ಕುಶಾಲನಗರ, ಜು 12: ಆತ್ಮಹತ್ಯೆಗೆ ಶರಣಾದ ಡಿವೈಎಸ್ಪಿ ಗಣಪತಿ ಅವರ ನಿವಾಸಕ್ಕೆ ಭೇಟಿ ನೀಡಲು ಮಂಗಳವಾರ ಆಗಮಿಸಿದ ಜಿಲ್ಲಾ ಉಸ್ತುವಾರಿ ಸಚಿವ ಎಂ.ಆರ್.ಸೀತಾರಾಂ ಅವರು ಕುಶಾಲನಗರ ಸೇರಿದಂತೆ ಹಲವೆಡೆ ಪ್ರತಿಭಟನೆಗ¼ನ್ನು ಎದುರಿಸ ಬೇಕಾಯಿತು. ಮಧ್ಯಾಹ್ನ 12.30ಕ್ಕೆ ಕುಶಾಲನಗರದ ಮೂಲಕ ಭದ್ರತೆಯೊಂದಿಗೆ ತೆರಳಿದ ಉಸ್ತುವಾರಿ ಸಚಿವರನ್ನು ಮಾದಾಪಟ್ಟಣ ಬಳಿ ಸರಕಾರಿ ಪಾಲಿಟೆಕ್ನಿಕ್ ಹಾಗೂ ಇಂಜಿನಿಯರಿಂಗ್ ಕಾಲೇಜು ವಿದ್ಯಾರ್ಥಿಗಳು ತಡೆದು ಮುತ್ತಿಗೆ ಹಾಕಿ ಘೋಷಣೆ ಕೂಗಿದರು.

ಈ ಸಂದರ್ಭ ಪೊಲೀಸರು ವಿದ್ಯಾರ್ಥಿಗಳನ್ನು ಚದುರಿಸಿ ಸಚಿವರನ್ನು ಮುಂದಕ್ಕೆ ಕರೆದುಕೊಂಡು ಹೋಗುತ್ತಿದ್ದ ವೇಳೆ ಗುಡ್ಡೆಹೊಸೂರು ಬಳಿ ಬಿಜೆಪಿ ಮತ್ತು ಹಿಂದೂಪರ ಸಂಘಟನೆಗಳ ಕಾರ್ಯಕರ್ತರು ಕಪ್ಪುಪಟ್ಟಿ ಧರಿಸಿ ಸಚಿವರ ಕಾರಿಗೆ ಅಡ್ಡಲಾಗಿ ಮಲಗಿ ಪ್ರತಿಭಟಿಸಿದ ಘಟನೆಯೂ ನಡೆಯಿತು. ಸ್ವಲ್ಪ ಕಾಲ ಸಚಿವರು ಸೇರಿದಂತೆ ಭದ್ರತಾ ಪಡೆಗಳ ಕಾರಿಗೆ ಸಂಚರಿಸಲು ಅಡ್ಡಿಯುಂಟಾಗಿ ಸ್ಥಳದಲ್ಲಿದ್ದ ಪೊಲೀಸರು ಪ್ರತಿಭಟನಾಕಾರರನ್ನು ತೆರವು ಗೊಳಿಸಲು ಪರದಾಡುವಂತಹ ಸ್ಥಿತಿ ಉಂಟಾಯಿತು.

ಕುಶಾಲನಗರ ಬಿಜೆಪಿ ನಗರ ಘಟಕ, ಎಬಿವಿಪಿ, ಹಿಂದೂಪರ ಸಂಘಟನೆಗಳ ನೇತೃತ್ವದಲ್ಲಿ ಗುಡ್ಡೆಹೊಸೂರಿನಲ್ಲಿ ಸಚಿವರ ವಿರುದ್ಧ ಪ್ರತಿಭಟಿಸಿದ ಸಂದರ್ಭ 5 ಕ್ಕೂ ಹೆಚ್ಚು ಪ್ರತಿಭಟನಾಕಾರರಿಗೆ

ಗಾಯಗಳು ಉಂಟಾದವು. ಬಿಜೆಪಿ ನಗರಾಧ್ಯಕ್ಷ ಕೆ.ಜಿ.ಮನು, ಯುವಮೋರ್ಚಾ ಅಧ್ಯಕ್ಷ ಎಂ.ಡಿ.ಕೃಷ್ಣಪ್ಪ, ಎಬಿವಿಪಿ ಜಿಲ್ಲಾ ಸಂಚಾಲಕ ನವನೀತ್ ಅವರುಗಳಿಗೆ ಅಲ್ಪಸ್ವಲ್ಪ ಗಾಯ ಉಂಟಾಯಿತು.

ಹೇಗೋ ಪ್ರತಿಭಟನಾಕಾರರಿಂದ ಪಾರಾಗಿ ಮುಂದೆ ತೆರಳಿದ ಸಚಿವರಿಗೆ ದಾರಿ ಮಧ್ಯೆ ರಂಗಸಮುದ್ರದಲ್ಲಿಯೂ ಭಾರೀ ಪ್ರತಿಭಟನೆ ಕಂಡುಬಂತು. ಮಡಿಕೇರಿ ಜಿಲ್ಲಾ ಕೇಂದ್ರದಿಂದ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ಮಹಿಳಾ ಘಟಕದ ಅಧ್ಯಕ್ಷೆ ಯಾಮಿನಿ ಚಂಗಪ್ಪ, ಮಾಜಿ ಅಧ್ಯಕ್ಷೆ ಕಾಂತಿ ಸತೀಶ್ ಅವರ ನೇತೃತ್ವದಲ್ಲಿ ಸಚಿವರಿಗೆ ಮುತ್ತಿಗೆ ಹಾಕಿದ ಘಟನೆಯೂ ನಡೆಯಿತು. ರಂಗಸಮುದ್ರದ ಗಣಪತಿ ಅವರ ನಿವಾಸದ ಮುಂದೆ ಬಿಜೆಪಿ ಮಹಿಳಾ ಕಾರ್ಯಕರ್ತರು ಸಚಿವರನ್ನು ತರಾಟೆಗೆ ತೆಗೆದುಕೊಂಡು ಸಾವಿನ ಮನೆಯಲ್ಲಿ ರಾಜಕೀಯ ಮಾಡಬೇಡಿ ಎಂದು ಬೇಡಿಕೊಂಡರು. ಸಚಿವರು ಹಾಗೂ ಸರಕಾರದ ವಿರುದ್ಧ ಘೋಷಣೆಗಳು ಕೇಳಿಬಂದವು. ಗಣಪತಿ ಅವರ ಕುಟುಂಬಕ್ಕೆ ನ್ಯಾಯ ಒದಗಿಸಲು ಸರಕಾರ ಮುಂದಾಗುವದರೊಂದಿಗೆ ಸಾವಿಗೆ ಕಾರಣಕರ್ತರೆನ್ನಲಾದ ಇಬ್ಬರು ಪೊಲೀಸ್ ಅಧಿಕಾರಿಗಳು ಮತ್ತು ಸಚಿವ ಜಾರ್ಜ್ ಅವರ ಮೇಲೆ ಕಾನೂನು ಕ್ರಮಕ್ಕೆ ಮುಂದಾಗಬೇಕೆಂದು ಆಗ್ರಹಿಸಿದರು. ಈ ಸಂದರ್ಭ ಸಚಿವರು ಪ್ರತಿಭಟನಾಕಾರರನ್ನು ಸಮಾಧಾನಿಸಲು ಪ್ರಯತ್ನಿಸಿದರು. ನಂತರ ಪೊಲೀಸರ ಮಧ್ಯ ಪ್ರವೇಶದಿಂದ ಸಚಿವರನ್ನು ಭದ್ರತೆಯೊಂದಿಗೆ ತೆರಳಿದರು.

ಇತ್ತ ಗುಡ್ಡೆಹೊಸೂರು ದುಬಾರೆ ರಸ್ತೆಯಲ್ಲಿ ಜಿಲ್ಲಾ ಬಿಜೆಪಿ ಅಧ್ಯಕ್ಷ ಮನುಮುತ್ತಪ್ಪ, ನೂರಾರು ಬಿಜೆಪಿ ಮುಖಂಡರು ಅಡ್ಡಗಟ್ಟಿದ ಸಂದರ್ಭ ಪೊಲೀಸರು ಸಚಿವರನ್ನು ಸಿದ್ದಾಪುರ ಮಾರ್ಗವಾಗಿ ತೆರಳಲು ಅನುವು ಮಾಡಿಕೊಟ್ಟು ಯಾವದೇ ಅಹಿತಕರ ಘಟನೆ ನಡೆಯದಂತೆ ಎಚ್ಚರವಹಿಸಿದರು.

ಸಚಿವರು ಗುಡ್ಡೆಹೊಸೂರು ಮೂಲಕ ರಂಗಸಮುದ್ರಕ್ಕೆ ತೆರಳಿದ ಬೆನ್ನಲ್ಲೇ ಗುಡ್ಡೆಹೊಸೂರು ಮುಖ್ಯರಸ್ತೆಯಲ್ಲಿ ನೂರಾರು ಜನರು ರಾಜ್ಯ ಸರಕಾರದ ವಿರುದ್ಧ ಘೋಷಣೆ ಕೂಗುತ್ತಾ ಒಂದು ಗಂಟೆಗಳ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿದರು. ಆತ್ಮಹತ್ಯೆಗೆ ಶರಣಾದ ಗಣಪತಿ ಅವರು ಸಾವಿಗೆ ಮುನ್ನ ನೀಡಿರುವ ಹೇಳಿಕೆಯಂತೆ ಆರೋಪಿಗಳನ್ನು ತಕ್ಷಣ ಬಂಧಿಸಿ ಕಾನೂನು ಕ್ರಮಕೈಗೊಳ್ಳುವಂತೆ ಒತ್ತಾಯಿಸಿದರು. ನಂತರ ಪೊಲೀಸ್ ಅಧಿಕಾರಿಗಳ ಮನವಿಗೆ ಸ್ಪಂದಿಸಿದ ಪ್ರತಿಭಟನಾಕಾರರು ಪ್ರತಿಭಟನೆಯನ್ನು ಹಿಂತೆಗೆದುಕೊಂಡರು.

ಕಾಲೇಜು ವಿದ್ಯಾರ್ಥಿಗಳ ಮೇಲೆ ಲಾಠಿ ಬೀಸಿದ ಪ್ರಕರಣವನ್ನು ಖಂಡಿಸಿ ಎಬಿವಿಪಿ ಗುಡ್ಡೆಹೊಸೂರು ವೃತ್ತದಲ್ಲಿ ಸುಮಾರು ಅರ್ಧ ಗಂಟೆಗಳಿಗೂ ಕಾಲ ರಸ್ತೆ ತಡೆ ನಡೆಸಿ ಪ್ರತಿಭಟಿಸಿತು. ಇದರಿಂದ 1 ಕಿಮೀ ದೂರದವರೆಗೆ ವಾಹನಗಳ ಸಂಚಾರಕ್ಕೆ ಅಡ್ಡಿಯುಂಟಾಗಿ ಸಾಲುಗಟ್ಟಿ ನಿಂತ ದೃಶ್ಯ ಕಂಡುಬಂತು.