ಮಡಿಕೇರಿ, ಜ. 23: ರಾಜ್ಯ ಬಾಲಭವನ ಸೊಸೈಟಿ, ಬೆಂಗಳೂರು ಹಾಗೂ ಜಿಲ್ಲಾ ಬಾಲಭವನದ ವತಿಯಿಂದ ಜೂನಿಯರ್ ಕಾಲೇಜು ಮೈದಾನದಲ್ಲಿ ಮಕ್ಕಳ ನಾಟಕೋತ್ಸವ ‘ಅಭಿರಂಗ’ ಕಾರ್ಯಕ್ರಮವನ್ನು ಆಯೋಜಿಸಲಾಗಿತ್ತು. ಲೋಕೇಶ್ ಊರುಬೈಲು ನಿರ್ದೇಶಿಸಿರುವ ನಾಟಕಗಳಾದ ‘ನಾವು ಮನುಜರು’ ಮತ್ತು ‘ಬಾಲ ಕಾರ್ಮಿಕ ಪದ್ಧತಿ ನಿರ್ಮೂಲನೆ’ ಕುರಿತಾದ ಎರಡು ಬೀದಿ ನಾಟಕವನ್ನು ಬಾಲಕರ ಬಾಲಮಂದಿರದ ಮಕ್ಕಳು ಪ್ರದರ್ಶಿಸಿದರು.

ಶಕ್ತಿ ದಿನ ಪತ್ರಿಕೆಯ ಸಂಪಾದಕ ಬಿ.ಜಿ. ಅನಂತಶಯನ, ಬಾಲಕರ ಬಾಲಮಂದಿರದ ಅಧೀಕ್ಷಕ ಬಿ.ಡಿ. ರವೀಂದ್ರ, ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಸಿಬ್ಬಂದಿ, ಉಪ ನಿರ್ದೇಶಕರ ಕಚೇರಿಯ ಸಿಬ್ಬಂದಿ, ಪೊಲೀಸ್ ಇಲಾಖಾ ಸಿಬ್ಬಂದಿ ಮತ್ತು ಇತರರು ಹಾಜರಿದ್ದರು

ಬಾಲಕಿಯರ ಬಾಲಮಂದಿರದ ಆವರಣದಲ್ಲಿ ಬಾಲಕಿಯರ ಬಾಲಮಂದಿರದ ಮಕ್ಕಳಿಂದ ಮೈಸೂರಿನ ರಂಗಾಯಣ ನಾಟಕ ಸಂಸ್ಥೆಯ ಕಲಾವಿದರಾದ ಪ್ರವೀಣ ಬೆಳ್ಳಿ, ಮತ್ತು ನಾರಾಯಣ ದೇಸಾಯಿ ನಿರ್ದೇಶಿಸಿದ ಎರಡು ನಾಟಕಗಳಾದ ‘ಹಾರೋಣ ಬಾ’ ಹಾಗೂ ‘ಕಸದ ಭೂತ’ ಪ್ರದರ್ಶಿಸಲಾಯಿತು. ಈ ಕಾರ್ಯಕ್ರಮದಲ್ಲಿ ವಿಶೇಷ ಚೇತನರ ಮತ್ತು ಹಿರಿಯ ನಾಗರಿಕ ಸಬಲೀಕರಣ ಇಲಾಖೆ ಆಯುಕ್ತ ಗೋವಿಂದರಾಜು ಕಾರ್ಯಕ್ರಮವನ್ನು ಉದ್ಘಾಟಿಸಿದರು. ಕೊಡಗು ಜಿಲ್ಲಾ ಮಕ್ಕಳ ಸಮಿತಿ ಅಧ್ಯಕ್ಷೆ ಆರತಿ ಸೊಮಯ್ಯ, ಸದಸ್ಯರಾದ ಅನಿತಾ ಕಾವೇರಪ್ಪ, ಜಗದೀಶ್ ಹಾಜರಿದ್ದರು. ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ ಉಪನಿರ್ದೇಶಕಿ ಮುಮ್ತಾಜ್ ನಿರೂಪಿಸಿದರು.