ಸೋಮವಾರಪೇಟೆ, ಡಿ. 28: ಇಲ್ಲಿನ ಪಟ್ಟಣ ಪಂಚಾಯಿತಿ ಚುನಾಯಿತ ಸದಸ್ಯರು ತಮ್ಮ ಸ್ವಾರ್ಥ, ಒಣ ಪ್ರತಿಷ್ಠೆಯಿಂದಾಗಿ ಪಟ್ಟಣದ ಅಭಿವೃದ್ಧಿಯ ಬಗ್ಗೆ ಚಿಂತನೆ ನಡೆಸುತ್ತಿಲ್ಲ ಮುಂದಿನ ಹತ್ತು ದಿನಗಳ ಒಳಗಾಗಿ ತಮ್ಮ ನಿರ್ಧಾರಗಳನ್ನು ಬದಲಿಸಿಕೊಂಡು ಅಭಿವೃದ್ಧಿ ಆಡಳಿತ ನಡೆಸದಿದ್ದಲ್ಲಿ ಪಂಚಾಯಿತಿ ಕಚೇರಿಗೆ ಬೀಗ ಜಡಿದು ಪ್ರತಿಭಟಿಸುವದಾಗಿ ಕರ್ನಾಟಕ ರಕ್ಷಣಾ ವೇದಿಕೆ ಎಚ್ಚರಿಕೆ ನೀಡಿದೆ.
ಇಲ್ಲಿನ ಪತ್ರಿಕಾಭವನದಲ್ಲಿ ಆಯೋಜಿಸಲಾಗಿದ್ದ ಸುದ್ದಿಗೋಷ್ಠಿ ಯಲ್ಲಿ ರಕ್ಷಣಾ ವೇದಿಕೆಯ ತಾಲೂಕು ಘಟಕದ ಅಧ್ಯಕ್ಷ ಕೆ.ಎನ್. ದೀಪಕ್ ಮಾತನಾಡಿ, ಪಟ್ಟಣ ಪಂಚಾಯಿತಿ ವ್ಯಾಪ್ತಿಯಲ್ಲಿ ಕುಡಿಯುವ ನೀರಿನ ಸಮಸ್ಯೆ, ಸರಕಾರಿ ಆಸ್ಪತ್ರೆಯಲ್ಲಿ ಅವ್ಯವಸ್ಥೆ, ಸರಕಾರಿ ಬಸ್ ನಿಲ್ದಾಣದ ಅಭಿವೃದ್ಧಿ ಕಾಮಗಾರಿ ಕುಂಠಿತಗೊಂಡಿರುವದು, ವಾಹನ ನಿಲುಗಡೆ ಸಮಸ್ಯೆ, ಪೂರ್ಣಗೊಳ್ಳದ ಶತಮಾನೋತ್ಸವ ಭವನ, ಪಟ್ಟಣ ಪಂಚಾಯಿತಿಯ ಅಂಗಡಿ ಮಳಿಗೆಗಳ ಟೆಂಡರ್ ಪ್ರಕ್ರಿಯೆ ವಿಳಂಬ ಗೊಂಡಿರುವದು, ನಿವೇಶನ ರಹಿತರಿಗೆ ನಿವೇಶನಕ್ಕೆ ಜಾಗ ಒದಗಿಸಲು ವಿಫಲರಾಗಿರುವದೂ ಸೇರಿದಂತೆ ಹಲವಾರು ಸಮಸ್ಯೆಗಳನ್ನು ಪರಿಹರಿಸುವಲ್ಲಿ ಈಗಿನ ಪಂಚಾಯಿತಿ ಆಡಳಿತ ಮಂಡಳಿ ನಿಷ್ಕ್ರಿಯಗೊಂಡಿದೆ ಎಂದು ಆರೋಪಿಸಿದರು.
ಇತ್ತೀಚೆಗೆ ಪಟ್ಟಣದ ಅಭಿವೃದ್ದಿಯ ವಾರ್ಷಿಕ ಆಯವ್ಯಯ ಪಟ್ಟಿ ತಯಾರಿಕೆಗೆ ಕರೆಯಲಾಗಿದ್ದ ಸಭೆಯಲ್ಲಿ ಉಪಾಧ್ಯಕ್ಷ ರಮೇಶ್ ಶೆಟ್ಟಿ, ಸದಸ್ಯರುಗಳಾದ ಶೀಲಾ ಡಿಸೋಜ,ಕೆ.ಎ. ಆದಂ, ವೆಂಕಟೇಶ್, ಮೀನಾಕುಮಾರಿ, ನಾಮ ನಿರ್ದೇಶಿತ ಸದಸ್ಯರುಗಳಾದ ಇಂದ್ರೇಶ್, ಉದಯ ಶಂಕರ್ ಗೈರು ಹಾಜರಾಗಿದ್ದರು. ಅಧ್ಯಕ್ಷರು ಮತ್ತು ಸದಸ್ಯರ ನಡುವೆ ಹೊಂದಾಣಿಕೆ ಕೊರತೆ ಇದೆ. ಅಧ್ಯಕ್ಷರ ಏಕಪಕ್ಷೀಯ ನಿರ್ಧಾರದಿಂದ ತಾವು ಪ್ರತಿನಿಧಿಸುವ ಪಕ್ಷದ ಸದಸ್ಯರಿಂದಲೇ ವಿರೋಧವನ್ನು ಎದುರಿಸಬೇಕಾದ ಪರಿಸ್ಥಿತಿ ಬಂದೊದಗಿದೆ. ಸಾರ್ವಜನಿಕ ಸೇವೆಗಾಗಿ ನಿಗದಿಪಡಿಸಿರುವ ಗೌರವಧನವನ್ನು ಪಡೆದು ಪಟ್ಟಣದ ಅಭಿವೃದ್ದಿಯನ್ನು ಮರೆತು ನಿರಂಕುಶ ಪ್ರಭುತ್ವವನ್ನು ಸೃಷ್ಟಿಸುವ ಮೂಲಕ ಪ್ರಜಾಪ್ರಭುತ್ವ ವ್ಯವಸ್ಥೆಗೆ ಧಕ್ಕೆ ಉಂಟು ಮಾಡಿದ್ದಾರೆ ಎಂದು ಆರೋಪಿಸಿದರು.
ಈ ನಿಟ್ಟಿನಲ್ಲಿ ಪಟ್ಟಣ ಪಂಚಾಯಿತಿ ಅಭಿವೃದ್ದಿ ದೃಷ್ಟಿಯಿಂದ ಚುನಾಯಿತ ಜನಪ್ರತಿನಿಧಿಗಳ ಕಾರ್ಯವೈಖರಿಯನ್ನು ಖಂಡಿಸಿ ಕಚೇರಿಗೆ ಮುತ್ತಿಗೆ ಹಾಕಲು ತೀರ್ಮಾ ನಿಸಲಾಗಿದೆ. ಅಭಿವೃದ್ದಿಯನ್ನು ಮರೆತ ಸದಸ್ಯರು ತಮ್ಮ ಸ್ಥಾನಕ್ಕೆ ರಾಜೀನಾಮೆಯನ್ನು ನೀಡಲಿ ಎಂದು ಆಗ್ರಹಿಸಿದರು.
ಗೋಷ್ಠಿಯಲ್ಲಿ ನಗರ ಘಟಕದ ಅಧ್ಯಕ್ಷ ಬಿ.ಎಸ್. ಮಂಜುನಾಥ್, ಮಹಿಳಾ ಘಟಕದ ಅಧ್ಯಕ್ಷೆ ರೂಪ ಸುರೇಶ್, ಸಾಹಿತ್ಯ ಘಟಕದ ಅಧ್ಯಕ್ಷ ಕೆ.ಪಿ. ಸುದರ್ಶನ್, ಪದಾಧಿಕಾರಿ ಗಳಾದ ಸಂತೋಷ್ ಉಪಸ್ಥಿತರಿದ್ದರು.