ಕುಶಾಲನಗರ, ಸೆ. 13: ಅಕ್ರಮ ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆ ದಂಧೆಯ ಆರೋಪದ ಹಿನ್ನೆಲೆಯಲ್ಲಿ ರಾಜ್ಯದ ಶಾಸಕರೊಬ್ಬರ ಪುತ್ರನೊಬ್ಬ ಜೈಲುಪಾಲಾದ ಘಟನೆ ಕುಶಾಲನಗರದ ಗ್ರಾಮಾಂತರ ಠಾಣಾ ವ್ಯಾಪ್ತಿಯಲ್ಲಿ ನಡೆದಿದೆ. ಭಾನುವಾರ ರಾತ್ರಿ ಕುಶಾಲನಗರ ಗ್ರಾಮಾಂತರ ಪೊಲೀಸರು ಖಚಿತ ಮಾಹಿತಿ ಮೇರೆಗೆ ಗುಡ್ಡೆಹೊಸೂರು ಸಮೀಪದ ಚಿಕ್ಕಬೆಟ್ಟಗೇರಿ ಗ್ರಾಮದಲ್ಲಿ ಹೋಂಸ್ಟೇಯಲ್ಲಿ ವೇಶ್ಯಾವಾಟಿಕೆ ನಡೆಯುತ್ತಿರುವ ಹಿನ್ನೆಲೆಯಲ್ಲಿ ಧಾಳಿ ಮಾಡಿದ ಸಂದರ್ಭ ಪೊಲೀಸರ ವಶವಾದ ನಾಲ್ವರು ಆರೋಪಿಗಳಲ್ಲಿ ಓರ್ವ ಜನಪ್ರತಿನಿಧಿಯೊಬ್ಬರ ಪುತ್ರ ಎನ್ನುವದು ಖಚಿತಗೊಂಡಿದೆ.

ತುರುವೆಕರೆ ಶಾಸಕರೊಬ್ಬರ ಪುತ್ರ ಆರೋಪಿಯಾಗಿದ್ದು ಇದೀಗ ಪೊಲೀಸರು ಆತನ ಹೆಡೆಮುರಿ ಕಟ್ಟಿ ಜೈಲಿಗೆ ಕಳುಹಿಸುವಲ್ಲಿ ಯಶಸ್ವಿಯಾಗಿದ್ದಾರೆ. ಜೊತೆಗೆ ಈತನ ಮಾರುತಿ ಅಲ್ಟೋ ಕಾರು ಕೂಡ ಪೊಲೀಸರ ವಶವಾಗಿದೆ. ಶಾಸಕರ ಪುತ್ರ ಕಳೆದ ಕೆಲವು ವರ್ಷಗಳಿಂದ ಕುಶಾಲನಗರದ ಮುಖ್ಯರಸ್ತೆಯಲ್ಲಿ ಹೋಟೆಲ್ ಒಂದನ್ನು ನಡೆಸುತ್ತಿದ್ದ ಎನ್ನಲಾಗಿದ್ದು ನಷ್ಟಕ್ಕೊಳಗಾಗಿ ಇತ್ತೀಚೆಗೆ ಅದರ ಉಸ್ತುವಾರಿಯನ್ನು ತನ್ನ ಸಹಚರರಿಗೆ ಹಸ್ತಾಂತರಿಸಿ ತಾನು ಬೇರೆ ಉದ್ಯಮದಲ್ಲಿ ತೊಡಗಿಕೊಂಡಿದ್ದ ಎನ್ನಲಾಗಿದೆ.

ಮೂಲತಃ ಬೆಂಗಳೂರಿನ ರಾಜಾಜಿನಗರದ ನಿವಾಸಿಯಾಗಿರುವ ಈತ ಕಳೆದ ವಾರಾಂತ್ಯದ ದಿನ ಕಳೆಯಲು ಕೊಡಗು ಜಿಲ್ಲೆಯಲ್ಲಿ ರೇಸ್‍ನಲ್ಲಿ ಪಾಲ್ಗೊಳ್ಳಲು ಕೊಡಗು ಜಿಲ್ಲೆಯ ಸಹಪಾಠಿಗಳೊಂದಿಗೆ ಆಗಮಿಸಿದ್ದು ಈ ಸಂದರ್ಭ ಹೋಂಸ್ಟೇಯಲ್ಲಿ ಸಿಲುಕಿ ಹಾಕಿಕೊಂಡಿದ್ದು ಇದೀಗ ನ್ಯಾಯಾಂಗ ವಶಕ್ಕೆ ಪೊಲೀಸರು ನೀಡಿದ್ದಾರೆ. ಈತನೊಂದಿಗೆ ಸೋಮವಾರಪೇಟೆ ವ್ಯಾಪ್ತಿಯ ಇಬ್ಬರು ಸೇರಿದಂತೆ ಹೋಂಸ್ಟೇಗೆ ವೇಶ್ಯೆಯರನ್ನು ಸರಬರಾಜು ಮಾಡುತ್ತಿದ್ದ ಪ್ರಸನ್ನ ಎಂಬಾತ ಕೂಡ ಜೈಲು ಸೇರಿದ್ದಾರೆ. ಶಾಸಕರ ಪುತ್ರ ಮಾತ್ರ ವಿಚಾರಣೆ ಸಂದರ್ಭ ತಾನು ವಿಐಪಿ ಪುತ್ರ ಅನ್ನುವದನ್ನು ಪೊಲೀಸರಿಗೆ ತಿಳಿಸದಿರುವದೇ ಇಲ್ಲಿನ ನಿಗೂಢ ಅಂಶ.

ಪ್ರವೀಣ್ ಪೂಜಾರಿ ಹತ್ಯೆ ಹಿನ್ನೆಲೆಯಲ್ಲಿ ತನಿಖೆ ಕೈಗೊಳ್ಳುತ್ತಿದ್ದ ಸಂದರ್ಭ ಈ ವೇಶ್ಯಾವಾಟಿಕೆ ದಂಧೆ ಪುರಾಣ ಬಗ್ಗೆ ಪೊಲೀಸರಿಗೆ ಖಚಿತ ಮಾಹಿತಿಗಳು ದೊರೆತಿದ್ದು ಕಳೆದ ಕೆಲವು ವರ್ಷಗಳಿಂದ ಈ ದಂಧೆ ನಿರಂತರವಾಗಿ ನಡೆಯುತ್ತಿತ್ತು ಎನ್ನಲಾಗಿದೆ.

ಆಗಾಗ್ಯೆ ದಂಧೆಯ ಹೆಸರಿನಲ್ಲಿ ಸಣ್ಣಪುಟ್ಟ ಗಲಾಟೆಗಳು ಕೂಡ ನಡೆದಿವೆ ಎನ್ನಲಾಗಿದೆ. ಪ್ರಸನ್ನ ಎಂಬಾತ ಕೂಡ ಈ ಅಕ್ರಮ ಹೋಂಸ್ಟೇಗೆ ಮದ್ಯವರ್ತಿಯಾಗಿ ಕೆಲಸ ನಿರ್ವಹಿಸುತ್ತಿದ್ದ ಎನ್ನುವ ಮಾಹಿತಿಗಳು ಪೊಲೀಸರಿಗೆ ದೊರೆತಿವೆ.