ಸೋಮವಾರಪೇಟೆ,ಆ.21: ಸಮಾಜದಲ್ಲಿ ತುಳಿತಕ್ಕೆ ಒಳಗಾಗಿದ್ದ ಜನಾಂಗಕ್ಕೆ ಆಶಾಕಿರಣವಾದ ಬ್ರಹ್ಮಶ್ರೀ ನಾರಾಯಣಗುರುಗಳ ಜನ್ಮದಿನಾಚರಣೆ ಯನ್ನು ಸರಕಾರಿ ಕಾರ್ಯಕ್ರಮವಾಗಿ ಆಚರಿಸುವಂತಾದಾಗ ಮಾತ್ರ ಸಮಾನತೆಗೆ ಅರ್ಥ ಬರುತ್ತದೆ ಎಂದು ಇಲ್ಲಿನ ನಾರಾಯಣಗುರು ಸೇವಾ ಸಮಿತಿ ಅಧ್ಯಕ್ಷ ಎನ್.ಡಿ. ಕೃಷ್ಣಪ್ಪ ಅಭಿಪ್ರಾಯಿಸಿದರು.

ಇಲ್ಲಿನ ನಾರಾಯಣಗುರು ಸೇವಾ ಸಮಿತಿ ವತಿಯಿಂದ ಸಮಿತಿಯ ಸಭಾಂಗಣದಲ್ಲಿ ಆಯೋಜಿಸಿದ್ದ ಶ್ರೀ ನಾರಾಯಣಗುರುಗಳ 160ನೇ ಜನ್ಮದಿನಾಚರಣಾ ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿ ಅವರು ಮಾತನಾಡಿದರು. ಬ್ರಹ್ಮಶ್ರೀಗಳ ಹೆಸರಿನಲ್ಲಿ ಸ್ಥಾಪಿತವಾದ ಸಂಘ ಸಂಘಟನೆಯ ಮೂಲಕ ಬಲಯುತವಾಗುತ್ತಿದೆ. ಮುಂದಿನ ದಿನಗಳಲ್ಲಿ ಶ್ರೀಗಳ ಗುರುಮಂದಿರವನ್ನು ನಿರ್ಮಿಸುವ ಉದ್ಧೇಶವನ್ನು ಹೊಂದಿದ್ದು, ಸರ್ವರ ಸಹಕಾರ ಅಗತ್ಯ ಎಂದರು. ಸಮಿತಿಯ ಮಹಿಳಾ ಘಟಕದ ಅಧ್ಯಕ್ಷೆ ಬೇಬಿ ಚಂದ್ರಹಾಸ್ ಮಾತನಾಡಿ, ಕೇರಳ ಸೇರಿದಂತೆ ಕರಾವಳಿ ಜಿಲ್ಲೆಗಳಲ್ಲಿ ಹಿಂದುಳಿದ ಜನಾಂಗ ಸಾಮಾಜಿಕ ಬಹಿಷ್ಕಾರಕ್ಕೆ ಒಳಗಾಗಿದ್ದು ಮಾತ್ರವಲ್ಲ ಪ್ರಮುಖವಾಗಿ ಮಹಿಳೆಯರು ಮೈತುಂಬ ಬಟ್ಟೆ ಹಾಕಿಕೊಳ್ಳಲು ಅವಕಾಶವಿರಲಿಲ್ಲ. ಇಂತಹ ನೊಂದ ಕುಟುಂಬಗಳಿಗೆ ಹೋರಾಟ ರಹಿತವಾಗಿ ಶಾಂತಿಯ ಮೂಲಕ ನ್ಯಾಯ ಒದಗಿಸಿಕೊಟ್ಟ ಬ್ರಹ್ಮಶ್ರೀಗಳು ಜನಾಂಗದ ಪ್ರಾತಃಸ್ಮರಣೀಯ ರಾಗಿದ್ದಾರೆ ಎಂದರು.

ಸಮಿತಿಯ ಉಪಾಧ್ಯಕ್ಷ ಬಿ.ಎ. ಭಾಸ್ಕರ್ ಬಂಗೇರ ಮಾತನಾಡಿ, ತುಳಿತಕ್ಕೆ ಒಳಗಾಗಿದ್ದ ಜನಾಂಗಕ್ಕೆ ಅಹಿಂಸಾ ಮಾರ್ಗದಲ್ಲಿ ನ್ಯಾಯ ಒದಗಿಸಿಕೊಟ್ಟ ಬ್ರಹ್ಮಶ್ರೀ ನಾರಾಯಣ ಗುರುಗಳ ಜನ್ಮದಿನಾಚರಣೆ ಯನ್ನು, ಇತ್ತೀಚಿನ ವರ್ಷಗಳಲ್ಲಿ ಹಿಂದುಳಿದ ವರ್ಗಕ್ಕೆ ಮೀಸಲಾತಿ ಜಾರಿಗೊಳಿಸಿ ಸ್ಥಾನ-ಮಾನ ಕಲ್ಪಿಸಿಕೊಟ್ಟ ಮಾಜಿ ಮುಖ್ಯಮಂತ್ರಿ ಡಿ. ದೇವರಾಜ ಅರಸ್‍ರವರ ಜನ್ಮದಿನಾಚರಣೆ ಯೊಂದಿಗೆ ಸರಕಾರ ಆಚರಿಸುವ ಮೂಲಕ ಸಮಾನತೆಗಾಗಿ ಹೋರಾಟ ನಡೆಸಿದವರನ್ನು ಸ್ಮರಿಸುವಂತಾಗಬೇಕು ಎಂದರು.

ಹತ್ಯೆಗೆ ಖಂಡನೆ: ಇತ್ತೀಚೆಗೆ ಕುಶಾಲನಗರ ಸಮೀಪದ ಗುಡ್ಡೆಹೊಸೂರಿನಲ್ಲಿ ನಡೆದ ಆಟೋಚಾಲಕ ಪ್ರವೀಣ್ ಪೂಜಾರಿ ಯನ್ನು ಹತ್ಯೆ ಮಾಡಿರುವ ಘಟನೆಯನ್ನು ತೀವ್ರವಾಗಿ ಖಂಡಿಸಿದ ಸಮಿತಿ, ಕೂಡಲೇ ಕೊಲೆ ಆರೋಪಿ ಗಳನ್ನು ಪತ್ತೆಹಚ್ಚಿ ಶಿಕ್ಷೆಗೊಳಪಡಿಸಬೇಕು. ತಕ್ಷಣ ಸರಕಾರ ನೊಂದ ಕುಟುಂಬಕ್ಕೆ ಪರಿಹಾರ ಒದಗಿಸುವ ಕಾರ್ಯ ಮಾಡಬೇಕೆಂದು ಆಗ್ರಹಿಸಿತು. ಪೂಜಾ ಕಾರ್ಯವನ್ನು ವಾಸು ಪೂಜಾರಿ ನಡೆಸಿಕೊಟ್ಟರು. ಕಾರ್ಯಕ್ರಮದಲ್ಲಿ ಸಮಿತಿ ಹಾಗೂ ಮಹಿಳಾ ಘಟಕದ ಪದಾಧಿಕಾರಿಗಳು, ಸದಸ್ಯರುಗಳು ಪಾಲ್ಗೊಂಡಿದ್ದರು.