ಸೋಮವಾರಪೇಟೆ,ಆ.21: ಇಲ್ಲಿನ ಕ್ಷೇತ್ರ ಶಿಕ್ಷಣಾಧಿಕಾರಿಗಳ ಕಚೇರಿಗೆ ತೆರಳುವ ರಸ್ತೆ ಗುಂಡಿಮಯವಾಗಿದ್ದು, ಅಪಾಯಕ್ಕೆ ಆಹ್ವಾನ ನೀಡುತ್ತಿದೆ. ಈ ರಸ್ತೆಯಲ್ಲಿ ಕಚೇರಿ ಕೆಲಸಕ್ಕೆ ದಿನಂಪ್ರತಿ ನೂರಾರು ಮಂದಿ ಆಗಮಿಸುತ್ತಿದ್ದು, ಸಂಚಾರ ದುಸ್ತರವಾಗಿದೆ. ತಕ್ಷಣ ರಸ್ತೆ ದುರಸ್ತಿ ಕಾಮಗಾರಿ ಪ್ರಾರಂಭಿಸಬೇಕೆಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.

ಇಲ್ಲಿನ ಚನ್ನಬಸಪ್ಪ ಸಭಾಂಗಣದ ಮುಂಭಾಗದಿಂದ ಇಳಿಜಾರು ರಸ್ತೆಯಲ್ಲಿ ಬಿಇಓ ಕಚೇರಿಗೆ ತೆರಳಬೇಕಾಗಿರುವ ರಸ್ತೆ ಕೆಸರು ಹಾಗು ಗುಂಡಿಮಯವಾಗಿದೆ. ಮಳೆ ಸುರಿದರೆ ಪ್ರಾಥಮಿಕ ಶಾಲಾ ಮೈದಾನದ ನೀರು ಈ ರಸ್ತೆಯಲ್ಲೇ ಹರಿಯುವದರಿಂದ ರಸ್ತೆ ಕೆಸರುಮಯವಾಗಿದೆ. ಶಿಕ್ಷಕರು ಈ ರಸ್ತೆ ಮೂಲಕ ಬಿಇಓ ಕಚೇರಿಗೆ ತೆರಳುತ್ತಾರೆ.

ದ್ವಿಚಕ್ರ ವಾಹನ ಚಾಲಕರು ಸರ್ಕಸ್ ಮಾಡಬೇಕಾಗಿದೆ. ಶಿಕ್ಷಕರು ಆಯ ತಪ್ಪಿ ಬಿದ್ದ ಘಟನೆಗಳು ನಡೆದಿವೆ. ಬಾಲಕಿಯರ ಹಾಸ್ಟೇಲ್‍ನ ವಿದ್ಯಾರ್ಥಿನಿಯರು ಕೆಸರುಮಯ ರಸ್ತೆಯಲ್ಲೆ ನಡೆದಾಡಬೇಕು. ಅಲ್ಲದೆ ಸಿಂಥೆಟಿಕ್ ಟರ್ಫ್ ಕಾಮಗಾರಿ ನಡೆಯುತ್ತಿರುವ ಮೈದಾನಕ್ಕೂ ಈ ರಸ್ತೆಯಲ್ಲೆ ತೆರಳಬೇಕಿದೆ.

ಈ ಭಾಗದ ಜನಪ್ರತಿನಿಧಿಗಳು ರಸ್ತೆಯ ದುಸ್ಥಿತಿಯನ್ನು ಕಣ್ಣಾರೆ ಕಂಡರೂ ಸಹ ಯಾವದೇ ಅನುದಾನ ನೀಡುತ್ತಿಲ್ಲ ಎಂದು ಸ್ಥಳೀಯರು ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಸಂಬಂಧಪಟ್ಟವರು ಈ ಬಗ್ಗೆ ಗಮನಹರಿಸಿ ರಸ್ತೆ ಸರಿಪಡಿಸುವಂತೆ ತಾಲೂಕು ಪ್ರಾಥಮಿಕ ಶಾಲಾ ಶಿಕ್ಷಕರ ಸಂಘದ ಅಧ್ಯಕ್ಷ ಮಂಜುನಾಥ್ ಸೇರಿದಂತೆ ಇತರರು ಒತ್ತಾಯಿಸಿದ್ದಾರೆ.