ಗೋಣಿಕೊಪ್ಪಲು, ಜ.24 : ಸರ್ಕಾರಿ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯ, ಬೆಂಗಳೂರು, ಶ್ರೀ ಶ್ರೀ ಆಯುರ್ವೇದ ವೈದ್ಯಕೀಯ ಕಾಲೇಜು, ಬೆಂಗಳೂರು, ಗೋಣಿಕೊಪ್ಪಲು ಪ್ರೌಢಶಾಲೆ, ಜನನಿ ಪೆÇಮ್ಮಕ್ಕಡ ಕೂಟ ಮತ್ತು ವಿವಿಧ ಸಂಘ ಸಂಸ್ಥೆಗಳ ಸಂಯುಕ್ತ ಆಶ್ರಯದಲ್ಲಿ ಗೋಣಿಕೊಪ್ಪಲಿನಲ್ಲಿ ಉಚಿತ ಆಯುರ್ವೇದ ದಂತ ತಪಾಸಣಾ ಶಿಬಿರ ಹಾಗೂ ಆರೋಗ್ಯವರ್ಧಿನಿ ಕಾರ್ಯಕ್ರಮವನ್ನು ಏರ್ಪಡಿಸಲಾಗಿದೆ.

ಅರವಳಿಕೆ ಔಷಧಿ (ಅನಸ್ತೇಶಿಯಾ) ನೀಡದೆ ಹಲ್ಲು ಕೀಳುವ ವಿಧಾನ, ದಂತ ಪಂಕ್ತಿಗಳ ಆರೋಗ್ಯ, ವಸಡುಗಳ ರೋಗ ನಿರೋಧಕ ಶಕ್ತಿಯನ್ನು ಹೆಚ್ಚಿಸುವದು, ‘ಜಾಲಂಧರ ಬಂಧ’ದ ಮೂಲಕ ಅರವಳಿಕೆ, ನೋವು, ರಕ್ತಸ್ರಾವ ಇಲ್ಲದೆ ಕ್ಷಣಾರ್ಧದಲ್ಲಿ ನೋವಿರುವ ಉಳುಕು ಹಲ್ಲು ಕೀಳಲು ಅವಕಾಶ, ಡಯಾಬಿಟೀಸ್ ಮತ್ತು ರಕ್ತದ ಏರೊತ್ತಡ ರೋಗಿಗಳಿಗೂ ಯಾವದೇ ಅಡ್ಡ ಪರಿಣಾಮ ಇಲ್ಲದೆ ಹಲ್ಲು ಕೀಳಿಸಲು ಸದವಕಾಶ, ಶಾಲಾ ಕಾಲೇಜು ವಿದ್ಯಾರ್ಥಿಗಳಿಗೆ, ಸಾರ್ವಜನಿಕರಿಗೆ ಬಾಯಿ ಮತ್ತು ಹಲ್ಲಿನ ಆರೋಗ್ಯದ ಕುರಿತು ಉಪನ್ಯಾಸ, ಉಚಿತ ತಪಾಸಣೆ, ಸಲಹೆ, ಮನೆಮದ್ದು ನಿರೂಪಣೆ ಇತ್ಯಾದಿ ಆರೋಗ್ಯವರ್ಧಿನಿ ಕಾರ್ಯಕ್ರಮವು ಗಣರಾಜ್ಯೋತ್ಸವ ಅಂಗವಾಗಿ ತಾ.26 ರಂದು ಬೆಳಿಗ್ಗೆ 11.30 ರಿಂದ ಅಪರಾಹ್ನ 4 ಗಂಟೆಯವರೆಗೂ ಗೋಣಿಕೊಪ್ಪಲು ಪ್ರೌಢಶಾಲಾ ಸಭಾಂಗಣದಲ್ಲಿ ಏರ್ಪಡಿಸಲಾಗಿದೆ.

ದೃವ್ಯಗುಣ ತಜ್ಞ, ನಿವೃತ್ತ ಆಯುರ್ವೇದ ವೈದ್ಯಕೀಯ ಮಹಾ ವಿದ್ಯಾಲಯದ ಪ್ರಾಂಶುಪಾಲ ಡಾ. ಸತ್ಯನಾರಾಯಣ ಭಟ್, ದಂತತಜ್ಞ ಡಾ. ಜೆ.ವಿವೇಕ್, ಶಲ್ಯತಂತ್ರ (ಸರ್ಜರಿ), ದೃವ್ಯಗುಣ ತಜ್ಞೆಯರಾದ ಡಾ. ಟಿ.ಚೈತ್ರ, ಡಾ. ಕೆ.ಎಂ.ವಿಜಯಲಕ್ಷ್ಮಿ ಹಾಗೂ ಸ್ನಾತಕೋತ್ತರ ವಿಭಾಗದ 21 ಮಂದಿ ತಜ್ಞ ವೈದ್ಯರ ತಂಡ ಕಾರ್ಯಕ್ರಮ ನಡೆಸಿಕೊಡಲಿದೆ.

ತಾ.27 ರಂದು ಆಯುರ್ವೇದ ತಜ್ಞ ವೈದ್ಯರ ತಂಡ ವೈಲ್ಡ್ ಲೈಫ್ ಫಸ್ಟ್ ಅಧ್ಯಕ್ಷ ಕೆ.ಎಂ.ಚಿಣ್ಣಪ್ಪ ಅವರ ನೇತೃತ್ವದಲ್ಲಿ ನಾಗರಹೊಳೆ ರಾಷ್ಟ್ರೀಯ ಉದ್ಯಾನದಲ್ಲಿ ಪ್ರಕೃತಿ ಶಿಬಿರದಲ್ಲಿ ಪಾಲ್ಗೊಳ್ಳಲಿದ್ದು, ಅಪೂರ್ವ ಗಿಡಮೂಲಿಕೆ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ತಾ.28 ರಂದು ಮಾಕುಟ್ಟ ವನ್ಯಜೀವಿ ವಲಯದಲ್ಲಿ (ಉರ್ಟಿ ಅರಣ್ಯ) ಚಾರಣ ಕಾರ್ಯಕ್ರಮದಲ್ಲಿ ವೈದ್ಯರ ತಂಡ ಪಾಲ್ಗೊಳ್ಳಲಿದ್ದು ವಿನಾಶದ ಅಂಚಿನಲ್ಲಿರುವ ಔಷಧಿ ಸಸ್ಯಗಳ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ.

ತಾ.29ರಂದು ಮಾಕುಟ್ಟ ಮೀಸಲು ಅರಣ್ಯ (ಕೆರ್ಟಿ ಅರಣ್ಯ ಶ್ರೇಣಿ) ಯಲ್ಲಿ ಆಯುರ್ವೇದ ವೈದ್ಯರ ತಂಡ ಅಮೂಲ್ಯ ಗಿಡಮೂಲಿಕೆ ಬಗ್ಗೆ ಮಾಹಿತಿ ಕಲೆ ಹಾಕಲಿದ್ದಾರೆ. ಮಾಕುಟ್ಟ ಗಿರಿಜನರ ಆರೋಗ್ಯ ತಪಾಸಣೆ ಕಾರ್ಯಕ್ರಮ ನಡೆಯಲಿದೆ.