ಮಡಿಕೇರಿ, ಜು. 2: ರೋಟರಿಯಂತ ಸಾಮಾಜಿಕ ಸೇವಾ ಸಂಸ್ಥೆಗಳು ಸ್ಥಳೀಯ ಸಮಸ್ಯೆಗಳ ನಿವಾರಣೆಯತ್ತಲೂ ಗಮನ ಹರಿಸುವ ಕಾಲಘಟ್ಟ ಇಂದಿದೆ ಎಂದು ಕೊಡಗಿನ ಹಿರಿಯ ದಂತ ವೈದ್ಯ ಡಾ.ಅನಿಲ್ ಚಂಗಪ್ಪ ಅಭಿಪ್ರಾಯಪಟ್ಟಿದ್ದಾರೆ.

ಮಡಿಕೇರಿ ರೋಟರಿ ಸಂಸ್ಥೆಯ ನೂತನ ಪದಾಧಿಕಾರಿಗಳ ಪದಗ್ರಹಣ ಕಾರ್ಯಕ್ರಮದಲ್ಲಿ ಪಾಲ್ಗೊಂಡು ಮಾತನಾಡಿದ ಡಾ.ಅನಿಲ್ ಚಂಗಪ್ಪ, ಅಂತರರಾಷ್ಟ್ರೀಯ ಸೇವಾ ಸಂಸ್ಥೆಯಾಗಿ ಹೆಸರುವಾಸಿಯಾಗಿರುವ ರೋಟರಿಯಂತ ಸಂಸ್ಥೆಗಳಲ್ಲಿ ಸದಸ್ಯರ ಸಂಖ್ಯೆ ವರ್ಷದಿಂದ ವರ್ಷಕ್ಕೆ ಹೆಚ್ಚುತ್ತಲೇ ಇರುವದು ಶ್ಲಾಘನೀಯ ಬೆಳವಣಿಗೆ. ರೋಟರಿ ಪ್ರಸ್ತುತ ಸ್ಥಳೀಯ ಸಮಸ್ಯೆಗಳ ಬಗೆಗೂ ಗಮನ ಹರಿಸಿ ಸಮಸ್ಯೆ ನಿವಾರಣೆ ನಿಟ್ಟಿನಲ್ಲಿ ಕಾರ್ಯಪ್ರವೃತ್ತವಾಗಬೇಕು. ಸ್ಥಳೀಯರ ಸಮಸ್ಯೆಗೂ ಸೇವಾ ಸಂಸ್ಥೆಗಳು ಸೂಕ್ತ ರೀತಿಯಲ್ಲಿ ಸ್ಪಂದಿಸಬೇಕೆಂದು ಕರೆ ನೀಡಿದರು.

ಸಂತೋಷದ ವರ್ತನೆಯಿಂದ ಪ್ರತೀರ್ಯೋವರಲ್ಲಿಯೂ ನಗೆ ಉಕ್ಕಿಸಬಹುದು. ವಿಷಾದದ ಸಂಗತಿಗಳು ಬೇಸರಕ್ಕೆ ಕಾರಣವಾಗ ಬಹುದು, ಯಶಸ್ಸು ಬೀಗುವಂತೆ ಮಾಡಬಹುದು. ಆದರೆ ಸಾಮಾಜಿಕ ಸೇವಾ ಕಾರ್ಯಗಳು ಪ್ರತಿಯೋರ್ವ ರನ್ನೂ ಆತ್ಮ ತೃಪ್ತಿಯ ಉತ್ತುಂಗಕ್ಕೆ ಕೊಂಡೊಯ್ಯಬಹುದು ಎಂದು ಡಾ. ಅನಿಲ್ ಚಂಗಪ್ಪ ಅಭಿಪ್ರಾಯಪಟ್ಟರು.

ರೋಟರಿ ಜಿಲ್ಲೆಯ ಅಸಿಸ್ಟೆಂಟ್ ಗವರ್ನರ್ ಡಾ.ಸಿ.ಆರ್.ಪ್ರಶಾಂತ್ ಮಾತನಾಡಿ, ರೋಟರಿ ಜಿಲ್ಲೆಯ 3ನೇ ಹಿರಿಯ ರೋಟರಿ ಕ್ಲಬ್ ಎನಿಸಿ ಕೊಂಡಿರುವ ಮಡಿಕೇರಿ ರೋಟರಿಯಲ್ಲಿ ಹಿರಿಯ ಮತ್ತು ಕಿರಿಯ ಸದಸ್ಯರ ಸಂಗಮವಾಗಿದೆ. ಮುಂದಿನ ದಿನಗಳಲ್ಲಿ ರೋಟರಿ ಸಂಸ್ಥೆಗಳು ಮಹಿಳೆಯರು ಮತ್ತು ಯುವ ಪೀಳಿಗೆಯನ್ನು ಅತ್ಯಧಿಕ ಸಂಖ್ಯೆಯಲ್ಲಿ ಸದಸ್ಯರಾಗಿ ಆಹ್ವಾನಿಸ ಬೇಕಾದ ಹೊಣೆಗಾರಿಕೆ ಹೊಂದಿದೆ ಎಂದು ಹೇಳಿದರು. ಅಂತರ್ರಾಷ್ಟ್ರೀಯ ಮಟ್ಟದಲ್ಲಿ ಶೇ. 25 ರಷ್ಟು ಮಹಿಳಾ ಸದಸ್ಯೆಯರಿದ್ದರೆ, ಭಾರತದಲ್ಲಿ ಈ ಪ್ರಮಾಣ ಶೇ. 7 ರಷ್ಟಿದ್ದು, ರೋಟರಿ ಜಿಲ್ಲೆಯಲ್ಲಿ ಶೇ.2 ರಷ್ಟಿದೆ ಎಂದು ಪ್ರಶಾಂತ್ ಮಾಹಿತಿ ನೀಡಿದರು. ವೈದ್ಯರ ದಿನಾಚರಣೆ ಯಂದೇ ಮಡಿಕೇರಿ ರೋಟರಿ ಸಂಸ್ಥೆಗೆ ಡಾ. ಮೋಹನ್ ಅಪ್ಪಾಜಿ ಅಧ್ಯಕ್ಷರಾಗುತ್ತಿ ರುವ ಬಗ್ಗೆ ಡಾ. ಪ್ರಶಾಂತ್ ಹರ್ಷ ವ್ಯಕ್ತಪಡಿಸಿದರು.

ಮಡಿಕೇರಿಯ ರೋಟರಿ ಕ್ಲಬ್‍ನ ನೂತನ ಅಧ್ಯಕ್ಷರಾಗಿ ಹಿರಿಯ ವೈದ್ಯ ಡಾ. ಮೋಹನ್ ಅಪ್ಪಾಜಿ, ಕಾರ್ಯ ದರ್ಶಿಯಾಗಿ ಸಲೀಲಾ ಪಾಟ್ಕರ್ ಮತ್ತು ನೂತನ ಸಾಲಿನ ಪದಾಧಿಕಾರಿ ಗಳಿಗೆ ಮುಂದಿನ ಸಾಲಿನ ನಿಯೋಜಿತ ಜಿಲ್ಲಾ ಗವರ್ನರ್ ಎಂ.ಎಂ. ಸುರೇಶ್ ಚಂಗಪ್ಪ ಪದಗ್ರಹಣ ನೆರವೇರಿಸಿ ಶುಭ ಹಾರೈಸಿದರು. ವೇದಿಕೆಯಲ್ಲಿ ರೋಟರಿ ಝೋನಲ್ ಲೆಫ್ಟಿನೆಂಟ್ ಬಿ.ಎಸ್. ಚಂಗಪ್ಪ, ಹಿಂದಿನ ಸಾಲಿನ ಅಧ್ಯಕ್ಷ ಚೀಯಣ್ಣ, ಕಾರ್ಯದರ್ಶಿ ಅಜಯ್ ಸೂದ್ ಉಪಸ್ಥಿತರಿದ್ದರು. ಇದೇ ಸಂದರ್ಭ ಡಾ. ಜನಾರ್ಧನ್ ಮತ್ತು ಲಲಿತಾ ರಾಘವನ್ ಅವರನ್ನು ಮಡಿಕೇರಿ ರೋಟರಿಯ ನೂತನ ಸದಸ್ಯರಾಗಿ ಸೇರ್ಪಡೆಗೊಳಿಸ ಲಾಯಿತು. ಜಿಲ್ಲೆಯ ವಿವಿಧ ರೋಟರಿ ಕ್ಲಬ್‍ಗಳ ಸದಸ್ಯರು ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.