ಮಡಿಕೇರಿ, ಜು. 2: ಜಿಲ್ಲೆಯ ಜನರ ಕಣ್ಣಿಗೆ ಯಕ್ಷಗಾನ ಕಲೆ ಕಂಡು ಕಿವಿಗೆ ರುಚಿಸಿದರೂ ಹೃದಯಕ್ಕೆ ನಾಟದಿರುವದು ವಿಷಾದನೀಯ ಎಂದು ಮಡಿಕೇರಿ ಆಕಾಶವಾಣಿ ಉದ್ಘೋಷಕ ಸುಬ್ರಾಯ ಸಂಪಾಜೆ ಅಭಿಪ್ರಾಯಪಟ್ಟರು.

ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ವತಿಯಿಂದ ‘ಯಕ್ಷಗಾನ ಬಯಲಾಟ ರಂಗಸಂಭ್ರಮ-2016’ ಕಾರ್ಯಕ್ರಮದಲ್ಲಿ ಭಾಗವಹಿಸಿ ಅವರು ಭಾಷಣ ಮಾಡಿದರು.

ಯಕ್ಷಗಾನ ಸರ್ವಾಂಗೀಣವಾದ ಕಲೆಯಾಗಿದೆ. ಜಿಲ್ಲೆಯಲ್ಲಿ ಯಕ್ಷಗಾನ ಕಲೆಗೆ ನಿರೀಕ್ಷಿತ ಮಟ್ಟದಲ್ಲಿ ಪ್ರೋತ್ಸಾಹ ಸಿಗುತ್ತಿಲ್ಲ. ಲಲಿತ ಕಲೆಗೆ ಜಿಲ್ಲೆಯಲ್ಲಿ ಪ್ರೋತ್ಸಾಹ ಹಾಗೂ ಯಶಸ್ಸು ಸಿಗದಿರುವದು ನೋವಿನ ಸಂಗತಿಯಾಗಿದೆ. ಯಕ್ಷಗಾನವನ್ನು ಯಕ್ಷಗಾನ ಇಲ್ಲದಂತಹ ಭಾಗದ ಜನತೆಗೆ ಪರಿಚಯಿಸುವ ನಿಟ್ಟಿನಲ್ಲಿ ಇಂತಹ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದರು.

ಕೊಡಗಿನ ಜನರಿಗೆ ಗ್ರಾಮೀಣ ಭಾಗದಲ್ಲಿಯೂ ಯಕ್ಷಗಾನ ಕಲೆಯನ್ನು ಪರಿಚಯಿಸಿದ ಕೀರ್ತಿ ಮಹಾಬಲೇಶ್ವರ ಭಟ್ ಅವರಿಗೆ ಸಲ್ಲುತ್ತದೆ ಎಂದ ಸುಬ್ರಾಯ ಸಂಪಾಜೆ ಅವರು, ಜಿಲ್ಲೆಯ ಜನರಿಗೆ ಆಸಕ್ತಿಯನ್ನು ಬೆಳೆಸಿಕೊಳ್ಳುವ ಬಗೆ ಹೇಗೆ ಎಂಬ ಪ್ರಶ್ನೆಯಿದ್ದು, ಈ ಬಗ್ಗೆ ಅಕಾಡೆಮಿ ಕಾರ್ಯಪ್ರವೃತ್ತವಾಗಬೇಕಾಗಿದೆ ಎಂದರು.

ಕಾರ್ಯಕ್ರಮವನ್ನು ಉದ್ಘಾಟಿಸಿದ ಶ್ರೀ ಓಂಕಾರೇಶ್ವರ ದೇವಾಲಯದ ಪ್ರಧಾನ ಅರ್ಚಕ ನಾರಾಯಣ ಭಟ್ ಮಾತನಾಡಿ, ಯಕ್ಷಗಾನ ಪ್ರಾಚೀನ, ಪ್ರಸಿದ್ಧ ಹಾಗೂ ಎಲ್ಲರನ್ನೂ ಒಂದುಗೂಡಿಸುವ ಕಲೆಯಾಗಿದೆ. ಸಾಮಾನ್ಯ ಜನರಿಗೆ ಅರ್ಥವಾಗದ ವೇದ, ಪುರಾಣ, ಉಪನಿಷತ್ತುಗಳನ್ನು ಅಭಿನಯ, ನೃತ್ಯದ ಮೂಲಕ ಅರ್ಥ ಮಾಡಿಕೊಳ್ಳಲು ಸಾಧ್ಯವಿದೆ. ಕನ್ನಡ ಭಾಷೆಯನ್ನು ಉಳಿಸುವ, ಸ್ವಚ್ಛಗೊಳಿಸುವ ಕೆಲಸ ಯಕ್ಷಗಾನದ ಮೂಲಕ ಸಾಧ್ಯವಾಗುತ್ತಿದೆ. ಕಲೆಯಲ್ಲಿ ಆಸಕ್ತಿಯನ್ನು ಬೆಳೆಸಿಕೊಂಡು ಅವಿರತ ಶ್ರಮಿಸುತ್ತಿರುವವರನ್ನು ಸ್ಥಾನಮಾನ ನೀಡಿ ಗೌರವಿಸಬೇಕಾಗಿದೆ ಎಂದು ಹೇಳಿದರು.

ಕರ್ನಾಟಕ ಅರೆಭಾಷೆ ಸಾಹಿತ್ಯ ಮತ್ತು ಸಾಂಸ್ಕøತಿಕ ಅಕಾಡೆಮಿ ಅಧ್ಯಕ್ಷ ಕೊಲ್ಯದ ಗಿರೀಶ್ ಮುಖ್ಯ ಅತಿಥಿಗಳಾಗಿ ಭಾಗವಹಿಸಿ ಮಾತನಾಡಿ, ಯಕ್ಷಗಾನ ವಿಶಿಷ್ಟವಾದ ಸಾಂಪ್ರದಾಯಿಕ ಕಲೆ. ಜಿಲ್ಲೆಯಲ್ಲಿ ಪ್ರೋತ್ಸಾಹದ ಕೊರತೆಯಿದೆ. ಜಿಲ್ಲೆಯ ಜನರಲ್ಲಿ ಆಸಕ್ತಿ ಮೂಡಿಸುವ ಕಾರ್ಯ ಮಾಡಬೇಕಾಗಿದೆ. ಅರೆಭಾಷಾ ಸಾಹಿತ್ಯ ಅಕಾಡೆಮಿ ವತಿಯಿಂದ ಅರೆಭಾಷೆಯ ಯಕ್ಷಗಾನವನ್ನು ಪ್ರಸ್ತುತ ಪಡಿಸಲಾಗಿದೆ. ಅರೆಭಾಷೆ ಅಕಾಡೆಮಿಯ ಮೂಲಕ ಯಕ್ಷಗಾನವನ್ನು ಬೆಳೆಸುವ ನಿಟ್ಟಿನಲ್ಲಿ ಕಾರ್ಯ ಯೋಜನೆ ಹಮ್ಮಿಕೊಳ್ಳಲಾಗುವದು. ಯಕ್ಷಗಾನ ಎಲ್ಲೆಡೆ ಪಸರಿಸುವಂತಾಗಲಿ ಎಂದು ಹೇಳಿದರು.

ಉದ್ಯಮಿ ಜಯಂತಿ ಆರ್. ಶೆಟ್ಟಿ ಮಾತನಾಡಿ, ಕಲಾವಿದರು ಎಲೆಮರೆಯ ಕಾಯಿಯಂತಿದ್ದಾರೆ. ಅವರಿಗೆ ಪ್ರೋತ್ಸಾಹ ಅಗತ್ಯ. ಆಕಾಶವಾಣಿಯಲ್ಲಿ ಸಮಯ ನಿಗದಿಪಡಿಸಿ ಯಕ್ಷಗಾನವನ್ನು ಪ್ರಸ್ತುತ ಪಡಿಸಲು ಕ್ರಮ ಕೈಗೊಳ್ಳುವಂತೆ ಸುಬ್ರಾಯ ಸಂಪಾಜೆ ಅವರಿಗೆ ಸಲಹೆ ನೀಡಿದರು.

ಕಾರ್ಯಕ್ರಮದಲ್ಲಿ ಶ್ರೀ ಓಂಕಾರೇಶ್ವರ ಯಕ್ಷಗಾನ ಮಂಡಳಿ ಅಧ್ಯಕ್ಷ ಮಹಾಬಲೇಶ್ವರ ಭಟ್, ಲೆಕ್ಕಪರಿಶೋಧಕ ಈಶ್ವರ ಭಟ್ ಮಾತನಾಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಅಧ್ಯಕ್ಷ ನಾಡೋಜ ಬೆಳಗಲ್ಲು ವೀರಣ್ಣ ಅಧ್ಯಕ್ಷತೆ ವಹಿಸಿ ಮಾತನಾಡಿದರು. ವೇದಿಕೆಯಲ್ಲಿದ್ದ ಯಕ್ಷಗಾನ ಪ್ರಸಾದನ ಕಲಾವಿದ ದೇವಕಾನ ಕೃಷ್ಣಭಟ್ ಸುಮಾರು ರೂ. 25 ಸಾವಿರ ಮೌಲ್ಯದ ಯಕ್ಷಗಾನ ವೇಷಭೂಷಣವನ್ನು ಅಕಾಡೆಮಿಗೆ ಕೊಡುಗೆಯಾಗಿ ನೀಡಿದರು. ಕರ್ನಾಟಕ ಯಕ್ಷಗಾನ ಬಯಲಾಟ ಅಕಾಡೆಮಿ ಸದಸ್ಯ ತಾರಾನಾಥ ಏರ್ಕಾಡಿ ಸ್ವಾಗತಿಸಿದರು.