ಸಿದ್ದಾಪುರ, ಜು. 12: ಜಿಲ್ಲಾ ಪಂಚಾಯಿತಿ ಚುನಾವಣೆಯ ಸೋಲಿನಿಂದ ಹತಾಶೆಗೊಂಡು ಕಾಂತಿ ಸತೀಶ್ ಅವರು ಜಿ.ಪಂ. ಸದಸ್ಯೆ ಸರಿತಾಪೂಣಚ್ಚ ವಿರುದ್ದ ಸುಳ್ಳು ಆರೋಪ ಹೊರಿಸಲಾಗಿದೆ ಎಂದು ಸಿದ್ದಾಪುರ ಕಾಂಗ್ರೆಸ್ ಆರೋಪಿಸಿದೆ.

ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಗ್ರಾಂ.ಪಂ ಸದಸ್ಯ ಮಂಜುನಾಥ, ಇತ್ತೀಚೆಗೆ ನಡೆದ ಜಿ.ಪಂ ಚುನಾವಣೆ ಸಂದರ್ಭ ಕಾಂತಿ ಸತೀಶ್ ಅವರು ಸರಿತಾ ಪೂಣಚ್ಚ ಅವರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡಿದ್ದಲ್ಲದೇ, ಕೋಮು ಸೌಹಾರ್ದತೆಗೆ ಒಡಕು ತರುವ ಪ್ರಯತ್ನ ಮಾಡಿದ್ದರೂ ಜನತೆ ಸರಿತಾ ಪೂಣಚ್ಚ ಅವರನ್ನು ಆಯ್ಕೆ ಮಾಡಿದ್ದರು. ಜಿ.ಪಂ. ಚುನಾವಣೆಯ ಸೋಲಿನ ಹತಾಶೆಯಿಂದ ಕಾಂತಿ ಸತೀಶ್ ಅವರು ಸರಿತಾ ಪೂಣಚ್ಚರ ವಿರುದ್ಧ ಇಲ್ಲಸಲ್ಲದ ಆರೋಪ ಮಾಡುತ್ತಿದ್ದು, ಮೊದಲು ತಮ್ಮ ಸ್ವ ಕ್ಷೇತ್ರದ ಸಮಸ್ಯೆಯನ್ನು ನಿವಾರಿಸಲು ಪ್ರಯತ್ನಿಸಲಿ ಎಂದು ವ್ಯಂಗ್ಯವಾಡಿ ದರು. ಸರಿತಾ ಪೂಣಚ್ಚ ಮಾಡುತ್ತಿರುವ ಅಭಿವೃದ್ಧಿಯನ್ನು ಸಹಿಸಲಾರದ ಬಿ.ಜೆ.ಪಿ ಪಕ್ಷವು ಸರಿತಾರವರನ್ನು ತೇಜೋವಧೆ ಮಾಡುತ್ತಿರುವದು ಖಂಡನೀಯ. ಕರಡಿಗೋಡು ಕ್ಷೇತ್ರದ ತಾ.ಪಂ ಸದಸ್ಯರನ್ನು ಸಭೆಗಳಿಗೆ ಕಡೆಗಣಿಸಲಾಗುತ್ತಿದೆಯೇ ಎಂಬ ಪ್ರಶ್ನಗೆ ಉತ್ತರಿಸಿದ ಅವರು, ಎಲ್ಲಾ ಸಭೆ ಹಾಗೂ ಭೂಮಿ ಪೂಜೆಗೆ ತಾ.ಪಂ ಸದಸ್ಯರನ್ನು ಆಹ್ವಾನಿಸಿದ್ದು, ಅವರ ವೈಯಕ್ತಿಕ ಕಾರಣಗಳಿಂದಾಗಿ ಸಭೆ ಹಾಗೂ ಸಮಾರಂಭಗಳಿಗೆ ಬಂದಿರುವದಿಲ್ಲ ಎಂದರು.

ಗ್ರಾ.ಪಂ. ಸದಸ್ಯ ಶೂಕೂರ್ ಮಾತನಾಡಿ, ಬಿ.ಜೆ.ಪಿಯವರು ಸರಿತಾ ಪೂಣಚ್ಚ ವಿರುದ್ಧ ನೀಡಿರುವ ಹೇಳಿಕೆ ಸತ್ಯಕ್ಕೆ ದೂರವಾಗಿದ್ದು, ಬರ ಪರಿಹಾರ ಅಧ್ಯಯನ ತಂಡ ಸಿದ್ದಾಪುರಕ್ಕೆ ಭೇಟಿ ನೀಡಿದ ಸಂದರ್ಭ ಸಚಿವರುಗಳ ಬಳಿ ಸಿದ್ದಾಪುರ ಭಾಗದ ನೀರಿನ ಸಮಸ್ಯೆಯ ಬಗ್ಗೆ ಸರಿತಾ ಪೂಣಚ್ಚ ಗಮನ ಸೆಳೆದಿದ್ದು, ಅವರ ಪ್ರಯತ್ನದಿಂದ ಸಿದ್ದಾಪುರದಲ್ಲಿ ಕೊಳವೆ ಬಾವಿ ಕೊರೆಯಲಾಗಿದ್ದು, ಕೊಳವೆಬಾವಿ ಕೊರೆಸುವಲ್ಲಿ ಶಾಸಕರ ಯಾವದೇ ಪ್ರಯತ್ನವಿರುವದಿಲ್ಲ. ಶಾಸಕರ ಅನುದಾನದಲ್ಲಿ ಯಾವದೇ ಬಿಟ್ಟಿ ಪ್ರಚಾರ ಗಿಟ್ಟಿಸಿರುವದಿಲ್ಲ ಎಂದರು. ಶಾಸಕರು ಸಿದ್ದಾಪುರ ಭಾಗದಲ್ಲಿ ಹಲವಾರು ಭಾರಿ ಭೂಮಿಪೂಜೆ ಕೈಗೊಂಡರೂ ಯಾವದೇ ಕಾಮಗಾರಿ ಈವರೆಗೂ ಆರಂಭವಾಗಿಲ್ಲ ಎಂದು ಆರೋಪಿಸಿದರು.

ಸಿದ್ದಾಪುರ ಗ್ರಾಮ ಪಂಚಾಯ್ತಿ ಮಾಜಿ ಉಪಾಧ್ಯಕ್ಷ ಮೂಸ ಮಾತನಾಡಿ, ಈ ಹಿಂದೆ ತಾ.ಪಂ ಸದಸ್ಯ ಹಾಗೂ ಅಧ್ಯಕ್ಷರಾಗಿದ್ದ ವಿ.ಕೆ.ಲೊಕೇಶ್ ಅವರು ಸಿದ್ದಾಪುರ ಗ್ರಾ.ಪಂ ಆಡಳಿತದ ಬಗ್ಗೆ ಟೀಕಿಸಿದ್ದಾರೆ. ಆದರೇ ತಮ್ಮ ಸ್ವಂತ ಊರಾದ ನೆಲ್ಯಹುದಿಕೇರಿಯಲ್ಲಿ ಕಸದ ವಿಲೇವಾರಿ, ಸಾರ್ವಜನಿಕ ಶೌಚಾಲಯ ಸೇರಿದಂತೆ ಹಲವಾರು ಸಮಸ್ಯೆಗಳ ಬಗ್ಗೆ ಎಷ್ಟು ಮುತುವರ್ಜಿ ವಹಿಸಿದ್ದಾರೆ ಎಂಬದನ್ನು ಸ್ಪಷ್ಟ ಪಡಿಸಲಿ ಎಂದು ಸವಾಲೊಡ್ಡಿದರು. ಸಿದ್ದಾಪುರದ ಕಸ ವಿಲೇವಾರಿ ಮಾಡಲು ಶಾಶ್ವತ ಜಾಗ ಕೋರಿ ಈಗಾಗಲೇ ಶಾಸಕರು, ಸಂಸದರು ಹಾಗೂ ವಿಧಾನ ಪರಿಷತ್ ಸದಸ್ಯರಿಗೆ ಮನವಿ ನೀಡಲಾಗಿದೆ ಎಂದರು.

ಗ್ರಾಮ ಪಂಚಾಯಿ ಮಾಜಿ ಸದಸ್ಯ ಪ್ರತೀಶ್ ಮಾತನಾಡಿ, ಬಿ.ಜೆ.ಪಿ ಅಭಿವೃದ್ಧಿಗೆ ಸಹಕಾರ ನೀಡದೇ, ಅಪಪ್ರಚಾರದಲ್ಲಿ ತೊಡಗಿಕೊಂಡಿದ್ದು, ಸರಿತಾ ಪೂಣಚ್ಚರಿಗೆ ಕಾಂತಿ ಸತೀಶ್ ಅವರ ಪ್ರಮಾಣ ಪತ್ರದ ಅವಶ್ಯಕತೆ ಇಲ್ಲ ಎಂದರು. ಈ ಸಂದರ್ಭ ಗ್ರಾ.ಪಂ ಸದಸ್ಯರಾದ ಜಾಫರ್ ಆಲಿ, ಮಿಲನ್ ಇದ್ದರು.