ಭಾಗಮಂಡಲ, ಜೂ. 9: ಅನ್ನದಾನ ವಿದ್ಯಾದಾನವೆಂಬದು ಅತ್ಯಂತ ಮಹತ್ವವಾದುದು. ಮಕ್ಕಳಿಗೆ ವಿದ್ಯೆ ನೀಡಿದರೆ ಸಾಲದು. ಉನ್ನತ ಶಿಕ್ಷಣ ಹಾಗೂ ಗುಣಮಟ್ಟದ ಶಿಕ್ಷಣದ ಬಗ್ಗೆ ಕೂಡ ಗಮನ ಹರಿಸಬೇಕು ಎಂದು ಅಯ್ಯಂಗೇರಿ ಮಸೀದಿಯ ಯಾಶೀರ್ ಸ್ವಾಲೀಲಿ ಖತೀಬ್ ಹೇಳಿದರು.

ವಾಟ್ಸ್ಯಾಪ್ ಗ್ರೂಪ್‍ನ ಸ್ನೇಹಿತರಿಂದ ಅಯ್ಯಂಗೇರಿ ಸರ್ಕಾರಿ ಶಾಲೆಯ ವಿದ್ಯಾರ್ಥಿಗಳಿಗೆ ಉಚಿತ ನೋಟ್ ಪುಸ್ತಕ, ಪೆನ್, ಪೆನ್ಸಿಲ್ ಹಾಗೂ ಅಯ್ಯಂಗೇರಿಯ ನಿವಾಸಿಗಳಿಗೆ ರಂಜಾನ್ ಕಿಟ್ ವಿತರಿಸಿ ಮಾತನಾಡಿದರು.

ಆಂಗ್ಲ ಮಾಧ್ಯಮದಿಂದಾಗಿ ಇಂದು ಮಾತೃಭಾಷೆಯ ಶಿಕ್ಷಣ ಕಡಿಮೆಯಾಗಿದೆ. ಕನ್ನಡ ಭಾಷೆ ನಮ್ಮ ಮಾತೃಭಾಷೆಯಾಗಿರುವದರಿಂದ ನಾವು ಸ್ವಾವಲಂಭಿಗಳಾಗಬೇಕೆಂದರು.

ವಾಟ್ಸ್ಯಾಪ್ ಗ್ರೂಪ್‍ನ ಸ್ಥಾಪಕ ಕೆ.ಪಿ. ಇಸ್ಮಾಯಿಲ್ ಮಾನತಾಡಿ, 118 ಜನರ ತಂಡದ ಒಂದು ಗ್ರೂಪ್‍ನಿಂದ 2ನೇ ವರ್ಷದ ಕಾರ್ಯಕ್ರಮ ಆಯೋಜಿಸಲಾಗಿದೆ. ಕಳೆದ ಎಂಟು ವರ್ಷಗಳಿಂದ ಆರಂಭಗೊಂಡ ಮದರಸ ಶಾಲೆಯ ಕಟ್ಟಡಕ್ಕೆ ಇದೇ ಗ್ರೂಪ್‍ನಿಂದ ರೂ. 20 ಲಕ್ಷ ನೀಡಲಾಗಿದೆ. ಪೂರ್ಣ ಪ್ರಮಾಣದ ಕೆಲಸವನ್ನು ಈ ಗ್ರೂಪ್ ಮುಂದೆ ಮಾಡಲಿದೆ. ವಿದೇಶದಲ್ಲಿ ಪ್ರಾರಂಭಿಸಲಾದ ಗ್ರೂಪ್ ಮುಂದೆ ಇನ್ನಷ್ಟು ಅಭಿವೃದ್ಧಿ ಕೆಲಸ ಮಾಡಲಿದೆ ಎಂದರು. ಕೊಳಕೇರಿ ಮದ್ರಸದ ಯಾಕೂಬ್ ಮಾತನಾಡಿ, ಸಾಮಾಜಿಕ ತಾಣಗಳಿಂದಾಗಿ ಕುಟುಂಬದ ಗಮನ ದೂರವಿದ್ದು, ಚಾಟಿಂಗ್‍ನಲ್ಲಿ ತೊಡಗಿಕೊಂಡು ಹತ್ತಿರದವರನ್ನು ದೂರ ಮಾಡುತ್ತಾ ದೂರದವರನ್ನು ಹತ್ತಿರ ಮಾಡುವ ತಾಣದಿಂದಾಗಿ ಊರಿನ ಪ್ರಗತಿಯ ಬಗ್ಗೆ ಗಮನ ಹರಿಸಿರುವದು ಗಮನಾರ್ಹವಾಗಿದೆ ಎಂದರು.

ವೇದಿಕೆಯಲ್ಲಿ ಅಯ್ಯಂಗೇರಿಯ ಆಸೀನ್ ಸಅದಿ, ಹೊದ್ದೂರು ಗ್ರಾ.ಪಂ. ಸದಸ್ಯ ಹಂಸ, ಸರ್ಕಾರಿ ಶಾಲೆಯ ಶಿಕ್ಷಕ ಬಸವಣ್ಣ, ಜಮಾಅತ್ ಅಧ್ಯಕ್ಷ ಸಾದಲಿ, ಗ್ರಾ.ಪಂ. ಸದಸ್ಯರಾದ ಪಿ.ಹೆಚ್. ಮಹಮ್ಮದ್, ಅಬ್ದುಲ್ ರೆಹಮಾನ್ ಹಾಗೂ ಗ್ರೂಪ್‍ನ ಸದಸ್ಯರು ಹಾಜರಿದ್ದರು.