ಸೋಮವಾರಪೇಟೆ, ಡಿ.28: ಅಪಘಾತದಲ್ಲಿ ಗಾಯಗೊಂಡವರ ರಕ್ಷಣೆಗೆ ಧಾವಿಸುವದು ಪ್ರಜ್ಞಾವಂತರ ಕರ್ತವ್ಯವಾಗಿದೆ ಎಂದು ಸೋಮವಾರಪೇಟೆ ಪೊಲೀಸ್ ವೃತ್ತನಿರೀಕ್ಷಕ ಪರಶಿವಮೂರ್ತಿ ಹೇಳಿದರು.

ಸೋಮವಾರಪೇಟೆ ರೋಟರಿ ಕ್ಲಬ್ ವತಿಯಿಂದ ಸಫಾಲಿ ಸಭಾಂಗಣದಲ್ಲಿ ಆಯೋಜಿಸಿದ್ದ ರಸ್ತೆ ಸುರಕ್ಷಾ ಕ್ರಮಗಳು ಮತ್ತು ಜಾಗೃತಿ ಕಾರ್ಯಾಗಾರದಲ್ಲಿ ಭಾಗವಹಿಸಿ ಅವರು ಮಾತನಾಡಿದರು.

ಅಪಘಾತದಿಂದ ರಸ್ತೆಯಲ್ಲಿ ಬಿದ್ದಿರುವ ವ್ಯಕ್ತಿಯನ್ನು ಕೂಡಲೆ ಸ್ಥಳೀಯ ಆಸ್ಪತ್ರೆಗೆ ದಾಖಲಿಸುವದಕ್ಕೆ ಮುಂದಾಗಬೇಕು. ಜೀವ ಉಳಿಸುವ ಕಾರ್ಯ ಮಾಡಿದ ವ್ಯಕ್ತಿಯನ್ನು ಪೊಲೀಸ್ ಇಲಾಖೆ ಹಾಗೂ ನಾಗರಿಕ ಸಮಾಜ ಗೌರವಿಸುತ್ತದೆ. ಅಲ್ಲದೆ ಸಹಾಯ ಮಾಡಿದ ವ್ಯಕ್ತಿಯ ಹೆಸರನ್ನು ಅಪಘಾತ ಪ್ರಕರಣದಲ್ಲಿ ಸೇರಿಸುವದಿಲ್ಲ ಎಂದು ಹೇಳಿದರು.

ಅಪ್ರಾಪ್ತ ಮಕ್ಕಳಿಗೆ ವಾಹನಗಳನ್ನು ನೀಡುವದು ಅಪರಾಧವಾಗಿದೆ. ಅಪಘಾತ ಪ್ರಕರಣದಲ್ಲಿ ಪೋಷಕರೆ ಮೊದಲ ಆರೋಪಿಯಾಗುತ್ತಾರೆ ಎಂದು ಎಚ್ಚರಿಸಿದರು. ಮದ್ಯಪಾನ ಮಾಡಿ ವಾಹನ ಚಾಲನೆ ಮಾಡಬಾರದು. ಅತಿವೇಗ ಅಪಘಾತಕ್ಕೆ ಕಾರಣವಾಗುತ್ತದೆ. ಹೆಲ್ಮೆಟ್ ಧರಿಸಿ ಬೈಕ್ ಚಾಲಿಸಬೇಕು. ತಮ್ಮ ನಿರ್ಲಕ್ಷ್ಯದಿಂದ ಅಪಘಾತಕ್ಕೆ ತುತ್ತಾಗಿ ಜೀವ ಉಳಿಸಿಕೊಂಡರೂ ಜೀವನ ಪರ್ಯಂತ ಕಷ್ಟ ಅನುಭವಿಸ ಬೇಕಾಗುತ್ತದೆ. ಆರೋಗ್ಯವಂತ ಯುವಕರು ಈ ದೇಶದ ಸಂಪತ್ತಾಗಿದ್ದು, ಪ್ರತಿಯೊಬ್ಬರೂ ರಸ್ತೆ ಸುರಕ್ಷಾ ನಿಯಮಗಳನ್ನು ಪಾಲಿಸಿದರೆ ಆದಷ್ಟು ಅಪಘಾತಗಳನ್ನು ತಡೆಯಬಹುದು ಎಂದು ಹೇಳಿದರು.

ಶನಿವಾರಸಂತೆ ಠಾಣಾಧಿಕಾರಿ ಮರಿಸ್ವಾಮಿ ಮಾತನಾಡಿ, ಪೋಲಿಯೋ ಮುಕ್ತ ಭಾರತ ನಿರ್ಮಾಣದಲ್ಲಿ ರೋಟರಿ ಸಂಸ್ಥೆ ಕೊಡುಗೆ ಅಪಾರವಾಗಿದ್ದು, ಅಪಘಾತಮುಕ್ತ ಭಾರತ ನಿರ್ಮಾಣದಲ್ಲಿ ರೋಟರಿ ಕೈಜೋಡಿಸಬೇಕು ಎಂದು ಮನವಿ ಮಾಡಿದರು. ಕಾರ್ಯಕ್ರಮದಲ್ಲಿ ರೋಟರಿ ಸಂಸ್ಥೆ ಅಧ್ಯಕ್ಷ ಭರತ್ ಭೀಮಯ್ಯ, ಕಾರ್ಯದರ್ಶಿ ವನಮಾಲಿ ಹೆಬ್ಬಾರ್ ಉಪಸ್ಥಿತರಿದ್ದರು.