ಮಡಿಕೇರಿ, ಜ. 23: ನಗರದ ಸ್ಟೋನ್ ಹಿಲ್‍ನಲ್ಲಿರುವ ತ್ಯಾಜ್ಯ ಸಂಸ್ಕರಣಾ ಘಟಕದಲ್ಲಿ ವೈಜ್ಞಾನಿಕ ರೀತಿ ತ್ಯಾಜ್ಯ ಸಂಸ್ಕರಣೆ ಮಾಡುವದು ಹಾಗೂ ತ್ಯಾಜ್ಯಗಳಿಂದ ಪರಿಸರ ಮಾಲಿನ್ಯ ತಡೆಯಲು ಕ್ರಮ ಕೈಗೊಳ್ಳಲು 1 ಕೋಟಿ ರೂ. ವಿಶೇಷ ಅನುದಾನ ನೀಡುವದಾಗಿ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಅಧ್ಯಕ್ಷ ಲಕ್ಷ್ಮಣ್ ತಿಳಿಸಿದ್ದಾರೆ.ತ್ಯಾಜ್ಯ ಸಂಸ್ಕರಣಾ ಘಟಕಕ್ಕೆ ಶನಿವಾರ ಸಂಜೆ ಭೇಟಿ ನೀಡಿ ಪರಿಶೀಲಿಸಿದ ಬಳಿಕ ಮಾಧ್ಯಮ ದವರೊಂದಿಗೆ ಮಾತನಾಡಿದರು. ನಗರದ 6 ಎಕರೆ ಪ್ರದೇಶದಲ್ಲಿ ತ್ಯಾಜ್ಯ ಹಾಕಲಾಗುತ್ತಿದೆ. ತ್ಯಾಜ್ಯಗಳಿಂದ ಜನರಿಗೆ ಸಾಂಕ್ರಾಮಿಕ ರೋಗ ಹರಡದಂತೆ ವೈಜ್ಞಾನಿಕ ರೀತಿ ನಿರ್ವಹಣೆ ಮಾಡಬೇಕು. ಈ ನಿಟ್ಟಿನಲ್ಲಿ ಕಾರ್ಯಪ್ರವೃತ್ತರಾಗಲು ಅಧಿಕಾರಿಗಳಿಗೆ ಸೂಚಿಸಲಾಗಿದೆ ಎಂದರು.

ದೆಹಲಿಯಲ್ಲಿ ಆದ ಪರಿಸ್ಥಿತಿ ನಮ್ಮ ರಾಜ್ಯದಲ್ಲಿ ಆಗಬಾರದು. ಹೀಗಾಗಿ ವಾಯು ತಪಾಸಣೆ ಕೇಂದ್ರ ಆರಂಭಿಸಲಾಗುವದು. ಮಾಲಿನ್ಯ ನಿಯಂತ್ರಣ ಮಂಡಳಿ ಕಚೇರಿ ನಿರ್ಮಾಣಕ್ಕೆ ಜಾಗ ಗುರುತು ಮಾಡಲಾಗಿದ್ದು, ಸದ್ಯದಲ್ಲೇ ಕಟ್ಟಡ ಕಾಮಗಾರಿ ಆರಂಭಿಸಲಾಗುವದು ಎಂದು ಮಾಹಿತಿ ನೀಡಿದರು.

ಜಿಲ್ಲಾಧಿಕಾರಿ ಡಾ. ರಿಚರ್ಡ್ ವಿನ್ಸೆಂಟ್ ಡಿಸೋಜ ಮಾತನಾಡಿ, ನಗರಸಭೆ, ಗ್ರಾಮ ಪಂಚಾಯಿತಿ, ಪಟ್ಟಣ ಪಂಚಾಯಿತಿಗಳಲ್ಲಿ ತ್ಯಾಜ್ಯವನ್ನು ಸೂಕ್ತ ರೀತಿಯಲ್ಲಿ ವಿಲೇವಾರಿ ಮಾಡಬೇಕು. ಇದಕ್ಕಾಗಿ ಆಯಾ ವ್ಯಾಪ್ತಿಗಳಲ್ಲಿ ಪ್ರತ್ಯೇಕವಾಗಿ ಜಮೀನು ಮೀಸಲಿಡಬೇಕು. ಇತ್ತೀಚಿನ ದಿನದಲ್ಲಿ ಕಾವೇರಿ ನದಿ ಕಲುಷಿತಗೊಳ್ಳುತ್ತಿದ್ದು, ಈ ನಿಟ್ಟಿನಲ್ಲಿ ಎಚ್ಚರವಹಿಸಿ ಸ್ವಚ್ಛತೆ ಕಾಪಾಡಬೇಕಿದೆ ಎಂದರು.

ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಸದಸ್ಯ ಕಾವೇರಪ್ಪ ಮಾತನಾಡಿ, ಮಂಡಳಿಯಿಂದ ಯಾವದೇ ಯಂತ್ರೋಪಕರಣ ಕೊಳ್ಳಲು ಹಣ ನೀಡುವದಿಲ್ಲ. ತ್ಯಾಜ್ಯ ಸಂಸ್ಕರಣಾ ಘಟಕದಿಂದ ಪರಿಸರಕ್ಕೆ ಯಾವದೇ ರೀತಿಯಲ್ಲಿ ತೊಂದರೆಯಾಗಬಾರದು. ಈ ಹಿನ್ನೆಲೆಯಲ್ಲಿ ವೈಜ್ಞಾನಿಕವಾಗಿ ಸಂಸ್ಕರಣೆ ಮಾಡಲು ಕಟ್ಟಡ, ತಡೆಗೋಡೆ ನಿರ್ಮಿಸಲು ನೆರವು ನೀಡುತ್ತಿರುವದಾಗಿ ತಿಳಿಸಿದರು.

ಎಂ.ಎಲ್.ಸಿ. ಶಾಂತೆಯಂಡ ವೀಣಾ ಅಚ್ಚಯ್ಯ, ಪರಿಸರ ಮಾಲಿನ್ಯ ನಿಯಂತ್ರಣ ಮಂಡಳಿ ಅಧಿಕಾರಿ ಗಣೇಶನ್, ಸದಸ್ಯ ಕಾವೇರಪ್ಪ, ನಗರಸಭೆ ಆಯುಕ್ತೆ ಬಿ. ಶುಭಾ ಮತ್ತಿತರರು ಹಾಜರಿದ್ದರು.