ಪೊನ್ನಂಪೇಟೆ, ಆ. 28: ಇದೀಗ ಮೂಡುತ್ತಿರುವ ಸ್ವಚ್ಛತಾ ಜಾಗೃತಿ ಕೇವಲ ವೈಯಕ್ತಿಕ ಸ್ವಚ್ಛತೆ, ತಮ್ಮ ಮನೆಯ ಸ್ವಚ್ಛತೆಗೆ ಮಾತ್ರ ಮೀಸಲಾಗದೇ ಇಡೀ ಪರಿಸರದ ಸ್ವಚ್ಛತೆಯ ಮೂಲಕ ಗ್ರಾಮಗಳ ಸ್ವಚ್ಛತೆಗೂ ಆದ್ಯತೆ ನೀಡುವಂತಾಗ ಬೇಕು. ಸ್ವಚ್ಛತೆ ಎಂಬದು ಪ್ರಚಾರದ ವಸ್ತುವಾಗದೆ ಅದೊಂದು ನಾಗರಿಕ ಪ್ರಜ್ಞೆಯಾಗಿ ಪ್ರತಿಯೊಬ್ಬರಲ್ಲೂ ಮೂಡುವಂತಾಗಬೇಕು ಎಂದು ಮಾಯಮುಡಿಯಲ್ಲಿ ಶನಿವಾರ ನಡೆದ ಸ್ವಚ್ಛತಾ ಅಭಿಯಾನದಲ್ಲಿ ಪಾಲ್ಗೊಂಡಿದ್ದ ಪ್ರಮುಖರು ಅಭಿಪ್ರಾಯಪಟ್ಟರು.

ಮಾಯಮುಡಿಯ ಯುವಕ ಸಂಘದ ಅಶ್ರಯದಲ್ಲಿ ಭಾರತ ಸರಕಾರದ ನೆಹರೂ ಯುವ ಕೇಂದ್ರ, ಮಾಯಮುಡಿ ಗ್ರಾ.ಪಂ. ಮತ್ತು ಮಾಯಮುಡಿಯ ಸರಕಾರಿ ಪ್ರೌಢÀಶಾಲೆಯ ಆಶ್ರಯದಲ್ಲಿ ಶಾಲಾ ಆವರಣದಲ್ಲಿ ಸದ್ಭಾವನಾ ದಿನಾಚರಣೆ ಅಂಗವಾಗಿ ಸ್ವಚ್ಛಭಾರತ ಅಭಿಯಾನ ದಡಿ ನಡೆದ ಸ್ವಚ್ಛತಾ ಆಂದೋಲನ ದಲ್ಲಿ ಈ ಅಭಿಪ್ರಾಯ ವ್ಯಕ್ತವಾಯಿತು.

ಜಿಲ್ಲಾ ಯುವ ಒಕ್ಕೂಟದ ಮಾಜಿ ಅಧ್ಯಕ್ಷ ಎ.ಎಸ್. ಟಾಟು ಮೊಣ್ಣಪ್ಪ ಅವರು, ಸ್ವಚ್ಛತೆಗೆ ಆದÀ್ಯತೆ ನೀಡುವಲ್ಲಿ ಜನತೆ ಹೆಚ್ಚಿನ ಆಸಕ್ತಿ ಈ ಹಿಂದೆ ತೋರಲಿಲ್ಲ. ಈ ಕಾರಣಕ್ಕಾಗಿಯೇ ಸ್ವಚ್ಛತೆಯಲ್ಲಿ ಭಾರತಕ್ಕೆ ಹಿನ್ನಡೆಯಾಗುವಂತಾಯಿತು. ಆದರೆ ಇದಕ್ಕೆ ಕೇವಲ ಸರಕಾರವನ್ನು ಗುರಿ ಮಾಡುವದಕ್ಕಿಂತ ಜನರ ಹೊಣೆಗಾರಿಕೆಯೂ ಪ್ರಶ್ನಾರ್ಹವಾಗಿದೆ. ಜನಜಾಗೃತಿ ಮತ್ತು ಸಾಮೂಹಿಕ ಹೊಣೆಗಾರಿಯಿಂದ ಮಾತ್ರ ಸ್ವಚ್ಛತೆ ಸಾಧ್ಯ. ಇನ್ನಾದರೂ ನಾಗರಿಕ ಸಮಾಜ ಜಾಗೃತಗೊಂಡು ಸ್ಚಚ್ಛತೆಗೆ ಪ್ರಥಮ ಆದ್ಯತೆಯನ್ನು ನೀಡುವಂತಾಗಬೇಕು. ಈ ಬಗ್ಗೆ ವಿದ್ಯಾರ್ಥಿಗಳು ಮಹತ್ವದ ಪಾತ್ರವಹಿಸಿ ಈಗಿನಿಂದಲೇ ಸ್ಚಚ್ಛತೆಗೆ ವಿಶೇಷ ಆಸಕ್ತಿ ತೋರಬೇಕು ಎಂದು ಅಭಿಪ್ರಾಯಪಟ್ಟರು.

ಮುಖ್ಯ ಅತಿಥಿಯಾಗಿದ್ದ ಜಿ.ಪಂ. ಸದಸ್ಯ ಬಿ.ಎನ್. ಪ್ರಥ್ಯು ಮಾತನಾಡಿ, ವಿದ್ಯಾರ್ಥಿಗಳಲ್ಲಿ ಸ್ವಚ್ಛತೆ ಕುರಿತು ಜಾಗೃತಿ ಮೂಡಿಸಲು ಶಾಲಾ ಮಟ್ಟದಲ್ಲೇ ಶಿಕ್ಷಕರು ವಿಶೇಷ ಯೋಜನೆಯನ್ನು ಪಠ್ಯೇತರ ಚಟುವಟಿಕೆಯಾಗಿ ನಡೆಸಬೇಕು. ಸ್ವಚ್ಛತೆ ಪ್ರಚಾರದ ವಸ್ತುವಾಗಬಾರದು. ಬದಲಿಗೆ ಸ್ವಚ್ಛತೆ ದೇಶದ ಉನ್ನತಿಗೆ ಮುನ್ನುಡಿ ಯಾಗಬೇಕು. ಇದೀಗ ಸ್ವಚ್ಛತೆ ಕುರಿತಂತೆ ಸರಕಾರ ಹಲವಾರು ಯೋಜನೆಗಳನ್ನು ಜಾರಿಗೆ ತಂದಿದ್ದು, ಇವುಗಳ ಸಮರ್ಪಕ ಅನುಷ್ಠಾನಕ್ಕೆ ವಿದ್ಯಾರ್ಥಿಗಳಿಗೆ ಮಾಹಿತಿ ಒದಗಿಸಿ ಆ ಮೂಲಕ ಜಾಗೃತಿ ಮೂಡಿಸುವಂತಾಗಬೇಕು ಎಂದು ಅಭಿಪ್ರಾಯ ಪಟ್ಟರು.

ಮತ್ತೋರ್ವ ಮುಖ್ಯ ಅತಿಥಿಯಾಗಿದ್ದ ಗೋಣಿಕೊಪ್ಪಲು ಕೊಡವ ಸಮಾಜದ ಪ್ರಮುಖ ಎಸ್.ಎಂ. ವಿಶ್ವನಾಥ್ ಮಾತನಾಡಿ, ಗ್ರಾಮೀಣ ಪ್ರದೇಶ ಸ್ಚಚ್ಛಗೊಂಡರೆ ಇಡೀ ದೇಶ ಸ್ವಚ್ಛಗೊಂಡಂತೆ. ಅದಕ್ಕಾಗಿ ಗಾಮೀಣ ಮಟ್ಟದಲ್ಲಿ ಸ್ವಚ್ಛತೆಗೆ ಹೆಚ್ಚಿನ ಆದ್ಯತೆ ನೀಡಬೇಕು.

ಮನುಷ್ಯನಿಗೆ ಶಾರೀರಿಕ ಸ್ವಚ್ಛತೆ ಎಷ್ಟು ಮುಖ್ಯವೋ ಪರಿಸರದ ಸ್ವಚ್ಛತೆಯೂ ಅಷ್ಟೇ ಮುಖ್ಯವಾಗಬೇಕು. ಇದೀಗ ದೇಶದಲ್ಲಿ ಸ್ವಚ್ಛಭಾರತ್ ಮಿಷನ್ ಸ್ವಚ್ಛತೆ ಕುರಿತಾಗಿ ಸಕ್ರಿಯವಾಗಿ ಕಾರ್ಯನಿರ್ವಹಿಸುತ್ತಿದ್ದು, ಇದರ ಪ್ರಯೋಜನವನ್ನು ಗ್ರಾಮೀಣ ಭಾಗದ ಜನರು ಪಡೆದುಕೊಳ್ಳಬೇಕು ಎಂದು ಕರೆ ನೀಡಿದರು.

ಕಾರ್ಯಕ್ರಮದಲ್ಲಿ ಮಾಯಮುಡಿ ಸರಕಾರಿ ಪ್ರೌಢಶಾಲೆಯ 10ನೇ ತರಗತಿ ವಿದ್ಯಾರ್ಥಿನಿ ಕವನ ಅವರು ಸದ್ಭಾವನೆ ಮತ್ತು ಸ್ವಚ್ಛತೆ ಕುರಿತ ಪತ್ರಿಜ್ಞಾವಿಧಿಯನ್ನು ಬೋಧಿಸಿದರು. ಕಾರ್ಯಕ್ರಮದ ಅಧ್ಯಕ್ಷತೆಯನ್ನು ಮಾಯಮುಡಿ ಕಾವೇರಿ ಯುವಕ ಸಂಘದ ಅಧ್ಯಕ್ಷ ಎಂ.ಜಿ. ಮಹೇಶ್ ವಹಿಸಿದ್ದರು.

ಸ್ವಚ್ಛತಾ ಆಂದೋಲನದ ಅಂಗವಾಗಿ ವಿದ್ಯಾರ್ಥಿಗಳು ಶಾಲೆಯಿಂದ ಮಾಯಮುಡಿ ಮುಖ್ಯ ರಸ್ತೆಯ ಮೂಲಕ ಮೆರವಣಿಗೆ ನಡೆಸಿ ಜಾಗೃತಿ ಮೂಡಿಸಿದರಲ್ಲದೆ ರಸ್ತೆಯ ಬದಿಯಲ್ಲಿದ್ದ ಕಸವನ್ನು ಸಂಗ್ರಹಿಸಿದರು.

ಕಾರ್ಯಕ್ರಮದಲ್ಲಿ ಮಾಯಮುಡಿ ಗ್ರಾ.ಪಂ. ಉಪಾಧ್ಯಕ್ಷೆ ಗೌರಿ ರಾಮ, ಸದಸ್ಯ ಟಿ.ವಿ. ಶ್ರೀಧರ್, ಗ್ರಾ.ಪಂ. ಮಾಜಿ ಅಧ್ಯಕ್ಷ ಎಸ್.ಎಸ್. ಸುಬ್ಬಯ್ಯ, ಕಾವೇರಿ ಯುವಕ ಸಂಘದ ಉಪಾಧ್ಯಕ್ಷ ಬಿ.ಎಸ್. ಸುಧನ್, ಕಾರ್ಯದರ್ಶಿ ಬಲ್ಯಂಡ ದಿನು, ಖಜಾಂಜಿ ನಿತಿನ್, ಪದಾಧಿಕಾರಿಗಳಾದ ಪುರುಷೋತ್ತಮ್, ಎ.ಕೆ. ಅರುಣ, ಶೇಷಶಯನ, ಸಿ.ಪಿ. ಬೋಪಣ್ಣ, ಬಿ.ಎಂ. ಯೋಗೇಶ, ಮಾಜಿ ಸೈನಿಕ ಎ.ಎಸ್. ಅಪ್ಪಿ ಮಾದಪ್ಪ, ಪೊನ್ನಂಪೇಟೆ ನಿಸರ್ಗ ಜೇಸಿಸ್‍ನ ಪದಾಧಿಕಾರಿ ಕುಪ್ಪಂಡ ದಿಲನ್ ಬೋಪಣ್ಣ, ಶಾಲಾ ಮುಖ್ಯೋಪಾಧ್ಯಾಯಿನಿ ಎಂ.ಎ. ಸಬಿತಾ, ಶಿಕ್ಷಕರಾದ ಬಿ.ನಾಗೇಶ್, ಎಂ.ಪಿ. ರೂಪ, ಎ.ಎಸ್. ರೀನಾ, ಬಿ.ಯು. ಲೀಲಾವತಿ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಭಾಗವಹಿಸಿದ್ದರು.

- ರಫೀಕ್ ತೂಚಮಕೇರಿ