ವೀರಾಜಪೇಟೆ, ಜೂ. 1: ಹಿಂದಿನಕಾಲದಲ್ಲಿ ಶಾಲೆಗೆ ಹೋಗಲು ತುಂಬ ದೂರ ನಡೆದು ವಿದ್ಯೆ ಕಲಿಯಬೇಕಾಗಿತ್ತು. ಆದರೆ ಇಂದು ಸರ್ಕಾರ ಎಲ್ಲಾ ಗ್ರಾಮಗಳಲ್ಲಿ ಶಾಲೆಗಳನ್ನು ತೆರೆದು ಸೌಲತ್ತುಗಳನ್ನು ನೀಡುವ ಮೂಲಕ ಶಿಕ್ಷಣಕ್ಕೆ ಒತ್ತು ನೀಡಿದೆ ಎಂದು ಡಾ,ಇಂದಿರಾ ಕಲ್ಯಾಣ ಸುಂದರಂ ಹೇಳಿದರು.

ವೀರಾಜಪೇಟೆ ಪದವಿ ಪೂರ್ವ ಕಾಲೇಜು ಮತ್ತು ಪ್ರೌಢಶಾಲೆ ಹಳೇ ವಿದ್ಯಾರ್ಥಿಗಳ ಸಂಘದ ವತಿಯಿಂದ ಕಾಲೇಜು ಸಭಾಂಗಣದಲ್ಲಿ ಏರ್ಪಡಿಸಲಾಗಿದ್ದ ‘ಸ್ನೇಹ ಮಿಲನ’ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಯಾಗಿ ಭಾಗವಹಿಸಿ ಮಾತನಾಡಿದ ಇಂದಿರಾ ಅವರು ಹಿಂದೆ ನಾವು ಶಾಲೆಗೆ ಹೋಗುವಾಗ ಉಪಾಧ್ಯಾಯರನ್ನು ಕಂಡರೆ ಭಯ ಪಡುತಿದ್ದೆವು ಇಂದು ಅದು ಇಲ್ಲದಂತಾಗಿದೆ ಎಂದರು.

ಹಳೇ ವಿದ್ಯಾರ್ಥಿ ಸಂಘದ ಅಧ್ಯಕ್ಷ ಕೆ.ಎಸ್.ಅಯ್ಯಪ್ಪ ಅಧ್ಯಕ್ಷತೆ ವಹಿಸಿ ಮಾತನಾಡಿ ನಾವು ಶಾಲೆಗೆ ಹೋಗುತ್ತಿರುವಾಗ ಗುರು ಶಿಷ್ಯರ ಬಾಂಧವ್ಯ ಅತ್ಯಂತ ಅಮೂಲ್ಯ ವಾಗಿತ್ತು. ಅಂದಿನ ಅನುಭವದ ಸಮಯ ಈಗ ಬಯಸಿದರೂ ಬರುವುದಿಲ್ಲ. ಮುಂದಿನ ದಿನಗಳಲ್ಲಿ ಸಂಘದ ಅಭಿವೃದ್ಧಿಗೆ ಸದಸ್ಯರುಗಳು ಹೆಚ್ಚಿನ ಒತ್ತು ನೀಡಿ ಸಂಘಟಿಸ ಬೇಕಾಗಿದೆ ಎಂದರು.

ಸಂಘದ ಸಂಚಾಲಕ ಮುಕ್ಕಾಟಿರ ಚೋಟು ಅಪ್ಪಯ್ಯ ಮಾತನಾಡಿ ಸಂಘವನ್ನು ಬಲಪಡಿಸುವ ನಿಟ್ಟಿನಲ್ಲಿ ಕಟ್ಟಡದ ಅವಶ್ಯಕತೆ ಇದ್ದು ಸದ್ಯದಲ್ಲೆ ಕಾಮಗಾರಿಗೆ ಚಾಲನೆ ನೀಡಲಾಗುವದು. ಸರ್ಕಾರಿ ಪದವಿ ಪೂರ್ವ ಕಾಲೇಜು ಮತ್ತು ಶಾಲೆಯ ಅಭಿವೃದ್ಧಿಗೆ ಸಂಘ ಹೆಚ್ಚು ಒತ್ತು ನೀಡಲಿದೆ ಎಂದರು.

ಕಾಲೇಜಿನ ಪ್ರಾಂಶುಪಾಲ ಆರ್.ಮೋಹನ್ ಪ್ರಾಸ್ತಾವಿಕವಾಗಿ ಮಾತನಾಡಿ ಸುಮಾರು 135 ವರ್ಷಗಳ ಹಿಂದೆ ಪ್ರಾರಂಭಗೊಂಡ ಈ ಶಾಲೆ ಮತ್ತು ಕಾಲೇಜು ದುಸ್ಥಿತಿಯಲ್ಲಿದ್ದು ಅಭಿವೃದ್ಧಿಗೆ ಜನರ ಸಹಕಾರ ಅಗತ್ಯವಾಗಿದೆ ಎಂದರು. ಅತಿಥಿಗಳಾಗಿದ್ದ ಎಸ್.ಆರ್. ಜಗದೀಶ್ ಶಾಲಾ-ಕಾಲೇಜು ಅಭಿವೃದ್ಧಿ ಹೊಂದಲು ಸರ್ಕಾರದ ಅನುದಾನದ ಜೊತೆಗೆ ಸಾರ್ವಜನಿಕರ ಸಹಕಾರ ಅಗತ್ಯ ಎಂದು ಹೇಳಿದರು. ಬೊವ್ವೇರಿಯಂಡ ಎಂ.ಕಾರ್ಯಪ್ಪ ಮಾತನಾಡಿದರು.

ಸಂಘದ ರಮೇಶ್ ಅಯ್ಯಪ್ಪ ಸ್ವಾಗತಿಸಿದರು. ಉಪನ್ಯಾಸಕ ಚಾಲ್ರ್ಸ್‍ಡಿಸೋಜ ನಿರೂಪಿಸಿದರೆ ಉಪ ಪ್ರಾಂಶುಪಾಲೆ ನೀತಾ ಕುಮಾರಿ ವಂದಿಸಿದರು. ಹಳೆಯ ವಿದ್ಯಾರ್ಥಿಗಳು ತಮ್ಮ ಅನಿಸಿಕೆಗಳನ್ನು ಹೇಳಿದರು. ಕಲಾವಿದರಾದ ಗೋಪಮ್ಮ ತಂಡದಿಂದ ಉರುಟಿಕೊಟ್ ಆಟ್, ಟಿ.ಡಿ. ಮೋಹನ್ ಮತ್ತು ಅಮ್ಮಣಿಚಂಡ ಪ್ರವೀಣ್ ಅವರಿಂದ ಕುಂಚ ಗಾಯನ, ವಿದ್ಯಾರ್ಥಿಗಳಿಂದ ಕತ್ತಿಯಾಟ್ ಕಾರ್ಯಕ್ರಮ ನಡೆಯಿತು.