ಮಡಿಕೇರಿ, ಜೂ. 9: ಜನ ಸಾಮಾನ್ಯರ ಕೊಂಡಿಯಾಗಿರುವ ಹೈನುಗಾರಿಕಾ ಕ್ಷೇತ್ರದಲ್ಲಿ ಸಹಕಾರಿಗಳು ಮತ್ತು ಅಧಿಕಾರಿಗಳು ಇನ್ನಷ್ಟು ಕೈಜೋಡಿಸಿದಾಗ ಹಾಲು ಉತ್ಪಾದಕರ ಸಹಕಾರ ಸಂಘಗಳನ್ನು ದೇಶದಲ್ಲಿಯೇ ಪ್ರಥಮ ಸ್ಥಾನಕ್ಕೆ ಕೊಂಡೊಯ್ಯಬಹುದು ಎಂದು ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ಅಧ್ಯಕ್ಷ ಶೇಖರಗೌಡ ಮಾಲಿ ಪಾಟೀಲ ಅಭಿಪ್ರಾಯಪಟ್ಟಿದ್ದಾರೆ.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳ, ಕರ್ನಾಟಕ ಸಹಕಾರ ಹಾಲು ಮಹಾಮಂಡಳ ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್ ಇವರ ಸಂಯುಕ್ತ ಆಶ್ರಯದಲ್ಲಿ ನಗರದ ಹೊಟೇಲ್ ಮಯೂರ ವ್ಯಾಲಿ ವ್ಯೂ ಸಭಾಂಗಣದಲ್ಲಿ ಕರ್ನಾಟಕ ಸಹಕಾರಿ ಹಾಲು ಮಹಾಮಂಡಳದ ಹಿರಿಯ ಅಧಿಕಾರಿಗಳಿಗೆ ನಡೆದ ಉನ್ನತ ಮಟ್ಟದ ವಿಶೇಷ ತರಬೇತಿ ಎರಡು ದಿನದ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಅವರು ಮಾತನಾಡಿದರು. ಹೈನುಗಾರಿಕೆ ಕ್ಷೇತ್ರದಲ್ಲಿ ಕೃಷಿಕರು, ಬಡವರು ತೊಡಗಿಸಿದ್ದಾರೆ. ಆದ್ದರಿಂದ ಗ್ರಾಮೀಣ ಪ್ರದೇಶದಲ್ಲಿ ಶ್ರೀಸಾಮಾನ್ಯರಿಗೆ ಹತ್ತಿರದಲ್ಲಿರುವ ಹಾಲು ಉತ್ಪಾದಕರ ಸಹಕಾರ ಸಂಘವನ್ನು ಮತ್ತಷ್ಟು ಬಲಪಡಿಸಲು ಅಧಿಕಾರಿಗಳು ಮತ್ತು ಸಹಕಾರಿಗಳು ವಿಶೇಷ ಕಾಳಜಿ ಹಾಗೂ ಶ್ರದ್ಧೆ ವಹಿಸಬೇಕಿದೆ ಎಂದು ಸಲಹೆ ಮಾಡಿದರು.

ಹಾಲು ಉತ್ಪಾದನೆಯಲ್ಲಿ ದೇಶದಲ್ಲಿಯೇ ರಾಜ್ಯ ಎರಡನೇ ಸ್ಥಾನದಲ್ಲಿದ್ದು, ಮೊದಲ ಸ್ಥಾನಕ್ಕೆ ಕೊಂಡೊಯ್ಯುವ ನಿಟ್ಟಿನಲ್ಲಿ ಎಲ್ಲರೂ ಕೈಜೋಡಿಸಬೇಕು. ಹಾಗಾದಾಗ ಮಾತ್ರ ಹೈನುಗಾರಿಕೆ ಕ್ಷೇತ್ರದಲ್ಲಿ ಇನ್ನಷ್ಟು ಅಭಿವೃದ್ಧಿ ಸಾಧ್ಯ. ಆ ನಿಟ್ಟಿನಲ್ಲಿ ರಾಜ್ಯ ಸಹಕಾರ ಮಹಾ ಮಂಡಳ ವತಿಯಿಂದ ಶಿಕ್ಷಣ, ತರಬೇತಿ ಮಾಹಿತಿ ಕಾರ್ಯಾಗಾರವನ್ನು ಹಮ್ಮಿಕೊಳ್ಳಲಾಗಿದೆ ಎಂದು ರಾಜ್ಯ ಸಹಕಾರ ಮಹಾ ಮಂಡಳದ ಅಧ್ಯಕ್ಷರು ತಿಳಿಸಿದರು.

ಸಹಕಾರ ಕ್ಷೇತ್ರದಲ್ಲಿ ಹೈನುಗಾರಿಕೆ ಆರ್ಥಿಕ ಅಭಿವೃದ್ಧಿಗೆ ಸಹಕಾರಿಯಾಗಿದೆ. ಆ ನಿಟ್ಟಿನಲ್ಲಿ ಹೈನುಗಾರಿಕೆ ಉತ್ತೇಜನಕ್ಕೆ ಹೆಚ್ಚಿನ ಗಮನಹರಿಸುವದು ಅತ್ಯಗತ್ಯ. ರೈತರು ಸೇರಿದಂತೆ ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವ ಪ್ರತಿಯೊಬ್ಬರೂ ನೆಮ್ಮದಿಯ ಜೀವನ ನಡೆಸಲು ಸಹಕಾರ ಕ್ಷೇತ್ರ ಸಹಕಾರಿಯಾಗಿದೆ. ಸಹಕಾರ ಕ್ಷೇತ್ರದಲ್ಲಿ ತೊಡಗಿಸಿಕೊಂಡಿರುವವರು ರಾಜಕೀಯ, ವಾಣಿಜ್ಯ, ವ್ಯಾಪಾರ ಮತ್ತಿತರ ಕ್ಷೇತ್ರದಲ್ಲಿ ಏಳಿಗೆ ಸಾಧಿಸಿರು ವದನ್ನು ಕಾಣಬಹುದಾಗಿದೆ ಎಂದು ಶೇಖರಗೌಡ ಮಾಲಿ ಪಾಟೀಲ ಸ್ಮರಿಸಿದರು.

ಸರ್ಕಾರ ಸಹಕಾರ ಕ್ಷೇತ್ರವನ್ನು ಬಲಪಡಿಸುವ ನಿಟ್ಟಿನಲ್ಲಿ ಸಾಕಷ್ಟು ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದೆ. ಆ ನಿಟ್ಟಿನಲ್ಲಿ ರೈತರಿಗೆ ಪ್ರತೀ ಲೀಟರ್ ಹಾಲಿಗೆ ರೂ. 4 ಪ್ರೋತ್ಸಾಹಧನ ನೀಡುತ್ತಿದೆ ಎಂದು ನುಡಿದರು.

ಕರ್ನಾಟಕ ರಾಜ್ಯ ಸಹಕಾರ ಮಹಾ ಮಂಡಳದ ನಿರ್ದೇಶಕರು ಹಾಗೂ ಕೊಡಗು ಜಿಲ್ಲಾ ಸಹಕಾರ ಯೂನಿಯನ್‍ನ ಅಧ್ಯಕ್ಷ ಎ.ಕೆ. ಮನು ಮುತ್ತಪ್ಪ ಮಾತನಾಡಿ, ಯಾವದೇ ಕ್ಷೇತ್ರದಲ್ಲಿ ಗುಣಮಟ್ಟವನ್ನು ಕಾಯ್ದುಕೊಂಡಾಗ ಸ್ಪರ್ಧೆಯನ್ನು ಎದುರಿಸಬಹುದು. ಇಲ್ಲದಿದ್ದಲ್ಲಿ ಹಲವು ಸವಾಲುಗಳನ್ನು ಎದುರಿಸಬೇಕಾಗುತ್ತದೆ. ಆದ್ದರಿಂದ ಹಾಲು, ಕಾಫಿ, ಏಲಕ್ಕಿ, ಕರಿಮೆಣಸು ಹೀಗೆ ಎಲ್ಲಾ ಪದಾರ್ಥ ಗಳಲ್ಲಿ ಗುಣಮಟ್ಟ ಕಾಯ್ದುಕೊಳ್ಳಬೇಕು ಎಂದು ಸಲಹೆ ಮಾಡಿದರು.

ಕೊಡಗಿನ ಕಾಫಿಗೆ 20 ವರ್ಷಗಳ ಹಿಂದೆ ವಿದೇಶಿ ವಿನಿಮಯದಲ್ಲಿ ಸಾಕಷ್ಟು ಬೇಡಿಕೆ ಇತ್ತು. ಆದರೆ ಇತ್ತೀಚಿನ ದಿನಗಳಲ್ಲಿ ಬೇಡಿಕೆ ಕಡಿಮೆಯಾಗುತ್ತಿದೆ. ಆದ್ದರಿಂದ ಮುಕ್ತ ಮಾರುಕಟ್ಟೆ ಸ್ಪರ್ಧೆಯನ್ನು ಎದುರಿಸಲು ಗುಣಮಟ್ಟ ಕಾಪಾಡಿಕೊಳ್ಳಬೇಕು ಎಂದು ಅವರು ಅಭಿಪ್ರಾಯಪಟ್ಟರು. ಕರ್ನಾಟಕ ರಾಜ್ಯ ಪತ್ತಿನ ಸಹಕಾರ ಸಂಘಗಳ ಮಹಾಮಂಡಳದ ಅಧ್ಯಕ್ಷರು ಹಾಗೂ ಕರ್ನಾಟಕ ರಾಜ್ಯ ಮಹಾಮಂಡಳದ ನಿರ್ದೇಶಕ ಎಸ್. ಚಂದ್ರಶೇಖರ್ ಮಾತನಾಡಿ, ಸಹಕಾರ ಕ್ಷೇತ್ರದಲ್ಲಿ ಶ್ರದ್ಧೆಯಿಂದ ತೊಡಗಿಸಿಕೊಂಡಲ್ಲಿ ಆರ್ಥಿಕ ಜೀವನ ಉತ್ತಮಪಡಿಸಿ ಕೊಳ್ಳಬಹುದು ಎಂದು ಅಭಿಪ್ರಾಯಪಟ್ಟರು.

ಕರ್ನಾಟಕ ರಾಜ್ಯ ಸಹಕಾರ ಮಹಾಮಂಡಳದ ನಿರ್ದೇಶಕ ದಾಸಯ್ಯ ಮಾತನಾಡಿ, ದೇಶದ ಆರ್ಥಿಕ ಅಭಿವೃದ್ಧಿಗೆ ಹೈನುಗಾರಿಕೆ ಕ್ಷೇತ್ರ ಹೆಚ್ಚು ಸಹಕಾರಿಯಾಗಿದೆ. ಹೈನುಗಾರಿಕೆ ಯಿಂದಾಗಿ ಗ್ರಾಮೀಣ ಪ್ರದೇಶದ ಬಡವರು, ರೈತರು ಒಂದು ಹಸುವನ್ನು ಸಾಕಿಕೊಂಡು ಪ್ರತಿವಾರ ಹಣ ನೋಡುವಂತಾಯಿತು ಎಂದರು.

ಸಹಕಾರ ಕ್ಷೇತ್ರಕ್ಕೆ ಬಂದ ನಂತರ ಸಹಕಾರಿಯಾಗಿರಬೇಕು. ಸಹಕಾರ ಕ್ಷೇತ್ರವನ್ನು ಮೇಲೆತ್ತಲು ಕಾರ್ಯಕ್ರಮ ರೂಪಿಸಬೇಕು. ಹಾಗಾದಾಗ ಸಹಕಾರ ಕ್ಷೇತ್ರದ ಪರಿಕಲ್ಪನೆಗೆ ಮಹತ್ವ ಬರುತ್ತದೆ ಎಂದು ಅಭಿಪ್ರಾಯಪಟ್ಟರು.

ರಮೇಶ್ ಕಣ್ಣೂರು ಅವರು ಮಾತನಾಡಿ ಸಹಕಾರ ಕ್ಷೇತ್ರಕ್ಕೆ ತೆರಿಗೆ ವಿನಾಯಿತಿ ದೊರೆಯುವಂತಾಗಲು ಸಹಕಾರಿಗಳು ಮನಸ್ಸು ಮಾಡಬೇಕು. ಸಹಕಾರ ಕ್ಷೇತ್ರದಲ್ಲಿ ಹಣ ತೆರಿಗೆಗಾಗಿ ಸಾಕಷ್ಟು ಹೋಗುತ್ತದೆ. ಆದ್ದರಿಂದ ವಿನಾಯಿತಿ ಪಡೆಯುವತ್ತ ಗಮನಹರಿಸಬೇಕಿದೆ ಎಂದು ಸಲಹೆ ಮಾಡಿದರು.

ಹಾಲು ಉತ್ಪಾದನೆ ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಹಕಾರ ಕಾನೂನಿನಲ್ಲಿ ಆಗಿರುವ ತಿದ್ದುಪಡಿ ಹಾಗೂ ಅಧಿಕಾರಿಗಳ ಮತ್ತು ಸಿಬ್ಬಂದಿಯ ಸೇವಾ ನಿಯಮಗಳ ಕುರಿತು ಸಹಕಾರ ಸಂಘಗಳ ಅಪರ ನಿಬಂಧಕ ನಿವೃತ್ತ ಸಿ.ಎನ್. ಪರಶಿವಮೂರ್ತಿ ಹಾಗೂ ಸಹಕಾರ ಸಂಸ್ಥೆಗಳ ಆಡಳಿತದಲ್ಲಿ ವೃತ್ತಿಪರತೆ, ಪಾರದರ್ಶಕತೆ ಮತ್ತು ಉತ್ತರದಾಯಿತ್ವ ಕುರಿತು ಸಹಕಾರ ಸಂಘಗಳ ಉಪ ನಿಬಂಧಕ (ನಿವೃತ್ತ) ಬಿ.ಎ. ಮಹದೇವಪ್ಪ ಉಪನ್ಯಾಸ ನೀಡಿದರು.

ಸಾರ್ವಜನಿಕ ಸಂಪರ್ಕ ಅಧಿಕಾರಿ ಹೆಚ್.ಎಸ್. ಪೂರ್ಣಿಮ ಮತ್ತಿತರರು ಇದ್ದರು. ಸಹಕಾರ ಮಹಾಮಂಡಳದ ವ್ಯವಸ್ಥಾಪಕ ನಿರ್ದೇಶಕ ಆರ್. ಶ್ರೀಧರ್ ಅವರು ಸ್ವಾಗತಿಸಿದರು. ಕೊಡಗು ಜಿಲ್ಲಾ ಸಹಕಾರಿ ಯೂನಿಯನ್‍ನ ಕಾರ್ಯ ನಿರ್ವಹಣಾಧಿಕಾರಿ ಯೋಗೇಂದ್ರ ನಾಯಕ್ ನಿರೂಪಿಸಿದರು.

ಮಂಜುಳ ಪ್ರಾರ್ಥಿಸಿದರು. ಸಹಕಾರ ತರಬೇತಿ ಸಂಸ್ಥೆಯ ಪ್ರಾಂಶುಪಾಲರಾದ ಆರ್.ಎಸ್. ರೇಣುಕಾ ವಂದಿಸಿದರು.