ವೀರಾಜಪೇಟೆ, ಸೆ. 12: ವೀರಾಜಪೇಟೆ ತಾಲೂಕು ಸರಕಾರಿ ನೌಕರರ ಸಂಘದ ಅಧ್ಯಕ್ಷರಾಗಿರುವ ಸಿ.ಎಂ ವಿಶ್ವನಾಥ್ ಅವರು ಸಂಘದ ಮೂಲಕ ಸಂಘದ ಉಪಾಧ್ಯಕ್ಷರನ್ನು ರಕ್ಷಿಸುವ ಪ್ರಯತ್ನ ನೋಡಿದರೆ ಎಲ್ಲ ಪ್ರಕರಣಗಳಲ್ಲಿ ಅಧ್ಯಕ್ಷರು ಭಾಗಿ ಯಾಗಿರುವ ಶಂಕೆ ವ್ಯಕ್ತವಾಗುತ್ತದೆ ಎಂದು ಜಯ ಕರ್ನಾಟಕ ಸಂಘಟನೆಯ ತಾಲೂಕು ಅಧ್ಯಕ್ಷ ಅನಿಲ್ ಅಯ್ಯಪ್ಪ ಆರೋಪಿಸಿದ್ದಾರೆ.

ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು ಸಾಮಾಜಿಕ ಕಳಕಳಿ ಹಾಗೂ ಗಾಂಧಿನಗರದ ಆಜು ಬಾಜಿನ ನಿವಾಸಿಗಳ ದೂರಿನ ಮೇರೆ ಸರ್ಕಾರಿ ನೌಕರರ ಸಂಘದ ಕಟ್ಟಡದ ಅಶುಚಿತ್ವದ ಬಗ್ಗೆ ಸಂಘಟನೆಯ ನಗರ ಸಮಿತಿಯ ಉಪಾಧ್ಯಕ್ಷ ಪಿ.ಎ. ಮಂಜುನಾಥ್ ಜಿಲ್ಲಾಧಿಕಾರಿಗಳಿಗೆ ದೂರು ನೀಡಿ ಪತ್ರಿಕೆಯಲ್ಲಿ ಹೇಳಿಕೆ ನೀಡಿದ್ದರು. ಅವರ ಹೇಳಿಕೆಗೆ ಪ್ರತಿಯಾಗಿ ಗ್ರಂಥಾಲಯದ ಡಿ ದರ್ಜೆ ನೌಕರ ಎಚ್.ಕೆ. ಮೊಗಪ್ಪ ಎಂಬವರು ವ್ಯಕ್ತಿಯೊಬ್ಬರು ಗ್ರಂಥಾಲಯದ ಜಾಗ ವನ್ನು ಒತ್ತುವರಿ ಮಾಡಿಕೊಂಡಿದ್ದಾರೆ ಎಂಬ ಅಸಂಬದ್ಧ ಹೇಳಿಕೆಗಳನ್ನು ನೀಡಿದ್ದಾರೆ. ನೌಕರರ ಸಂಘಟನೆಯ ಅಧ್ಯಕ್ಷರು ಉಪನ್ಯಾಸಕರಾಗಿದ್ದರೂ ಕೂಡ ನೌಕರರ ಭವನದಲ್ಲಿ ಈವರೆಗೂ ಶುಚಿತ್ವಕ್ಕೆ ಒತ್ತು ನೀಡಲಿಲ್ಲ. ಶುಚಿತ್ವಕ್ಕೆ ಸಹಕರಿಸದಿರುವದು ಖಂಡನೀಯ. ಇದರಿಂದ ನೌಕರರ ಭವನದ ಹೆಸರಿಗೆ ಮಸಿ ಬಳಿದಂತಾಗಿದೆ ಎಂದರು.

ಸಂಘಟನೆಯ ನಗರ ಸಮಿತಿ ಅಧ್ಯಕ್ಷ ಎಸ್.ಎಚ್. ಮಂಜುನಾಥ್ ಮಾತನಾಡಿ, ಎರಡು ವರ್ಷಗಳ ಹಿಂದೆ ಇದೇ ಭವನಕ್ಕೆ ಅಡುಗೆ ಕೋಣೆ ನಿರ್ಮಿಸಲು ಶಾಸಕರ ನಿಧಿಯಿಂದ 2 ಲಕ್ಷ ರೂಪಾಯಿ ಅನುದಾನ ನೀಡಲಾಗಿದೆ. ಆದರೆ ಅಡುಗೆ ಕೋಣೆ ಅನುದಾನದ ನಿಧಿಗೆ ತಕ್ಕಂತೆ ನಿರ್ಮಾಣವಾಗಿಲ್ಲ, ಅಡುಗೆ ಮನೆಗೆ ಮೂಲ ಸೌಲಭ್ಯಗಳನ್ನು ಒದಗಿಸಿಲ್ಲ, ಅಡುಗೆ ಕೋಣೆ ಅಪೂರ್ಣ ಗೊಂಡಿದೆ. ಹಣ ಬಳಕೆಯ ಕಾಟಾ ಚಾರಕ್ಕಾಗಿ ಅಡುಗೆ ಕೋಣೆಯನ್ನು ನಿರ್ಮಿಸಲಾಗಿದೆ. ಸಾರ್ವಜನಿಕರು ಇದನ್ನು ಪರಿಶೀಲಿಸಿದಾಗ ಹಣ ದುರುಪಯೋಗ ನಡೆದಿರುವ ಶಂಕೆ ವ್ಯಕ್ತವಾಗುತ್ತಿದೆ. ಅಧ್ಯಕ್ಷರು, ಉಪಾಧ್ಯಕ್ಷರ ಪರವಾಗಿ ಹೇಳಿಕೆ ನೀಡುತ್ತಿರುವದನ್ನು ಗಮನಿಸಿದರೆ ಭ್ರಷ್ಟಾಚಾರ ನಡೆದಿರುವ ಶಂಕೆ ಮೇಲ್ನೋಟಕ್ಕೆ ಕಂಡು ಬರುತ್ತಿದೆ. ಸಂಘಟನೆಯ ವತಿಯಿಂದ ಸಾಕ್ಷ್ಯಾಧಾರ ಸಮೇತವಾಗಿ ಸಿ.ಎಂ. ವಿಶ್ವನಾಥ್, ಎಚ್.ಕೆ.ಮೊಗಪ್ಪ ಅವರ ವಿರುದ್ಧ ಉನ್ನತ ಮಟ್ಟದ ಅಧಿಕಾರಿಗಳು, ಭೃಷ್ಟಾಚಾರ ನಿಗ್ರಹ ದಳಕ್ಕೆ ದೂರು ನೀಡಲಾಗುವದು ಎಂದರು.

ಸಂಘಟನೆಯ ತಾಲೂಕು ಸಮಿತಿ ಉಪಾಧ್ಯಕ್ಷ ಕುಂಞÂೀರ ಸುನು ಸುಬ್ಬಯ್ಯ ಮಾತನಾಡಿ, ವೀರಾಜಪೇಟೆಯಲ್ಲಿರುವ ನೌಕರರ ಭವನಕ್ಕೆ ಸರಕಾರದಿಂದ ಬಂದಿರುವ ಅನುದಾನ, ದಾನಿಗಳಿಂದ ಬಂದ ಹಣದ ಭವನಕ್ಕೆ ವೆಚ್ಚವಾದ ಲೆಕ್ಕದ ಕುರಿತು ಸಂಘಟನೆಯಿಂದ ಮಾಹಿತಿ ಹಕ್ಕಿನಲ್ಲಿ ಕೇಳಲಾಗಿದೆ. ಆದರೆ ದಾಖಲೆ ಇನ್ನೂ ದೊರೆತಿಲ್ಲ. ಸರ್ಕಾರಿ ನೌಕರರ ಭವನದ ಕಾರ್ಯ ವೈಖರಿ ಕಟ್ಟಡಕ್ಕೆ ತಗುಲಿದ ವೆಚ್ಚ, ಬರುತ್ತಿರುವ ಆದಾಯ, ಸೋರಿಕೆÉ ಹಾಗೂ ಹಣ ದುರುಪಯೋಗಕ್ಕೆ ಸಂಬಂಧಿಸಿದಂತೆ ರಾಜ್ಯದ ಎಸಿಬಿ ಹಾಗೂ ಲೋಕಾಯುಕ್ತಕ್ಕೆ ದೂರು ನೀಡಲಾಗುವದು. ಗ್ರಂಥಾಲಯದ ನೌಕರ ಆಯ್ದ ಹಲವು ಪುಸ್ತಗಳನ್ನು ಅವರ ಆಪ್ತರ ಮನೆಯಲ್ಲಿರುವದನ್ನು ಸಂಘಟನೆ ಕಂಡು ಹಿಡಿದಿದ್ದು, ಈಗ ಹಲವಾರು ಪುಸ್ತಗಳನ್ನು ಪತ್ತೆ ಹಚ್ಚಲಾಗಿದೆ. ಸರಕಾರದ ಮೇಲಧಿಕಾರಿಗಳು ಈ ಇಬ್ಬರ ವಿರುದ್ಧ ಮಾಹಿತಿ ನೀಡಲು ಹಿಂಜರಿಕೆ ಹಾಗೂ ಇಬ್ಬರನ್ನು ಪರೋಕ್ಷವಾಗಿ ಬೆಂಬಲಿಸಿ ದರೆ ರಾಜ್ಯ ಉಚ್ಛ ನ್ಯಾಯಾಲಯದಲ್ಲಿ ಕಾನೂನು ಪ್ರಕಾರ ಕ್ರಿಮಿನಲ್ ದಾವೆ ಹೂಡಲಾಗುವದು ಎಂದು ಹೇಳಿದರು.

ಗೋಷ್ಠಿಯಲ್ಲಿ ನಗರ ಸಮಿತಿ ಉಪಾಧ್ಯಕ್ಷ ಪಿ.ಎ ಮಂಜುನಾಥ್, ಕೂಪದಿರ ಹರೀಶ್, ಎಂ.ಸಿ. ವಿನೋದ್, ಟಿ.ಆರ್.ಹರ್ಷ, ಪ್ರಕಾಶ್ ರೈ ಉಪಸ್ಥಿತರಿದ್ದರು.