ಸುಂಟಿಕೊಪ್ಪ, ಜು. 2: ಕುಶಾಲನಗರ ಜಿ.ಪಂ. ಸದಸ್ಯ ಪಿ.ಎಂ. ಲತೀಫ್ ಅವರು ತನ್ನ ಕ್ಷೇತ್ರ ವ್ಯಾಪ್ತಿಯ ಗಿರಿಜನರ ಹಾಡಿಗೆ ಭೇಟಿ ನೀಡಿ ಕುಂದುಕೊರತೆಗಳನ್ನು ವಿಚಾರಿಸಿದರು. ಹಲವು ಸಮಸ್ಯೆಗಳನ್ನು ಕಂಡ ಅವರು ಹಂತ ಹಂತವಾಗಿ ಅಧಿಕಾರ ಅವಧಿಯಲ್ಲಿ ಮೂಲಭೂತ ಸೌಲಭ್ಯಗಳನ್ನು ಕಲ್ಪಿಸಿಕೊಡಲಾಗುವದು ಎಂದು ಭರವಸೆ ವ್ಯಕ್ತಪಡಿಸಿದರು.

ಮಾವಿನಹಳ್ಳ, ಕಬ್ಬಿನಗದ್ದೆ, ಹುದುಗೂರು ಹಾಗೂ ಕಟ್ಟೆಹಾಡಿ ಗಿರಿಜನರ ಸಮಸ್ಯೆಗಳನ್ನು ಆಲಿಸಿದ ಅವರು ಅಲ್ಲಿನ ಸ್ಥಿತಿಗತಿಗಳನ್ನು ಮನಗಂಡು ವಿಷಾದ ವ್ಯಕ್ತಪಡಿಸಿದರು.

ಹಾರಂಗಿ ಹಾಗೂ ಚಿಕ್ಲಿಹೊಳೆ ಜಲಾಶಯದ ಎಡದಂಡೆ ಬಲದಂಡೆ ನಾಲೆಗಳ ಸ್ವಚ್ಛತೆ ಹಾಗೂ ನಾಲೆಗಳ ದುರಸ್ತಿಪಡಿಸದೆ ಇರುವದರಿಂದ ರೈತರಿಗೆ ಸಮರ್ಪಕವಾಗಿ ನೀರು ದೊರೆತಿಲ್ಲ. ಕೃಷಿ ಚಟುವಟಿಕೆಗೆ ಹಿನ್ನಡೆಯಾಗಿದೆ.

ಅಧಿಕಾರಿಗಳ ನಿರ್ಲಕ್ಷ್ಯದಿಂದ ಫಲವತ್ತಾದ ಕೃಷಿ ಬರಡು ಭೂಮಿ ಆಗುವಂತಾಗಿದೆ. ಗುಡ್ಡೆಹೊಸೂರು ವಿಭಾಗದಲ್ಲಿ ರೈತರಿಗೆ ನೀರು ಹಾಯಿಸುವ ದಿಸೆಯಲ್ಲಿ ಕಳೆದ 20 ವರ್ಷಗಳ ಹಿಂದೆ ಈ ಭಾಗದ ಕೃಷಿ ಭೂಮಿ ವಶಪಡಿಸಿಕೊಂಡು ನಾಲೆಗಳನ್ನು ನಿರ್ಮಿಸಲಾಗಿದ್ದು ನಾಲೆಗಳಲ್ಲಿ ನೀರು ಹರಿಸಿಲ್ಲ. ಭೂಮಿ ಕಳೆದುಕೊಂಡ ರೈತರಿಗೆ ಪರಿಹಾರ ಮೊತ್ತ ನೀಡದೇ ಮೀನಾಮೇಷ ಎಣಿಸುತ್ತಿದ್ದು, ರೈತರ ಗೋಳು ಅಧಿಕಾರಿಗಳ ಗಮನಕ್ಕೆ ಬಾರದಿರುವದು ದುರಂತ ಎಂದರು.

ಗಿರಿಜನರಿಗೆ ಭೂಮಿ ಕೊಡಲು ಅರಣ್ಯದಿಂದ ಬೇರ್ಪಟ್ಟು ಸರ್ವೆ ಕಾರ್ಯ ನಡೆದು ಹಕ್ಕು ಪತ್ರಗಳು ದೊರೆತಲ್ಲಿ ಅವರಿಗೆ ಮೂಲಭೂತ ಸೌಲಭ್ಯ ಕೊಡಲು ಸಾಧ್ಯವಾಗಲಿದೆ. ಸರಕಾರದಿಂದ ದೊರೆಯಬೇಕಾದ ಸೌಲಭ್ಯವನ್ನು ಒದಗಿಸಿಕೊಡುವದಾಗಿ ಅವರ ಪರವಾಗಿ ಹೋರಾಟ ನಡೆಸುವದಾಗಿ ಆಶ್ವಾಸನೆ ನೀಡಿದರು.

ಈ ಸಂದರ್ಭ ಆರ್.ಕೆ. ಚಂದ್ರ, ಹಣ್ಣಪ್ಪ, ಅರುಣಾ, ವಿನ್ಸೆಂಟ್ ಹಾಗೂ ಹಾಡಿ ನಿವಾಸಿಗಳು ಇದ್ದರು.