ಮಡಿಕೇರಿ, ಜ 23: ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿಗಳ ತಂಡ ಕೊಡಗು ಜಿಲ್ಲೆಗೆ ಭೇಟಿ ನೀಡುವದರೊಂದಿಗೆ ಜಲಮೂಲಗಳ ರಕ್ಷಣೆಗೆ ಮುಂದಾಗಿದೆ. ಮಂಡಳಿಯ ಅಧ್ಯಕ್ಷ ಲಕ್ಷ್ಮಣ್, ಸದಸ್ಯ ಜೋಗೀರ ಜಿ. ಕಾವೇರಿಯಪ್ಪ ಮತ್ತು ಹಿರಿಯ ಅಧಿಕಾರಿಗಳು ಜಿಲ್ಲೆಯಲ್ಲಿ ವಿವಿಧ ರೆಸಾರ್ಟ್‍ಗಳಿಗೆ ದಿಢೀರ್ ಭೇಟಿ ನೀಡಿ ಮಂಡಳಿಯ ನಿಯಮ ಉಲ್ಲಂಘನೆಗಳ ಬಗ್ಗೆ ಪರಿಶೀಲನೆ ನಡೆಸಿದ್ದು ಜೀವನದಿ ಕಾವೇರಿ ರಕ್ಷಣೆ ಮಾಡಲು ಕಾರ್ಯಯೋಜನೆ ರೂಪಿಸಿದೆ.

ಕಾವೇರಿ ನದಿ ಮಾಲಿನ್ಯ ಗೊಳ್ಳುತ್ತಿರುವ ಬಗ್ಗೆ ಮಂಡಳಿಗೆ ಬಂದಿರುವ ಸಾರ್ವಜನಿಕ ದೂರಿನ ಹಿನ್ನೆಲೆಯಲ್ಲಿ ಜಿಲ್ಲೆಗೆ ಭೇಟಿ ನೀಡಿರುವ ತಂಡ ಮಡಿಕೇರಿ, ಭಾಗಮಂಡಲ, ತಲಕಾವೇರಿ, ಕಕ್ಕಬೆ ವ್ಯಾಪ್ತಿಯಲ್ಲಿ ರೆಸಾರ್ಟ್‍ಗಳಿಗೆ ಧಾಳಿ ನಡೆಸಿ ಪರಿಶೀಲನೆ ನಡೆಸಿದೆ ಜಿಲ್ಲೆಯಲ್ಲಿ ಹಲವೆಡೆ ಬೃಹತ್ ವಾಣಿಜ್ಯ ಕಟ್ಟಡಗಳು ತಲೆ ಎತ್ತುವದರೊಂದಿಗೆ ಪರಿಸರ ಹಾಗೂ ಜಲಮಾಲಿನ್ಯಕ್ಕೆ ಕಾರಣವಾಗುತ್ತಿದ್ದು,

(ಮೊದಲ ಪುಟದಿಂದ) ಇನ್ನೊಂದೆಡೆ ನದಿ ತಟಗಳಲ್ಲಿ ಅಕ್ರಮ ರೆಸಾರ್ಟ್‍ಗಳು ತಲೆ ಎತ್ತುತ್ತಿದ್ದು ಈ ಬಗ್ಗೆ ಮಂಡಳಿಗೆ ದೂರು ಬಂದಿರುವ ಹಿನ್ನಲೆಯಲ್ಲಿ ಕಾರ್ಯಾಚರಣೆ ನಡೆಸಲಾಗಿದೆ ಎಂದು ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.

ಮಂಡಳಿಯ ತಂಡ ಕಕ್ಕಬ್ಬೆಯ ಸಮೀಪ ನಿರ್ಮಾಣಗೊಂಡಿರುವ ರೆಸಾರ್ಟ್, ನದಿ ತಟವೊಂದರಲ್ಲಿ ನಿರ್ಮಾಣಗೊಂಡಿರುವ ರೆಸಾರ್ಟ್‍ಗಳಿಗೆ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ಈ ಸಂದರ್ಭ ಬಹುತೇಕ ರೆಸಾರ್ಟ್‍ಗಳು ಪರಿಸರ ಮಾಲಿನ್ಯ ಹಾಗೂ ಹಲವು ಇಲಾಖೆಗಳ ನಿಯಮಾವಳಿಗಳನ್ನು ಉಲ್ಲಂಘಿಸಿ ಅಕ್ರಮವಾಗಿ ರೆಸಾರ್ಟ್ ನಿರ್ಮಿಸಿರುವುದು ಹಾಗೂ ಜಲಮೂಲಗಳ ಸಂಪೂರ್ಣ ದುರ್ಬಳಕೆಯಾಗುತ್ತಿರುವದಾಗಿ ಲಕ್ಷ್ಮಣ್ ಮಾಹಿತಿ ನೀಡಿದ್ದಾರೆ.

ಸ್ಥಳೀಯ ಖಾಸಗಿ ರೆಸಾರ್ಟ್ ಒಂದರಲ್ಲಿ ಘಟ್ಟಗಳಿಂದ ಇಳಿದು ಬರುತ್ತಿರುವ ಝರಿಗಳ ಮಾರ್ಗಗಳಿಗೆ ತಡೆಯೊಡ್ಡಿ ಜಲಮಾರ್ಗವನ್ನೇ ಬದಲಾಯಿಸಲಾಗಿದೆ. ಕೆಲವೆಡೆ ಕಾಂಕ್ರೀಟ್ ತಡೆಗೋಡೆ ನಿರ್ಮಾಣ ಮಾಡಿದ್ದು ಸರಕಾರದ ಕಾಯ್ದೆಯನ್ನು ಸಂಪೂರ್ಣ ಉಲ್ಲಂಘನೆ ಮಾಡಿರುವದು ಕಂಡುಬಂದಿದೆ. ಅಧಿಕೃತ ದಾಖಲೆಗಳಿಲ್ಲದೆ ಪರಿಸರ ಹಾನಿಗೆ ಕಾರಣವಾಗಿದ್ದು ಈ ಬಗ್ಗೆ ಇಲಾಖೆಯಿಂದ ನೋಟೀಸ್ ನೀಡಿ ಮುಂದೆ ಕಾನೂನು ರೀತಿ ಕ್ರಮಕೈಗೊಳ್ಳಲಾಗುವದು ಎಂದಿದ್ದಾರೆ.

ಅಭಯಾರಣ್ಯಗಳ ನಡುವೆ ನಿಯಮ ಉಲ್ಲಂಘಿಸಿ ರೆಸಾರ್ಟ್ ನಿರ್ಮಾಣ, ಜಲಮೂಲಗಳಿಗೆ ತಡೆಯೊಡ್ಡಿರುವದನ್ನು ತಕ್ಷಣ ತೆರವುಗೊಳಿಸಲು ಇಲಾಖೆಯಿಂದ ಕಟ್ಟುನಿಟ್ಟಿನ ಕ್ರಮಕ್ಕೆ ಆದೇಶ ನೀಡಿರುವದಾಗಿ ಅವರು ತಿಳಿಸಿದ್ದಾರೆ.

ತ್ಯಾಜ್ಯ ವಸ್ತುಗಳು, ಕಲುಷಿತ ನೀರು ನೇರವಾಗಿ ಜಲಮೂಲಗಳಿಗೆ ಸೇರಿ ನದಿಯ ನೀರನ್ನು ಮಾಲಿನ್ಯಗೊಳಿಸುತ್ತಿರುವ ಬಹುತೇಕ ರೆಸಾರ್ಟ್‍ಗಳಿಗೆ ತಕ್ಷಣದಿಂದಲೇ ಸ್ಥಗಿತಗೊಳಿಸಲು ಸೂಚನೆ ನೀಡಲಾಗಿದೆ. ರೆಸಾರ್ಟ್ ಮಾಲೀಕರಿಗೆ ಸಮರ್ಪಕ ದಾಖಲೆಗಳನ್ನು ಒದಗಿಸುವಂತೆ ಸೂಚನೆ ನೀಡಲಾಗಿದೆ. ಮಾಲಿನ್ಯ ನಿಯಂತ್ರಣ ಮಂಡಳಿಯಿಂದ ಅನುಮತಿ ಇಲ್ಲದೆ ನಿರ್ಮಾಣಗೊಂಡಿರುವ ಬೃಹತ್ ರೆಸಾರ್ಟ್‍ಗಳ ಮೇಲೆ ಧಾಳಿ ಮುಂದುವರೆಯಲಿದ್ದು ಕಾಯ್ದೆ ಉಲ್ಲಂಘಿಸಿರುವ ಪ್ರಕರಣಗಳ ಮೇಲೆ ಕ್ರಮ ತೆಗೆದುಕೊಳ್ಳಲಾಗುವದು ಎಂದು ತಿಳಿಸಿರುವ ಲಕ್ಷ್ಮಣ್ ಜಲಮೂಲಗಳಿಗೆ ತಡೆಯೊಡ್ಡಿರುವದನ್ನು ತಕ್ಷಣ ತೆರವುಗೊಳಿಸಲು ಸ್ಥಳದಲ್ಲೇ ನಿರ್ದೇಶನ ನೀಡಲಾಗಿದೆ ಎಂದು ತಿಳಿಸಿದ್ದಾರೆ. ಇದರೊಂದಿಗೆ ಮೂಲ ಕಾವೇರಿಯಿಂದ ರಾಜ್ಯದ ಗಡಿ ತನಕ ನದಿ ತಟಗಳ ಕಲುಷಿಕೆ, ಮಾಲಿನ್ಯತೆ ಮತ್ತು ನೀರಿನ ಗುಣಮಟ್ಟದ ಬಗ್ಗೆ ವಾಸ್ತವ ಅಂಶ ಅರಿಯುವ ನಿಟ್ಟಿನಲ್ಲಿ ಮಂಡಳಿಯ ಅಧಿಕಾರಿಗಳು ಕಾವೇರಿ ನದಿ ಸ್ವಚ್ಛತಾ ಆಂದೋಲನ ಸಮಿತಿಯ ಸಹಯೋಗದೊಂದಿಗೆ ವಾಸ್ತವ ಅಂಶದ ಬಗ್ಗೆ ವರದಿ ಕಲೆ ಹಾಕಲಿದೆ. ಈ ಸಂಬಂಧ ಅಧಿಕಾರಿಗಳಿಗೆ ಮಂಡಳಿಯಿಂದ ಸೂಚನೆ ನೀಡಲಾಗಿದೆ. ಮುಂದಿನ 3 ತಿಂಗಳ ಒಳಗೆ ನದಿಯ ವಾಸ್ತವಾಂಶ ವರದಿಯನ್ನು ಮಂಡಳಿಗೆ ನೀಡುವಂತೆ ಆದೇಶ ನೀಡಲಾಗಿದೆ ಎಂದು ಲಕ್ಷ್ಮಣ್ ಸುದ್ದಿಗಾರರಿಗೆ ತಿಳಿಸಿದ್ದಾರೆ.

ಕೆಲವೆಡೆ ಸರಕಾರಿ ಜಾಗಗಳನ್ನು ಅಕ್ರಮವಾಗಿ ಒತ್ತುವರಿ ಮಾಡುವದರೊಂದಿಗೆ ಅನಧಿಕೃತ ಕಟ್ಟಡಗಳು ತಲೆ ಎತ್ತಿದ್ದು ಈ ಮೂಲಕ ಜಿಲ್ಲೆಯ ಪರಿಸರ ನಾಶಕ್ಕೆ ಅವಕಾಶ ಕಲ್ಪಿಸಿದಂತಾಗಿದೆ ಎಂದು ಸ್ಥಳಕ್ಕೆ ತೆರಳಿದ ಸುದ್ದಿಗಾರರಿಗೆ ತಿಳಿಸಿರುವ ಮಂಡಳಿಯ ಸದಸ್ಯ ಜೋಗೀರ ಕಾವೇರಿಯಪ್ಪ, ಇಲಾಖೆಯ ಅಧಿಕಾರಿಗಳು ಜಿಲ್ಲೆಯ ರೆಸಾರ್ಟ್‍ಗಳಿಗೆ ಭೇಟಿ ನೀಡಿ ಹಲವೆಡೆ ಶೋಕಾಸ್ ನೋಟೀಸ್ ನೀಡಲಾಗಿದೆ. ನಿಯಮ ಉಲ್ಲಂಘನೆ ಕಂಡಲ್ಲಿ ಕಟ್ಟುನಿಟ್ಟಿನ ಕ್ರಮಕೈಗೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದಿದ್ದಾರೆ.

ತವರಿನಲ್ಲಿ ಕಾವೇರಿ ನದಿ ಕಲುಷಿತಗೊಳಿಸುವ ಪ್ರಕರಣಗಳು ಬೆಳಕಿಗೆ ಬಂದಿದ್ದು ಅಂತಹ ಜನರ ಮೇಲೆ ಪೊಲೀಸ್ ಮೊಕದ್ದಮೆ ಮೂಲಕ ಈಗಾಗಲೆ ಕ್ರಮ ಕೈಗೊಳ್ಳಲಾಗಿದೆ ಎಂದು ಅವರು ತಿಳಿಸಿದ್ದು, ಜಿಲ್ಲಾಧಿಕಾರಿಗಳೂ ಕೂಡ ಈ ನಿಟ್ಟಿನಲ್ಲಿ ಸಂಪೂರ್ಣ ಸಹಕಾರ ನೀಡುತ್ತಿದ್ದಾರೆ ಎಂದು ತಿಳಿಸಿದ್ದಾರೆ.

ಕಾರ್ಯಾಚರಣೆ ಸಂದರ್ಭ ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿಯ ಮೈಸೂರು ವಲಯದ ಹಿರಿಯ ಪರಿಸರ ಅಧಿಕಾರಿ ಲಿಂಗರಾಜು, ಕೊಡಗು ಜಿಲ್ಲಾ ಪರಿಸರ ಅಧಿಕಾರಿ ಜಿ.ಗಣೇಶನ್, ಕಾವೇರಿ ನದಿ ಸ್ವಚ್ಚತಾ ಆಂದೋಲನ ಸಮಿತಿ ರಾಜ್ಯ ಸಂಚಾಲಕ ಎಂ.ಎನ್. ಚಂದ್ರಮೋಹನ್ ಇದ್ದರು.