ಕುಶಾಲನಗರ, ಆ. 21: ಕುಶಲ ಅರ್ಚಕರ ಸಂಘದ ಆಶ್ರಯದಲ್ಲಿ ಶ್ರೀ ಗುರು ರಾಘವೇಂದ್ರ ಸ್ವಾಮಿಗಳ 345ನೇ ಆರಾಧನಾ ಮಹೋತ್ಸವ ಅದ್ದೂರಿಯಾಗಿ ನಡೆಯಿತು. ಕುಶಾಲನಗರ ಗಾಯತ್ರಿ ಕಲ್ಯಾಣ ಮಂಟಪ ಸಭಾಂಗಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಬೆಳಗ್ಗೆ 10ಗಂಟೆಯಿಂದ ಪಟ್ಟಣದ ಸಮಸ್ತ ಭಜನಾ ಮಂಡಳಿಗಳಿಂದ ಭಜನಾ ಕಾರ್ಯಕ್ರಮ ನಂತರ ವಿಶೇಷ ಪೂಜಾ ವಿಧಿವಿಧಾನಗಳು ಜರುಗಿದವು. ಈ ಸಂದರ್ಭ ಪಾಲ್ಗೊಂಡಿದ್ದ ಭಕ್ತಾದಿಗಳಿಗೆ ಪ್ರತ್ಯೇಕವಾಗಿ ಪೂಜಾ ಸಂಕಲ್ಪ ಮಾಡಿಸುವ ಅವಕಾಶ ಕಲ್ಪಿಸಲಾಗಿತ್ತು. ಕುಶಲ ಅರ್ಚಕರ ಸಂಘದ ಅಧ್ಯಕ್ಷರಾದ ಪರಮೇಶ್ವರ ಭಟ್ ಅವರ ನೇತೃತ್ವದಲ್ಲಿ ಹಲವು ಅರ್ಚಕರುಗಳಿಂದ ಪೂಜಾ ವಿಧಿವಿಧಾನಗಳು ಜರುಗಿದವು. ನಂತರ ಮಹಾ ಮಂಗಳಾರತಿ ತೀರ್ಥ ಪ್ರಸಾದ ವಿನಿಯೋಗ ನಡೆಯಿತು. ಹೆಚ್ಚಿನ ಸಂಖ್ಯೆಯಲ್ಲಿ ಭಕ್ತಾಧಿಗಳು ಪಾಲ್ಗೊಂಡಿದ್ದರು. ಈ ಸಂದರ್ಭ ಸಂಘದ ವತಿಯಿಂದ ಸ್ಥಳೀಯ ಸಾಧಕರಿಗೆ ಸನ್ಮಾನ ಕಾರ್ಯಕ್ರಮ ಹಮ್ಮಿಕೊಳ್ಳಲಾಯಿತು. ಕಾವೇರಿ ನದಿ ಸ್ವಚ್ಛತಾ ಆಂದೋಲನದ ರಾಜ್ಯ ಸಂಚಾಲಕರಾದ ಎಂ.ಎನ್ ಚಂದ್ರಮೋಹನ್ ಅವರಿಗೆ ಸಮಾಜ ಸೇವಾ ರತ್ನ, ನಿವೃತ್ತ ಪ್ರಾಂಶುಪಾಲರಾದ ಡಾ. ಬಿ.ಆರ್ ಶಾಂತಲಕ್ಷ್ಮಿ ಅವರಿಗೆ ಶಿಕ್ಷಕ ರತ್ನ ಬಿರುದು ನೀಡುವ ಮೂಲಕ ಸನ್ಮಾನಿಸಿ ಗೌರವಿಸಲಾಯಿತು.