ಮಡಿಕೇರಿ, ಆ. 13: ಇಪ್ಪತೈದನೇ ವರ್ಷದ ರಾಜ್ಯಮಟ್ಟದ ಕೆಸರುಗದ್ದೆ ಓಟದ ಚಾಂಪಿಯನ್ ಆಗಿ ಭಾಗಮಂಡಲದ ಕಾವೇರಿಮನೆ ಚಂದ್ರಶೇಖರ್ ಚಾಂಪಿಯನ್ ಆಗಿ ಹೊರ ಹೊಮ್ಮಿದ್ದಾರೆ. ಭರವಸೆಯ ಓಟಗಾರ ಮಾದಾಪುರದ ಕುಟ್ಟಂಡ ಕುಟ್ಟಪ್ಪ ಎರಡನೇ ಸ್ಥಾನ ಗಳಿಸಿದರೆ, ಕಾಲೂರುವಿನ ಬಾಣೆಗದ್ದೆ ಸುಜಿತ್ ಮೂರನೇ ಸ್ಥಾನಗಳಿಸಿದ್ದಾರೆ.

ಯುವ ಸಬಲೀಕರಣ ಮತ್ತು ಕ್ರೀಡಾ ಇಲಾಖೆ, ನೆಹರೂ ಯುವ ಕೇಂದ್ರ, ಜಿಲ್ಲಾ ಪಂಚಾಯತ್, ಯೂತ್ ಹಾಸ್ಟೆಲ್ ಅಸೋಸಿಯೇಶನ್ ಆಫ್ ಇಂಡಿಯಾ, ಜಿಲ್ಲಾ ಹಾಗೂ ಮಡಿಕೇರಿ ತಾಲೂಕು ಯುವ ಒಕೂಟ್ಟದ ಆಶ್ರಯದಲ್ಲಿ 25ನೇ ವರ್ಷದ ಬೆಳ್ಳಿ ಮಹೋತ್ಸವದ ಅಂಗವಾಗಿ ಕಗ್ಗೋಡ್ಲುವಿನ ದಿ. ಸಿ.ಡಿ. ಬೋಪಯ್ಯ ಅವರ ಗದ್ದೆಯಲ್ಲಿ ನಡೆದ ರಾಜ್ಯಮಟ್ಟದ ಕೆಸರುಗದ್ದೆ ಓಟ ಸಾರ್ವಜನಿಕ ಪುರುಷರ ವಿಭಾಗದಲ್ಲಿ ಕಾವೇರಿಮನೆ ಚಂದ್ರಶೇಖರ್ ಪ್ರಥಮ ಸ್ಥಾನದೊಂದಿಗೆ ಚಾಂಪಿಯನ್ ಪಟ್ಟ ಗಳಿಸಿದರು. ಚಂದ್ರಶೇಖರ್ ಸತತ ಎರಡನೇ ಬಾರಿಗೆ ಚಾಂಪಿಯನ್ ಆಗಿ ಹೊರ ಹೊಮ್ಮಿದರು. ಈ ಹಿಂದೆ ಸತತ 8 ವರ್ಷಗಳ ಕಾಲ ಚಾಂಪಿಯನ್ ಆಗಿದ್ದ ಕುಟ್ಟಂಡ ಕುಟ್ಟಪ್ಪ ಈ ಬಾರಿ ಎರಡನೇ ಸ್ಥಾನಕ್ಕೆ ತೃಪ್ತಿಪಟ್ಟುಕೊಂಡರು. ಡೆಂಗಿ ಜ್ವರದಿಂದ ಬಳಲುತ್ತಿದ್ದು, ವಿಶ್ರಾಂತಿಯಲ್ಲಿರುವ ಕುಟ್ಟಪ್ಪ ಅನಾರೋಗ್ಯವನ್ನು ಕೂಡ ಲೆಕ್ಕಿಸದೆ ಭಾಗವಹಿಸಿ ಕ್ರೀಡಾಸ್ಪೂರ್ತಿ ಮೆರೆದರು. ಮೂರನೇ ಸ್ಥಾನವನ್ನು ಬಾಣೆಗದ್ದೆ ಸುಜಿತ್ ಪಡೆದುಕೊಂಡರು. ಸಾರ್ವಜನಿಕ ಮಹಿಳೆಯ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ಭಾಗವಹಿಸಿದ ಕಲ್ಲುಗುಂಡಿಯ ಶ್ರೀಜಾ ಪ್ರಥಮ ಸ್ಥಾನ ಪಡೆದರೆ, ಲಲಿತ ಎರಡನೇ ಸ್ಥಾನ ಪಡೆದರು.

ವನಿತೆಯರ ವಿಭಾಗದಲ್ಲಿ ಭಾಗಮಂಡಲ ಕಾವೇರಿ ಕಾಲೇಜಿನ ವಿದ್ಯಾರ್ಥಿನಿ ಜಿ.ಜಿ. ಲಶಿತಾ ಪ್ರಥಮ ಸ್ಥಾನ ಪಡೆದರೆ, ಧನ್ಯ ದ್ವಿತೀಯ ಸ್ಥಾನ ಪಡೆದರು.

ಹಗ್ಗ ಜಗ್ಗಾಟ ರೋಚಕತೆಯಿಂದ ಕೂಡಿದ್ದ ಹಗ್ಗ ಜಗ್ಗಾಟದ ಪರುಷರ ವಿಭಾಗದಲ್ಲಿ ಇದೇ ಪ್ರಥಮ ಬಾರಿಗೆ ಕಗ್ಗೋಡ್ಲುವಿನ ಅಂಬೇಡ್ಕರ್ ಯುವಕ ಸಂಘ ತಂಡ ವಿಜಯಿಯಾದರೆ, ಮದೆನಾಡು ಕಾಫಿ ಲಿಂಕ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ನೆರೆಯ ದ.ಕ. ಜಿಲ್ಲೆಯ ಬಲಿಷ್ಠ ಕ್ರೀಡಾಳುಗಳನ್ನು ಹೊಂದಿದ್ದ ಎರಡೂ ತಂಡಗಳು ತೀವ್ರ ಪೈಪೋಟಿ ನೀಡಿದವು.

ಹತ್ತು ನಿಮಿಷಗಳ ಕಾಲಾವಕಾಶ ದೊಂದಿಗೆ ನಡೆದ ಸ್ಪರ್ಧೆಯಲ್ಲಿ ಕೇವಲ ಒಂದೆರಡು ಇಂಚುಗಳಷ್ಟು ಮಾತ್ರ ಹಗ್ಗ ಅತ್ತಿಂದಿತ್ತ ಕದಲುತ್ತಿತ್ತು. ಪ್ರೇಕ್ಷಕರನ್ನು ಉತ್ಸುಕತೆಯ ತುತ್ತ ತುದಿಯಲ್ಲಿ ನಿಲ್ಲಿಸಿದ ಉಭಯ ತಂಡಗಳ ಪೈಕಿ ಕಾಲಾವಕಾಶದ ನಿಯಮಾನುಸಾರ ಕಗ್ಗೋಡ್ಲು ತಂಡ ವಿಜಯಿಯಾಯಿತು. ಕಗ್ಗೋಡ್ಲುವಿನಲ್ಲಿ ಸಂಭ್ರಮ ಮನೆ ಮಾಡಿತು.

ಮಹಿಳೆಯರ ವಿಭಾಗದಲ್ಲಿ ಈ ಬಾರಿ ಕೂಡ ಮುತ್ತಾರ್ಮುಡಿಯ ಕನ್ನಿಕಾಪರಮೇಶ್ವರಿ ಯುವತಿ ಮಂಡಳಿ ತಂಡ ಪ್ರಥಮ ಸ್ಥಾನ ಗಳಿಸಿದರೆ, ಇದೇ ಪ್ರಥಮ ಬಾರಿಗೆ ಭಾಗವಹಿಸಿದ ಕಲ್ಲುಗುಂಡಿಯ ಫಿಲೋಮಿನಾ ತಂಡ ದ್ವಿತೀಯ ಸ್ಥಾನ ಗಳಿಸಿತು.

ಇದೇ ಪ್ರಥಮ ಬಾರಿಗೆ ಆಯೋಜನೆ ಮಾಡಿದ್ದ ಕಾಲ್ಚೆಂಡು ಪಂದ್ಯಾವಳಿಯಲ್ಲಿ ದಾಖಲೆಯೆಂಬಂತೆ ಒಟ್ಟು 60 ತಂಡಗಳು ಭಾಗವಹಿಸಿದ್ದವು. ಪಂದ್ಯಾವಳಿ ನಡೆಸುವದೇ ಆಯೋಜಕರಿಗೆ ತಲೆನೋವಾಗಿ ಪರಿಣಮಿಸಿತ್ತು. ಅಂತಿಮವಾಗಿ ಈ ಪಂದ್ಯಾವಳಿಯಲ್ಲಿ ಕುಂಜಿಲನ ಲಕ್ಕಿ ಬಾಯ್ಸ್ ತಂಡ ವಿಜಯಿಯಾದರೆ, ಕುಂಜಿಲದ ಲಕ್ಕಿ ಬ್ರದರ್ಸ್ ತಂಡ ದ್ವಿತೀಯ ಸ್ಥಾನ ಗಳಿಸಿತು. ವಾಲಿಬಾಲ್ ಪಂದ್ಯಾವಳಿ ಯಲ್ಲಿ ಬೇಂಗೂರಿನ ಕೆ.ಜಿ.ಎನ್. ತಂಡ ಜಯಗಳಿಸಿದರೆ, ಎಮ್ಮೆಮಾಡು ತಂಡ ದ್ವಿತೀಯ ಸ್ಥಾನ ಗಳಿಸಿತು.

ಸಾಂಪ್ರದಾಯಿಕ ಓಟ

ಸ್ಥಳೀಯರಿಗಾಗಿ ಏರ್ಪಡಿಸಿದ್ದ ಸಾಂಪ್ರದಾಯಿಕ ನಾಟಿ ಓಟ ಸ್ಪರ್ಧೆಯಲ್ಲಿ ಚೇತನ್ ಕಗ್ಗೋಡ್ಲು ಪ್ರಥಮ, ಶಶಿ ದ್ವಿತೀಯ ಹಾಗೂ ಅಜಿತ್ ತೃತೀಯ ಸ್ಥಾನ ಗಳಿಸಿದರು.

ಸಮಾರೋಪ

ಸಂಜೆ ನಡೆದ ಸಮಾರೋಪ ಸಮಾರಂಭ ಹಾಗೂ ಬಹುಮಾನ ವಿತರಣಾ ಕಾರ್ಯಕ್ರಮದಲ್ಲಿ ಮಾತನಾಡಿದ ದಾನಿ, ಸಮಾಜಸೇವಕ ಬಿದ್ದಾಟಂಡ ಪ್ರದೀಪ್ ಅವರು ಯುವ ಒಕ್ಕೂಟದವರು 25ನೇ ವರ್ಷದ ಕೆಸರುಗದ್ದೆ ಕ್ರೀಡೋತ್ಸವದಲ್ಲಿ ಹಲವಷ್ಟು ಮಂದಿ ಪ್ರತಿಭೆಗಳಿಗೆ ಅವಕಾಶ ಕಲ್ಪಿಸಿದ್ದಾರೆ. ಜಿಲ್ಲೆಯಲ್ಲಿ ಕ್ರೀಡಾಪಟುಗಳು ಹೆಚ್ಚಾಗುತ್ತಿದ್ದಾರೆ. ಕ್ರೀಡೆ ಇಲ್ಲಿನವರಿಗೆ ರಕ್ತಗತವಾಗಿ ಬಂದಿದೆ ಎಂದರು. ಜಿಲ್ಲೆಯಲ್ಲಿ ಬೇರೆ ಎಲ್ಲ ಸಮಯದಲ್ಲೂ ಕ್ರೀಡಾಕೂಟಗಳು ನಡೆಯುತ್ತಿದ್ದವು. ಆದರೆ ಮಳೆಗಾಲದಲ್ಲಿ ಮಾತ್ರ ಇರಲಿಲ್ಲ. ಇದೀಗ ಮಳೆಗಾಲ ಸೇರಿದಂತೆ ವರ್ಷಂಪೂರ್ತಿ ಕ್ರೀಡಾಕೂಟಗಳು ನಡೆಯುತ್ತಿದ್ದು, ಕಗ್ಗೋಡ್ಲುವಿನ ಕ್ರೀಡಾಕೂಟ ಕೆಸರುಗದ್ದೆ ಒಲಂಪಿಕ್ಸ್ ಎಂದೇ ಹೇಳಬಹುದೆಂದರು. ಕ್ರೀಡೆ ಮನೋಲ್ಲಾಸ, ದೇಹದಾಢ್ಯದೊಂದಿಗೆ ಮನರಂಜನೆ ನೀಡುತ್ತದೆಂದರು.

ಪೊಲೀಸ್ ವರಿಷ್ಠಾಧಿಕಾರಿ ಡಾ. ರಾಜೇಂದ್ರ ಪ್ರಸಾದ್ 15 ವರ್ಷಗಳ ಹಿಂದೆ ಡಿವೈಎಸ್ಪಿ ಆಗಿದ್ದಾಗ ಕ್ರೀಡೋತ್ಸವವನ್ನು ಉದ್ಘಾಟನೆ ಮಾಡಿದ್ದನ್ನು ನೆನಪಿಸಿಕೊಂಡರು. ಕೆಸರುಗದ್ದೆ ಕ್ರೀಡೆಯಲ್ಲಿ ಆಟಗಾರರಿಗೂ ನೋಡುಗರಿಗೂ ಮನರಂಜನೆ ದೊರಕುತ್ತದೆ ಎಂದ ಅವರು 365 ದಿನಗಳೂ ಆಟೋಟಗಳು ನಡೆಯುವ ಕೊಡಗು ಜಿಲ್ಲೆ ಕ್ರೀಡೆಯ ರಾಜಧಾನಿ ಎಂದು ಬಣ್ಣಿಸಿದರು. ಇಲ್ಲಿನ ಕ್ರೀಡಾಪಟುಗಳು ಒಲಂಪಿಕ್ಸ್‍ನಲ್ಲೂ ಭಾಗವಹಿಸುತ್ತಿರುವದು ಶ್ಲಾಘನೀಯ ವಿಚಾರ. ಕ್ರೀಡಾಪಟುಗಳಿಗೆ ಪ್ರೋತ್ಸಾಹ ನೀಡಬೇಕು. ದೇಶಕ್ಕೆ ಕೀರ್ತಿ ತರುವಂತಾಗಬೇಕೆಂದು ಹೇಳಿದರು.

ಅಧ್ಯಕ್ಷತೆ ವಹಿಸಿದ್ದ ತಾ.ಪಂ. ಅಧ್ಯಕ್ಷೆ ತೆಕ್ಕಡೆ ಶೋಭಾ ಮೋಹನ್ ಮಾತನಾಡಿ, ಎಲ್ಲರೂ ಗೆಲ್ಲಬೇಕೆಂಬ ಆಸೆಯೊಂದಿಗೆ ಕ್ರೀಡೆಯಲ್ಲಿ ಭಾಗವಹಿಸುತ್ತಾರೆ. ಆದರೆ, ಸೋತಾಗ ಬೇಸರ ಮಾಡಿಕೊಳ್ಳಬಾರದು ಎಂದು ಹೇಳಿದರು. ಇದೀಗ ಕ್ರೀಡಾಕೂಟ ಆಯೋಜನೆ ಮಾಡುವದು ಕಷ್ಟಕರ ವಿಚಾರವಾಗಿದೆ. ತಾ. ಪಂ. ವತಿಯಿಂದ ಸಹಕಾರ ನೀಡುವದಾಗಿ ಭರವಸೆಯಿತ್ತರು. ಗದ್ದೆಯಲ್ಲಿ ಸಿಗುವ ಮನರಂಜನೆ ಬೇರೆಲ್ಲೂ ಸಿಗುವದಿಲ್ಲವೆಂದು ಹೇಳಿದರು.

ವೇದಿಕೆಯಲ್ಲಿ ತಾ.ಪಂ. ಸದಸ್ಯೆ ತುಂತಜ್ಜಿರ ಕುಮುದ ರಶ್ಮಿ, ಮೇಕೇರಿ ಗ್ರಾ.ಪಂ. ಅಧ್ಯಕ್ಷೆ ಜಯಂತಿ, ಉಪಾಧ್ಯಕ್ಷ ಭೀಮಯ್ಯ, ಹಾಕತ್ತೂರು ಗ್ರಾ.ಪಂ. ಅಧ್ಯಕ್ಷೆ ಶಾರದಾ ರಾಮಕೃಷ್ಣ, ರೋಟರಿ ಮಿಸ್ಟಿಹಿಲ್ಸ್ ಅಧ್ಯಕ್ಷ ಮುಳಿಯ ಕೇಶವ ಭಟ್, ಮಡಿಕೇರಿ ತಾಲೂಕು ಕನ್ನಡ ಸಾಹಿತ್ಯ ಪರಿಷತ್ತು ಅಧ್ಯಕ್ಷ ಕುಡೆಕಲ್ ಸಂತೋಷ್, ಡಿವೈಎಸ್ಪಿ, ವೃತ್ತ ನಿರೀಕ್ಷಕರು ಉಪಸ್ಥಿತರಿದ್ದರು.

ಜಿಲ್ಲಾ ಯುವ ಒಕ್ಕೂಟದ ಅಧ್ಯಕ್ಷ ಮಂಡುವಂಡ ಜೋಯಪ್ಪ ಸ್ವಾಗತಿಸಿದರೆ, ತಾಲೂಕು ಒಕ್ಕೂಟದ ಅಧ್ಯಕ್ಷ ರಮೇಶ್ ಆಚಾರಿ ನಿರೂಪಿಸಿದರು. ತಾಲೂಕು ಅಧ್ಯಕ್ಷ ನವೀನ್ ದೇರಳ, ಕೂಡಂಡ ಸಾಬ ಸುಬ್ರಮಣಿ, ಒಕ್ಕೂಟದ ಪದಾಧಿಕಾರಿ ಗಳು, ಸದಸ್ಯರುಗಳು ಸ್ವಯಂಸೇವಕ ರುಗಳಾಗಿ ತೊಡಗಿಸಿಕೊಂಡಿದ್ದರು.