ಮಡಿಕೇರಿ, ಡಿ. 11: ಸೋಮವಾರಪೇಟೆ ತಾಲೂಕಿನ ಕಿರಗಂದೂರು ಸರಕಾರಿ ಪ್ರೌಢ ಶಾಲೆ 2015-2016 ನೇ ಸಾಲಿನ ಹತ್ತನೇ ತರಗತಿ ಪರೀಕ್ಷೆಯಲ್ಲಿ ಶೇ. 100 ರಷ್ಟು ಫಲಿತಾಂಶ ಗಳಿಸುವ ಮೂಲಕ ಉತ್ತಮ ಸಾಧನೆ ಮಾಡಿದ್ದು, ಇದಕ್ಕೆ ಕಾರಣಕರ್ತರಾದ ಶಾಲೆಯ ಶಿಕ್ಷಕರುಗಳನ್ನು ಕರ್ನಾಟಕ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಘಟಕದ ವತಿಯಿಂದ ಗೌರವಿಸಲಾಯಿತು.

ಕಿರಗಂದೂರು ಸರಕಾರಿ ಪ್ರೌಢ ಶಾಲಾ ಆವರಣದಲ್ಲಿ ನಡೆದ ಸನ್ಮಾನ ಸಮಾರಂಭವನ್ನು ಉದ್ಯಮಿ ಎಂ.ಸಿ. ಕಾರ್ಯಪ್ಪ ಉದ್ಘಾಟಿಸಿ, ಮಾತನಾಡಿ, ಸಮಯ ಪಾಲನೆ ಮತ್ತು ಶಿಸ್ತು ಬದ್ಧ ಜೀವನದ ಮೂಲಕ ವಿದ್ಯಾರ್ಥಿಗಳು ಶೈಕ್ಷಣಿಕ ಜೀವನವನ್ನು ಸಾರ್ಥಕ ಪಡಿಸಿಕೊಳ್ಳಬೇಕೆಂದು ಕರೆ ನೀಡಿದರು.

ಸ್ತ್ರೀರೋಗ ತಜ್ಞೆ ಡಾ. ಸೌಮ್ಯ ಮಾತನಾಡಿ, ಸರಕಾರಿ ಶಾಲೆಗಳನ್ನು ಕಡೆಗಣಿಸಬಾರದೆಂದು ಕಿವಿ ಮಾತು ಹೇಳಿ ಸರಕಾರಿ ಶಾಲೆಗಳಲ್ಲಿ ಓದಿದ ವಿದ್ಯಾರ್ಥಿಗಳಲ್ಲೂ ಉನ್ನತ ಹುದ್ದೆಯನ್ನು ಅಲಂಕರಿಸುವ ಛಲವಿರಬೇಕು. ಪ್ರತಿಯೊಬ್ಬ ವಿದ್ಯಾರ್ಥಿ ಶ್ರದ್ಧೆಯಿಂದ ಮುನ್ನಡೆದಾಗ ಮಾತ್ರ ಜೀವನದಲ್ಲಿ ಯಶಸ್ಸನ್ನು ಸಾಧಿಸಲು ಸಾಧ್ಯವೆಂದು ಅಭಿಪ್ರಾಯಪಟ್ಟರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ದಲಿತ ಸಂಘರ್ಷ ಸಮಿತಿಯ ಜಿಲ್ಲಾ ಸಂಚಾಲಕ ಹೆಚ್.ಎಲ್. ದಿವಾಕರ್ ಗ್ರಾಮೀಣ ವಿದ್ಯಾರ್ಥಿಗಳು ಕೂಡ ಉನ್ನತ ಹುದ್ದೆಗೇರಲು ಶ್ರಮಿಸಬೇಕೆಂದರು. ಕಿರಗಂದೂರು ಶಾಲೆ ಕಳೆದ ಎರಡು ವರ್ಷಗಳಿಂದ ಶೇ. 100 ರಷ್ಟು ಸಾಧನೆ ಮಾಡಿದ್ದು, ಇದಕ್ಕೆ ಶಿಕ್ಷಕರುಗಳ ಪರಿಶ್ರಮವೇ ಕಾರಣವೆಂದು ಶ್ಲಾಘಿಸಿದರು.

ಶಾಲಾ ಮುಖ್ಯ ಶಿಕ್ಷಕ ಡಿ.ಪಿ. ಧರ್ಮಪ್ಪ ಹಾಗೂ ಶಿಕ್ಷಕ ಸುಲೇಮಾನ್ ಮಾತನಾಡಿ ದಲಿತ ಸಂಘರ್ಷ ಸಮಿತಿ ಗ್ರಾಮೀಣ ಶಾಲಾ ಶಿಕ್ಷಕರುಗಳನ್ನು ಸನ್ಮಾನಿಸಿ ಗೌರವಿಸುತ್ತಿರುವ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು.

ಜಿಲ್ಲಾ ಸಂಘಟನಾ ಸಂಚಾಲಕ ಹೆಚ್.ಎಸ್. ರವಿ, ಪ್ರಮುಖರಾದ ಎಸ್.ಕೆ. ಸತೀಶ್ ಹಾಗೂ ಮೇಕೇರಿ ಸುಭಾಷ್ ನಗರ ಸಂಚಾಲಕ ದೀಪಕ್ ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

ಹೆಚ್ಚು ಅಂಕ ಗಳಿಸಿದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹಕರ ನಗದು ಬಹುಮಾನ ನೀಡಿದರು. ಗಣ್ಯರು ಶಾಲಾ ಶಿಕ್ಷಕರುಗಳಾದ ಡಿ.ಪಿ. ಧರ್ಮಪ್ಪ, ಎ. ವಿಜು, ಕೆ.ಜಿ. ರೇಷ್ಮ, ಹೆಚ್.ಎಂ. ರಮೇಶ್, ಇ. ಸುಲೇಮಾನ್, ಹೆಚ್.ಎನ್. ಮಂಜುನಾಥ್, ಮನು ಹಾಗೂ ಕೆ. ಸುರೇಶ್ ಅವನ್ನು ಸನ್ಮಾನಿಸಿ ಗೌರವಿಸಲಾಯಿತು.