ಶಾಲೆಗೆ ರೂ. 1 ಲಕ್ಷ ನೀಡುವ ಭರವಸೆ ನೀಡಿದರು.

ಈ ಸಂದರ್ಭ ಕ್ರೀಡಾ ಧ್ವಜಾರೋಹಣವನ್ನು ನೆರವೇರಿಸಿ ಮಾತನಾಡಿದ ತಾಲೂಕು ಪಂಚಾಯಿತಿ ಉಪಾಧ್ಯಕ್ಷ ಅಭಿಮನ್ಯು ಕುಮಾರ್, ದೈನಂದಿನ ಪಾಠ-ಪ್ರವಚನದ ಜೊತೆಯಲ್ಲಿ ಕ್ರೀಡೆ, ಸಾಂಸ್ಕøತಿಕ ಚಟುವಟಿಕೆಗಳಲ್ಲಿ ಎಲ್ಲರೂ ಭಾಗವಹಿಸಬೇಕು. ತಾಲೂಕು ಪಂಚಾಯಿತಿಯಿಂದ ಶಾಲೆಗೆ ರೂ. 50 ಸಾವಿರ ನೀಡುವದಾಗಿ ಭರವಸೆ ನೀಡಿದರು.

ಕ್ರೀಡಾ ಜ್ಯೋತಿಗೆ ಜಿಲ್ಲಾ ಪಂಚಾಯಿತಿ ಸದಸ್ಯೆ ಕುಮುದಾ ಧರ್ಮಪ್ಪ ಮಾದಾಪುರದ ಗಣಪತಿ ದೇವಾಲಯದಿಂದ ಚಾಲನೆ ನೀಡಿದರು. ಶಾಲಾ ವಿದ್ಯಾರ್ಥಿಗಳು, ಕುಂಬೂರಿನ ಆಟೋ ಚಾಲಕರು, ಕರ್ನಾಟಕ ರಕ್ಷಣಾ ವೇದಿಕೆಯ ಪದಾಧಿಕಾರಿಗಳು, ಗ್ರಾಮಸ್ಥರ ಸಮ್ಮುಖದಲ್ಲಿ ಕ್ರೀಡಾ ಜ್ಯೋತಿಯನ್ನು ಮೆರವಣಿಗೆ ಮೂಲಕ ಶಾಲಾ ಮೈದಾನಕ್ಕೆ ತರಲಾಯಿತು.

ವೇದಿಕೆಯಲ್ಲಿ ಜಿಲ್ಲಾ ಕ್ರೀಡಾ ಅಧೀಕ್ಷಕಿ ಕಾವೇರಮ್ಮ, ಜಿಲ್ಲಾ ದೈಹಿಕ ಶಿಕ್ಷಕರ ಸಂಘದ ಅಧ್ಯಕ್ಷ ವೆಂಕಟೇಶ್, ಡಿಸಿಸಿ ಬ್ಯಾಂಕ್ ಅಧ್ಯಕ್ಷ ಬಿ.ಡಿ. ಮಂಜುನಾಥ್, ಕಾಫಿ ಬೆಳೆಗಾರರಾದ ಸುಂದರ್, ಪೆಮ್ಮಯ್ಯ, ಜಯರಾಂ, ಗ್ರಾಮ ಪಂಚಾಯಿತಿ ಸದಸ್ಯರಾದ ಭಾಗೀರಥಿ, ಪ್ರಸನ್ನ, ಸೋಮಪ್ಪ, ಶಾಲಾಭಿವೃದ್ಧಿ ಅಧ್ಯಕ್ಷ ಎಂ. ಮಂಜುನಾಥ್, ಕ್ಲಸ್ಟರ್ ಸಂಪನ್ಮೂಲ ವ್ಯಕ್ತಿ ವಸಂತ್ ಮತ್ತಿತರರು ಇದ್ದರು.

ಕುಂಬೂರು ಶಾಲೆಯ ಮುಖ್ಯ ಶಿಕ್ಷಕ ಎಂ.ಬಿ. ರಾಜಣ್ಣ ಸ್ವಾಗತಿಸಿ, ಶಿಕ್ಷಕಿ ಸರಳ ಕುಮಾರಿ ನಿರೂಪಿಸಿದರು. ಕಾರ್ಯಕ್ರಮದ ನಂತರ ಶಾಲಾ ಆವರಣದಲ್ಲಿ ಗಿಡ ನೆಡುವ ಮೂಲಕ ವನಮಹೋತ್ಸವ ವನ್ನು ಆಚರಿಸಲಾಯಿತು.