ಕೂಡಿಗೆ, ಆ. 22: ಇಲ್ಲಿಗೆ ಸಮೀಪದ ಮುಳ್ಳುಸೋಗೆ ಗ್ರಾಮ ಪಂಚಾಯಿತಿ ಮಾಸಿಕ ಸಭೆಯು ಗ್ರಾ.ಪಂ. ಅಧ್ಯಕ್ಷೆ ಭವ್ಯ ಅವರ ಅಧ್ಯಕ್ಷತೆಯಲ್ಲಿ ನಡೆಯಿತು.

ಮುಳ್ಳುಸೋಗೆ ಗ್ರಾ. ಪಂ.ಯ ಆಡಳಿತ ಮಂಡಳಿಯು ಪ್ರಾರಂಭ ಗೊಂಡ ನಂತರದಿಂದ ಅನೇಕ ವಿಚಾರಗಳ ಬಗ್ಗೆ ಪರ-ವಿರುದ್ಧ ಚರ್ಚೆ, ಅಭಿವೃದ್ಧಿಗಳ ಹಿನ್ನಡೆಯ ವಿಚಾರವಾಗಿ ವಾದ-ವಿವಾದಗಳೇ ನಡೆಯುತ್ತಿದ್ದವು. ಆದರೆ ಸರ್ವ ಸದಸ್ಯರು ಸಭೆಗೆ ಹಾಜರಾಗಿ ಅಧ್ಯಕ್ಷರು ಹಾಗೂ ಉಪಾಧ್ಯಕ್ಷರು ನೂತನವಾಗಿ ಗ್ರಾ.ಪಂ.ಗೆ ಬಂದಿರುವ ಗ್ರಾಮ ಪಂಚಾಯಿತಿ ಅಭಿವೃದ್ಧಿ ಅಧಿಕಾರಿ ಸೇರಿದಂತೆ ಸದಸ್ಯರುಗಳು ಅಭಿವೃದ್ಧಿಯ ವಿಚಾರವಾಗಿ ಸುದೀರ್ಘ ಚರ್ಚೆ ನಡೆಸಿದರು.

ಮೊದಲಿಗೆ ಗ್ರಾ. ಪಂ.ಯ ಸದಸ್ಯರಾದ ಹರೀಶ್ ಹಾಗೂ ಜಗದೀಶ್ ಅವರು ಕಳೆದ ಆರು ತಿಂಗಳಿನಿಂದ ಬಾಕಿಯಿದ್ದ ವಿವಿಧ ಬಿಲ್ಲುಗಳ ವಿಲೇವಾರಿಯ ಬಗ್ಗೆ ಚರ್ಚಿಸಿದರು. ಈ ಬಿಲ್ಲುಗಳ ಬಗ್ಗೆ ಹಾಜರಿದ್ದ ಸದಸ್ಯರುಗಳು ಒಪ್ಪಿಗೆ ನೀಡುವದರ ಮೂಲಕ ಅನುಮೋದನೆ ದೊರೆಯಿತು.

ಮುಂದಿನ ದಿನಗಳಲ್ಲಿ ಗ್ರಾಮ ಪಂಚಾಯಿತಿ ವತಿಯಿಂದ ಎಲ್ಲಾ ವಾರ್ಡುಗಳಿಗೆ ಅನುಕೂಲಕರ ವಾಗುವ ರೀತಿಯಲ್ಲಿ ವಿವಿಧ ಕಾಮಗಾರಿಗಳು ಹಾಗೂ ಕಸ ವಿಲೇವಾರಿ, ಮೂಲಭೂತ ಸೌಕರ್ಯಗಳನ್ನು ಒದಗಿಸುವ ಬಗ್ಗೆ ಎಲ್ಲಾ ಸದಸ್ಯರುಗಳು ತಮ್ಮ ಅಭಿಪ್ರಾಯಗಳನ್ನು ಮಂಡಿಸಿ, ಮುಂದೆ ಗ್ರಾ.ಪಂ.ಯನ್ನು ಅಭಿವೃದ್ಧಿ ಯತ್ತ ಕೊಂಡೊಯ್ಯುವ ವಿಚಾರ ಗಳನ್ನು ಚರ್ಚಿಸಲಾಯಿತು. ಗ್ರಾಮ ಪಂಚಾಯಿತಿಯಲ್ಲಿ ಬಾಪೂಜಿ ಯೋಜನೆಗೆ ಚಾಲನೆ ನೀಡಲಾಯಿತು. ಅಲ್ಲದೆ, 14ನೇ ಹಣಕಾಸಿನ ವಿಚಾರವಾಗಿ ಚರ್ಚೆ ನಡೆದವು.

ಈ ಸಂದರ್ಭ ಗ್ರಾ. ಪಂ. ಅಧ್ಯಕ್ಷೆ ಭವ್ಯ ಮಾತನಾಡಿ, ಎಲ್ಲಾ ಗ್ರಾ. ಪಂ. ಸದಸ್ಯರ ಸಹಕಾರದೊಂದಿಗೆ ಗ್ರಾ.ಪಂ.ನ ಅಭಿವೃದ್ಧಿ ಕೆಲಸಗಳಿಗೆ ಸಹಕಾರ ನೀಡಬೇಕೆಂದರು.

ಗ್ರಾ.ಪಂ. ಅಭಿವೃದ್ಧಿ ಅಧಿಕಾರಿ ಸಂತೋಷ್, ಕಾಮಗಾರಿಯ ಬಿಲ್ಲುಗಳು ಹಾಗೂ ಇನ್ನಿತರ ವಿಷಯಗಳನ್ನು ಸಭೆಗೆ ಮಾಹಿತಿ ನೀಡಿದರು. ಸಾರ್ವಜನಿಕರ ಅಹವಾಲುಗಳ ಪತ್ರಗಳನ್ನು ಮಂಡಿಸಿದರು. ವಿಲೇವಾರಿ ಮಾಡಲು ಸದಸ್ಯರುಗಳು ಅಭಿವೃದ್ಧಿ ಅಧಿಕಾರಿಗೆ ಸೂಚಿಸಿದರು. ಗ್ರಾ.ಪಂ. ಉಪಾಧ್ಯಕ್ಷ ತಾರಾನಾಥ್ ಸೇರಿದಂತೆ ಸದಸ್ಯರು ಹಾಜರಿದ್ದರು.